ಚಾಮರಾಜನಗರ: ವರನಟ ಡಾ.ರಾಜ್‌ಕುಮಾರ್ ಅವರ ಮೊಮ್ಮಗ, ನಿರ್ಮಾಪಕ, ನಟ ರಾಘವೇಂದ್ರ ರಾಜ್‌ಕುಮಾರ್ ಅವರ ದ್ವಿತೀಯ ಪುತ್ರ ಯುವರಾಜ್ ಕುಮಾರ್ (ಗುರು ರಾಜ್‌ಕುಮಾರ್) ಮದುವೆ ಹಿನ್ನೆಲೆ ಯಲ್ಲಿ ಸಮೀಪದ ಗಾಜನೂರಿನ ರಾಜ್ ಮನೆಯಲ್ಲಿ ಎಣ್ಣೆಶಾಸ್ತ್ರ ಹಾಗೂ ಅರಿಶಿನ ಶಾಸ್ತ್ರ ಸೋಮವಾರ ನಡೆಯಿತು.
ಗಾಜನೂರಿನ ಡಾ.ರಾಜ್‌ಕುಮಾರ್ ಅವರ ಮನೆಯಲ್ಲಿ ಅವರ ಕುಟುಂಬ ವರ್ಗದವರ ಸಂಭ್ರಮದ ನಡುವೆ ವಿವಾಹಪೂರ್ವ ಅರಿಶಿನ ಶಾಸ್ತ್ರ ನಡೆಯಿತು.
ಮಧುಮಗ ಯುವರಾಜ್ ಅವರಿಗೆ ಎಣ್ಣೆ ಶಾಸ್ತ್ರ ಮತ್ತು ನಂತರ ಅರಿಶಿಣದ ಶಾಸ್ತ್ರವನ್ನು ಸುಮಾರು 2 ಗಂಟೆಗಳ ಕಾಲ ರಾಜ್ ಕುಟುಂಬ ಸದಸ್ಯರು ನೆರವೇರಿಸಿದರು.
ನಂತರ ಡಾ.ರಾಜ್ ದಂಪತಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಸಮೀಪವೇ ಇದ್ದ ರಾಜ್ ಅವರ ಜಮೀನಿನಲ್ಲಿ ಕಾಲ ಕಳೆದರು. ಕುಟುಂಬದವರೆಲ್ಲರೂ ಒಟ್ಟಿಗೆ ಊಟ ಮುಗಿಸಿ ಸಂಜೆ ಬೆಂಗಳೂರಿಗೆ ತೆರಳಿದರು. ಮದುವೆ ಇನ್ನೊಂದು ವಾರ ಇರುವ ಕಾರಣ ರಾಜ್ ಅವರ ಹುಟ್ಟೂರಾದ ಗಾಜನೂರಿನಲ್ಲಿ ಅರಿಶಿನ ಶಾಸ್ತ್ರ ನೆರವೇರಿಸಲಾಯಿತು. ರಾಘವೇಂದ್ರ ರಾಜ್‌ಕುಮಾರ್, ಪತ್ನಿ ಮಂಗಳಾ, ಹಿರಿಯ ಪುತ್ರ ವಿನಯ್ ರಾಜ್‌ಕುಮಾರ್, ರಾಜ್ ಪುತ್ರಿಯರಾದ ಲಕ್ಷ್ಮಿ, ಪೂರ್ಣಿಮಾ, ಗಾಜನೂರಿನ ಗೋಪಾಲ್, ನಿರ್ದೇಶಕ ಲಕ್ಕಿ ಗೋಪಾಲ್ ಮತ್ತು ರಾಜ್ ಕುಟುಂಬದ ಸದಸ್ಯರು ಭಾಗವಹಿಸಿದ್ದರು.