Advertisement

ತುಳು ಲಿಪಿ ಯೂನಿಕೋಡ್ ನಕಾಶೆ ಸೇರ್ಪಡೆಗೆ ಕ್ರಮ- ಸಚಿವ ಅರವಿಂದ ಲಿಂಬಾವಳಿ

06:16 PM Jul 20, 2021 | Team Udayavani |

ಬೆಂಗಳೂರು:  ಕರ್ನಾಟಕ ರಾಜ್ಯ ತುಳು ಸಾಹಿತ್ಯ ಅಕಾಡೆಮಿಯು ಬಹು ಕಾಳಜಿಯಿಂದ ಇತಿಹಾಸದ ದಾಖಲೆಗಳನ್ನು ಆಧರಿಸಿ ರೂಪಿಸಿದ ತುಳು ಲಿಪಿಯನ್ನು ಸೂಕ್ತವಾಗಿ ಯುನಿಕೋಡ್‌ ನಕಾಶೆ ಪಟ್ಟಿಗೆ ಸೇರಿಸಲು ಕ್ರಮ ಕೈಗೊಳ್ಳಲು ಅಕಾಡೆಮಿಗೆ ಸೂಚಿಸಲಾಗಿದೆ ಎಂದು ಅರಣ್ಯ, ಕನ್ನಡ ಮತ್ತು ಸಂಸ್ಕೃತಿ ಸಚಿವ ಅರವಿಂದ ಲಿಂಬಾವಳಿ ಹೇಳಿದ್ದಾರೆ.

Advertisement

ಈ ಕ್ರಮದಿಂದಾಗಿ ತುಳು ಲಿಪಿಯು ಯುನಿಕೋಡ್‌ ನಕಾಶೆಯಲ್ಲಿ ಅಧಿಕೃತವಾಗಿ ಸೇರ್ಪಡೆಯಾಗುವ ಕಾರ್ಯವು ವೇಗ ಪಡೆಯಲಿದೆ ಎಂದು ಹೇಳಿರುವ ಅವರು

ಸುಮಾರು ಹತ್ತು ವರ್ಷಗಳಿಂದ ತುಳು ಲಿಪಿಯನ್ನು ರೂಪಿಸುವ ಬಗ್ಗೆ ಹಲವು ಚರ್ಚೆಗಳು ನಡೆದಿದ್ದವು. ಅಂತಿಮವಾಗಿ ತುಳು ಭಾಷಾ ಮತ್ತು ಲಿಪಿ ತಜ್ಞರು ಸರ್ವಾನುಮತಿಯಿಂದ ರೂಪಿಸಿದ ತುಳು ಲಿಪಿ ಪಟ್ಟಿಯನ್ನು ಅಕಾಡೆಮಿಯು ಅಂಗೀಕರಿಸಿ ಯುನಿಕೋಡ್‌ ನಕಾಶೆಗೆ ಸೇರಿಸಲು ಅನುಮೋದನೆ ನೀಡಲಾಗಿದೆ ಎಂದು ಅವರು ತಿಳಿಸಿದರು.

ಈ ಹಿನ್ನೆಲೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ತುಳು ಲಿಪಿ ಪಟ್ಟಿಯನ್ನು ಪರಾಮರ್ಶಿಸಿ ಅನುಮೋದಿಸಲು ಮೈಸೂರಿನಲ್ಲಿರುವ  ಕೇಂದ್ರ ಸರ್ಕಾರದ  ಭಾರತೀಯ ಭಾಷಾ ಸಂಸ್ಥಾನಕ್ಕೆ ಕರ್ನಾಟಕ ಸರ್ಕಾರದಿಂದ ಕೋರಲಾಗಿತ್ತು.

ಇದನ್ನೂ ಓದಿ: ವಿಶಾಲ ಗಾಣಿಗ ಕೇಸ್ : ಪತಿ ರಾಮಕೃಷ್ಣ ಗಾಣಿಗ ಸಹಿತ ಸುಪಾರಿ ಕಿಲ್ಲರ್ ಬಂಧನ

Advertisement

ಭಾಭಾ ಸಂಸ್ಥಾನವು ಇದಕ್ಕಾಗಿ ಭಾಷಾ ತಜ್ಞರ ಸಮಿತಿಯನ್ನು ರಚಿಸಿ, ಚರ್ಚಿಸಿ ಲಿಪಿ ಪಟ್ಟಿಯನ್ನು ಅನುಮೋದಿಸಿ, ಯುನಿಕೋಡ್‌ ಕನ್ಸಾರ್ಶಿಯಂಗೆ ಸಲ್ಲಿಸಲು ಶಿಫಾರಸು ಮಾಡಿತು. ಅದರಂತೆ ಈಗ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ  ತುಳು ಅಕಾಡೆಮಿಗೆ ಪತ್ರ ಬರೆಯಲಾಗಿದೆ ಎಂದು ಸಚಿವ ಅರವಿಂದ ಲಿಂಬಾವಳಿ ಹೇಳಿದ್ದಾರೆ.

ಅಲ್ಲದೆ ಯುನಿಕೋಡ್‌ ನಕಾಶೆಗೆ ಸೇರಿಸಲು ಅಗತ್ಯವಿರುವ ಇನ್ನಿತರೆ ತಾಂತ್ರಿಕ ಅಂಶಗಳ ಬಗ್ಗೆಯೂ ಗಮನ ಕೊಡುವಂತೆ ತಿಳಿಸಲಾಗಿದೆ ಎಂದು ಅವರು ತಿಳಿಸಿದರು.

ತುಳು ಲಿಪಿಯನ್ನು ಯುನಿಕೋಡ್‌ ನಕಾಶೆಗೆ ತಕ್ಕಂತೆ ರೂಪಿಸುವಲ್ಲಿ ಶ್ರಮವಹಿಸಿದ ಎಲ್ಲ ತಜ್ಞರಿಗೂ ಸಚಿವ ಅರವಿಂದ ಲಿಂಬಾವಳಿ ಅಭಿನಂದನೆ ಸಲ್ಲಿಸಿದ್ದಾರೆ.

ಡಿಜಿಟಲ್‌ ವೇದಿಕೆಗಳಲ್ಲಿ, ಮುದ್ರಿತ ಸಾಹಿತ್ಯದಲ್ಲಿ, ಪ್ರಚಾರ ಸಾಹಿತ್ಯದಲ್ಲಿ – ಹೀಗೆ ತುಳು ಲಿಪಿಯು ಹೆಚ್ಚು ಹೆಚ್ಚು ಬಳಕೆಗೆ  ಬಂದರೆ ಲಿಪಿಯನ್ನು ರೂಪಿಸಿದ್ದಕ್ಕೆ ನ್ಯಾಯ  ಒದಗಿಸಿದಂತಾಗುತ್ತದೆ ಎಂದಿರುವ ಅವರು

ಕರ್ನಾಟಕದ ಇತಿಹಾಸದಲ್ಲಿ ಒಂಬತ್ತು  ಶತಮಾನಗಳ  ಅತಿದೀರ್ಘವಾದ ಆಡಳಿತವನ್ನು ನಡೆಸಿದ ಖ್ಯಾತಿಯನ್ನು ಹೊಂದಿದ  ತುಳು ಸಂಸ್ಕೃತಿಯ ಪ್ರತೀಕವಾದ ತುಳು ಲಿಪಿಯು ಯುನಿಕೋಡ್‌ಗೆ  ಸೇರುತ್ತಿರುವುದಕ್ಕೆ ಲಕ್ಷಾಂತರ ತುಳು ಭಾಷಿಗರು ತೋರಿದ  ಸಂಭ್ರಮದಲ್ಲಿ ಭಾಗಿಯಾಗಲು ನನಗೂ ಹರ್ಷವಾಗುತ್ತಿದೆ ಎಂದು ತಮ್ಮ ಸಂತಸವನ್ನು ಹಂಚಿಕೊಂಡಿದ್ದಾರೆ.

ಕನ್ನಡ ನಾಡಿನ ಉಳಿದೆಲ್ಲ ಭಾಷೆಗಳಂತೆಯೇ ತುಳು ಭಾಷೆ, ಸಂಸ್ಕೃತಿಯ ಉಳಿವು, ಬೆಳವಣಿಗೆಗಾಗಿ ನಮ್ಮ ಸರ್ಕಾರದ ಪ್ರಯತ್ನವು ನಿರಂತರವಾಗಿ ನಡೆಯುತ್ತದೆ ಎಂದು ಸಚಿವ ಅರವಿಂದ ಲಿಂಬಾವಳಿ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next