Advertisement

Aranthodu: ದೊಡ್ಡೇರಿ ಶಾಲೆ ಮಕ್ಕಳಿಗೆ ಅಕ್ಷರ ದಾಸೋಹ ಕಟ್ಟಡದ ಜಗಲಿಯೇ ಕ್ಲಾಸ್‌ರೂಮ್‌!

12:53 PM Sep 18, 2024 | Team Udayavani |

ಅರಂತೋಡು: ಅಜ್ಜಾವರ ಗ್ರಾಮದ ದೊಡ್ಡೇರಿ ಕಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಕಳೆದ ಎರಡು ವರ್ಷಗಳಿಂದ ಅಕ್ಷರ ದಾಸೋಹ ಕೊಠಡಿಯ ಜಗುಲಿಯೇ ಕ್ಲಾಸ್‌ ರೂಮ್‌ ಆಗಿದೆ! ಇದಕ್ಕೆ ಕಾರಣ, ಎರಡು ವರ್ಷಗಳ ಹಿಂದೆ ಆರಂಭಗೊಂಡ ಶಿಥಿಲ ಕಟ್ಟಡದ ದುರಸ್ತಿ ಕಾಮಗಾರಿ ಇನ್ನೂ ಮುಗಿಯದಿರುವುದು!

Advertisement

2 ವರ್ಷದ ಹಿಂದೆ ಶಾಲೆ ಕಟ್ಟಡದ ಹಿಂಬದಿ ಗೋಡೆ ಸಂಪೂರ್ಣ ಶಿಥಿಲಗೊಂಡಿತ್ತು. ಆಗ ಮಕ್ಕಳನ್ನು ಅಕ್ಷರ ದಾಸೋಹ ಕಟ್ಟಡದ ಜಗಲಿಗೆ ಸ್ಥಳಾಂತರ ಮಾಡಲಾಗಿತ್ತು.

ಆಗ ಸಚಿವರಾಗಿದ್ದ ಎಸ್‌.ಅಂಗಾರ ಅವರು ಶಾಲೆ ದುರಸ್ತಿಗಾಗಿ ಪ್ರಾಕೃತಿಕ ವಿಕೋಪ ಯೋಜನೆಯಲ್ಲಿ 7 ಲಕ್ಷ ರೂ.ಅನುದಾನ ಮಂಜೂರು ಮಾಡಿಸಿದ್ದರು. ಅದರಲ್ಲಿ ಶಾಲೆಯ ಗೋಡೆಯನ್ನು ಸಂಪೂರ್ಣ ಕೆಡವಿ ಹೊಸ ಗೋಡೆ ನಿರ್ಮಿಸಲಾಯಿತು. ಹಳೆಯ ಪಕ್ಕಾಸು, ಹಂಚು ಬಳಸಿಕೊಂಡು ಮೇಲ್ಛಾವಣಿ ಮಾಡಲಾಯಿತು, ಆದರೆ, ನೆಲಕ್ಕೆ ಟೈಲ್ಸ… ಅಳವಡಿಕೆ ಆಗಿಲ್ಲ. ಕಿಟಕಿ ಜೋಡಣೆ, ಕರಿ ಹಲಗೆ ಜೋಡಣೆ ಬಾಕಿ ಉಳಿದಿವೆ. ಹೀಗಾಗಿ ಮಕ್ಕಳು ಈ ಶೈಕ್ಷಣಿಕ ವರ್ಷವನ್ನು ಕೂಡಾ ಅಕ್ಷರ ದಾಸೋಹ ಕಟ್ಟಡದ ಜಗಲಿಯಲ್ಲೇ ಕಳೆಯುವಂತಾಗಿದೆ. ತುರ್ತಾಗಿ ಶಾಲೆ ದುರಸ್ತಿ ಮಾಡಿ ಎನ್ನುವುದು ಮಕ್ಕಳ ಪೋಷಕರ ಆಗ್ರಹ.

ಎಲ್ಲ ಕ್ಲಾಸಿನ ಮಕ್ಕಳಿಗೆ ಒಟ್ಟಿಗೇ ಪಾಠ
ಈ ಶಾಲೆಯಲ್ಲಿ 15 ಮಕ್ಕಳಿದ್ದಾರೆ. ಈ ವರ್ಷ ದಾಖಲಾತಿ ಹೆಚ್ಚಿದೆ. ಶಾಲೆಯ ಪೀಠೊಪಕರಣಗಳನ್ನು ಪಕ್ಕದ ಕಾಂತಮಂಗಲ ಶಾಲೆಯಲ್ಲಿ ಇಡಲಾಗಿದೆ. ಇಲ್ಲಿಗೆ ಮರಳಿ ತಂದರೂ ಇಡಲು ಜಾಗವಿಲ್ಲ. ಆದ್ದರಿಂದ ಮಕ್ಕಳು ನೆಲದಲ್ಲೇ ಕುಳಿತು ಪಾಠ ಕೇಳುತ್ತಿದ್ದಾರೆ. ಶಿಕ್ಷಕರು ನೆಲದಲ್ಲೇ ಕುಳಿತು ಪಾಠ ಮಾಡುತ್ತಿದ್ದಾರೆ. ಜಗಲಿ ಸಣ್ಣದಾಗಿರುವುದರಿಂದ ಒಂದರಿಂದ ಐದನೇ ಕ್ಲಾಸ್‌ವರೆಗಿನ ಎಲ್ಲರಿಗೂ ಒಟ್ಟಿಗೇ ಪಾಠ ನಡೆಯುತ್ತಿದೆ!

Advertisement

ಅನುದಾನ ಇರಿಸಲಾಗಿದೆ
ದೊಡ್ಡೇರಿ ಶಾಲೆಯ ಉಳಿದ ಕಾಮಗಾರಿಗೆ ತಾ.ಪಂ.ನಲ್ಲಿ ಅನುದಾನ ಇರಿಸಲಾಗಿದೆ.ಆದಷ್ಟು ಬೇಗ ಉಳಿದ ಕಾಮಗಾರಿಗಳನ್ನು ಮುಗಿಸುತ್ತೇವೆ.
-ಮಣಿಕಂಠ, ಜಿ.ಪಂ. ಸಹಾಯಕ ಅಭಿಯಂತ

ಜಗಲಿಯಲ್ಲಿ ಪಾಠ ಕೇಳುವ ಪರಿಸ್ಥಿತಿ
ನಮ್ಮ ಮಕ್ಕಳು ಎರಡು ವರ್ಷದಿಂದ ಜಗಲಿಯಲ್ಲಿ ಪಾಠ ಕೇಳುವ ಪರಿಸ್ಥಿತಿ ಎದುರಾಗಿದೆ. ತತ್‌ಕ್ಷಣ ಶಾಲೆಯ ಕಾಮಗಾರಿ ಮುಗಿಸಿಕೊಡಿ.
-ದಯಾನಂದ ಡಿ.ಕೆ., ಎಸ್‌ಡಿಎಂಸಿ ಅಧ್ಯಕ್ಷರು

-ತೇಜೇಶ್ವರ್‌ ಕುಂದಲ್ಪಾಡಿ

Advertisement

Udayavani is now on Telegram. Click here to join our channel and stay updated with the latest news.

Next