ಥಾಣೆ : 6 ಐಪಿಎಲ್ ಪಂದ್ಯಗಳಿಗೆ ಬೆಟ್ ಕಟ್ಟಿರುವುದನ್ನು ಬಾಲಿವುಡ್ ನಟ, ನಿರ್ಮಾಪಕ ಅರ್ಬಾಜ್ ಖಾನ್ ಪೊಲೀಸರ ತನಿಖೆ ವೇಳೆ ಒಪ್ಪಿಕೊಂಡಿರುವ ಬಗ್ಗೆ ವರದಿಯಾಗಿದೆ.
ಪೊಲೀಸ್ ಸಮನ್ಸ್ ಹಿನ್ನಲೆಯಲ್ಲಿ ಥಾಣೆಯ ಠಾಣೆಗೆ ಬಂದ ಅರ್ಬಾಜ್ ಪೊಲೀಸರ ಎದುರು ಹೇಳಿಕೆ ನೀಡಿರುವುದಾಗಿ ವರದಿಯಾಗಿದೆ.
ಬೆಟ್ಟಿಂಗ್ ಹಗರಣಕ್ಕೆ ಸಂಬಂಧಿಸಿ ಪೊಲೀಸರು ಕುಖ್ಯಾತ ಬುಕ್ಕಿ ಸೋನು ಜಲಾನ್ ಎಂಬಾತನನ್ನು ಶುಕ್ರವಾರ ಬಂಧಿಸಿದ್ದರು. ತನಿಖೆ ವೇಳೆ ಆತ ಅರ್ಬಾಜ್ ಖಾನ್ ಹೆಸರನ್ನು ಹೇಳಿದ್ದ . ಹಾಗಾಗಿ ಅರ್ಬಾಜ್ ಖಾನ್ ಗೆ ಶನಿವಾರ ಠಾಣೆಗೆ ಬಂದು ತನಿಖೆಯನ್ನು ಎದುರಿಸಲು ಸಮನ್ಸ್ ಜಾರಿ ಮಾಡಿದ್ದರು.
ಸೋನು ಜಲಾನ್ ಮತ್ತು ಅರ್ಬಾಜ್ ಅವರ ಮುಖಾಮುಖಿಯಾಗಿ ಕುಳ್ಳಿರಿಸಿ ಹೇಳಿಕೆಗಳನ್ನು ಪೊಲೀಸರು ಪಡೆದಿದ್ದಾರೆ ಎಂದು ತಿಳಿದು ಬಂದಿದೆ.
ಮೂಲಗಳ ಪ್ರಕಾರ ಜಲಾನ್ ಬಳಿ ಒಂದು ಬೆಟ್ಟಿಂಗ್ ವಿಡಿಯೋವಿದ್ದು, ಅದನ್ನು ಬಳಸಿಕೊಂಡು ಅರ್ಬಾಜ್‌ನನ್ನು ಬ್ಲಾಕ್ ಮೇಲ್ ಮಾಡುತ್ತಿದ್ದ. ಆದರೆ ಆ ವಿಡಿಯೋ ವಿವರಗಳು ಪೊಲೀಸರಿಗೆ ಲಭ್ಯವಾಗಿಲ್ಲ ಎನ್ನಲಾಗಿದೆ.
ಅರ್ಬಾಜ್ ಸುಮಾರು 2.80 ಕೋಟಿ ರೂಪಾಯಿ ಹಣವನ್ನು ಪ್ರಸಕ್ತ ಐಪಿಎಲ್ ಋತುವಿನಲ್ಲಿ ಕಳೆದುಕೊಂಡಿದ್ದಾನೆ ಎಂದು ತಿಳಿದು ಬಂದಿದೆ.
ಜಲಾನ್ ಗೂ ಭೂಗತ ಪಾತಕಿ ದಾವೂದ್ ಇಬ್ರಾಹಿಂಗೂ ನಂಟಿರುವ ಕಾರಣಕ್ಕೆ ಆತನ ಬಂಧನವಾಗಿದೆ.
ಪತ್ನಿ ದೂರವಾಗಲೂ ಕಾರಣ?
ಮಲೈಕಾ ಅರೋರಾ ಖಾನ್ ಅರ್ಬಾಜ್‌ಗೆ ವಿಚ್‌ಛೇಧನ ನೀಡಲೂ ಬೆಟ್ಟಿಂಗ್ ಚಟವೂ ಒಂದು ಕಾರಣ ಎನ್ನಲಾಗಿದೆ. ಅರ್ಬಾಜ್ ಬೆಟ್ಟಿಂಗ್ ಹುಚ್ಚಿನಿಂದ ಬೇಸತ್ತು ದೂರವಾಗಿದ್ದರು ಎನ್ನಲಾಗಿದೆ.