Advertisement
ಹೌದು, ಮೈಸೂರು ಮಲ್ಲಿಗೆ ಎನ್ನುವ ಕಿರುನಾಟಕದ ಮೂಲಕ ಒಬ್ಬ ಕವಿಯ ಬದುಕಿನ ಕಾಲ್ಪನಿಕ ಆದರೆ, ನಿಜಬದುಕಿಗೆ ಹತ್ತಿರವೆನಿಸುವಂತಹ ಉತ್ತಮ ಕತೆಯನ್ನು ಅಭಿನಯಿಸಿ ತೋರಿಸಿದ್ದು ಕುಂದಾಪುರ ತಾಲೂಕಿನ ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು.
Related Articles
Advertisement
ಮೂವತ್ತೈದು ನಿಮಿಷಗಳ ಕಿರುನಾಟಕದಲ್ಲಿ ದೊಡ್ಡದೊಂದು ಕತೆಯನ್ನು ಕಟ್ಟಿಕೊಡುವ ಪ್ರೇಕ್ಷಕರನ್ನು ಚಿಂತನೆಗೆ ಹಚ್ಚುವ ಪ್ರಯತ್ನ ಸಂಪೂರ್ಣ ಯಶಸ್ವಿಯಾಯಿತು. ಶಾಲಾ ವಾರ್ಷಿಕೋತ್ಸವದ ಸಂದರ್ಭವಾದ್ದರಿಂದ ಸಂಜೆಯ ಬೆಳಕಿನಲ್ಲಿ ಕೃತಕ ನೆರಳು ಬೆಳಕಿನ ನಿರೀಕ್ಷಿತ ಸಂಯೋಜನೆ ಸಾಧ್ಯವಾಗಲಿಲ್ಲ. ಧ್ವನಿವರ್ಧಕಗಳ ಗುಣಮಟ್ಟ ಮತ್ತಷ್ಟು ಉತ್ತಮವಾಗಿರಬೇಕಿತ್ತು. ಒಂದೆರಡು ಕಡೆ ಸಣ್ಣ ತಪ್ಪುಗಳಾದರೂ ಕೂಡ ಅದನ್ನು ತೋರಗೊಡದೆ ಅಭಿನಯದ ಮೂಲಕವೇ ಸರಿದೂಗಿಸಿಕೊಂಡಿದ್ದು ಮಕ್ಕಳ ಸಾಮರ್ಥ್ಯಕ್ಕೆ ಸಾಕ್ಷಿ. ಒಟ್ಟಿನಲ್ಲಿ ಒಂದು ಉತ್ತಮವಾದ ವಿಭಿನ್ನ ನಾಟಕವನ್ನು ನೋಡಿದ ಧನ್ಯತೆ ಪ್ರೇಕ್ಷಕರಲ್ಲಿ ಮೂಡಿತ್ತು.
ನಾಟಕದ ಪಾತ್ರಧಾರಿಗಳಾಗಿ ಆಶಾ, ಅಕ್ಷತಾ, ನಿಶ್ಮಿತಾ, ದೀûಾ, ರಜನಿ, ಸ್ನೇಹಾ, ವಾಸುಕಿ, ಸಂಜಯ್, ಅಶ್ಮಿತಾ ಮತ್ತು ರಂಜಿನಿ ತಮ್ಮ ಪ್ರೌಢ ಅಭಿನಯದಿಂದ ಪ್ರೇಕ್ಷಕರ ಮನ ಗೆದ್ದರು. ಹೆಚ್ಚಿನ ಉಪಕರಣಗಳ ಬಳಕೆ ಇಲ್ಲದೆ ನಾಟಕದ ವೇದಿಕೆಯನ್ನು ಇಬ್ಭಾಗವಾಗಿ ಬಳಸಿಕೊಂಡು ವಿವಿಧ ರೂಪಕಗಳನ್ನು ಬಿಂಬಿಸಿದ್ದು ಗಮನ ಸೆಳೆಯಿತು. ಒಂದೇ ಪಾತ್ರಗಳನ್ನು ಇಬ್ಬರು ಅಭಿನಯಿಸಿದ್ದು, ಮುಖ್ಯ ಪಾತ್ರಧಾರಿಗಳನ್ನು ಸ್ತಬ್ಧವಾಗಿಸಿ ಹಿನ್ನೆಲೆಯಲ್ಲಿ ಹಳೆಯ ಕತೆಯನ್ನು ದೃಶ್ಯಗಳ ಮೂಲಕ ಕಟ್ಟಿಕೊಡುವ ಪ್ರಯತ್ನಗಳು ನಾಟಕದ ಮೆರುಗನ್ನು ಹೆಚ್ಚಿಸಿದ್ದವು. ಒಂದು ಕಡೆ ಮದುಮಕ್ಕಳ ಸರಸ, ಇನ್ನೊಂದು ಕಡೆ ತಾಯಿಯ ಸಾವು ಎರಡನ್ನೂ ಒಂದೇ ಸಲಕ್ಕೆ ಅಭಿನಯಿಸಿದ ದೃಶ್ಯ ವಿಶೇಷವಾಗಿ ಮೂಡಿಬಂದು ಜನರ ಹೃದಯಗಳನ್ನು ತಟ್ಟಿತ್ತು.
ಕೇವಲ ಸಾಮಾಜಿಕ ಹಾಸ್ಯ ನಾಟಕಗಳಿಗೆ ಹೆಚ್ಚಿನ ಮನ್ನಣೆ ಸಿಗುತ್ತಿರುವ ಶಾಲಾ-ಕಾಲೇಜುಗಳ ವಾರ್ಷಿಕ ಸಮಾರಂಭಗಳಲ್ಲಿ ಇಂತಹ ಸೃಜನಶೀಲ ಗಂಭೀರ ಚಿಂತನೆಗಳ ನಾಟಕದ ಮೂಲಕವೂ ಜನರನ್ನು ಗೆಲ್ಲಬಹುದು ಎಂದು ತೋರಿಸಿಕೊಟ್ಟ ಶ್ರೇಯಸ್ಸು ನಿರ್ದೇಶಕ ನರೇಂದ್ರ ಎಸ್. ಗಂಗೊಳ್ಳಿ ಮತ್ತು ಅವರ ಪ್ರತಿಭಾವಂತ ವಿದ್ಯಾರ್ಥಿ ತಂಡಕ್ಕೆ ಸಲ್ಲುತ್ತದೆ. ಭಾವಗೀತೆಗಳನ್ನು ಅರ್ಥಪೂರ್ಣವಾಗಿ ಜೋಡಿಸಿ ಅದಕ್ಕೊಂದು ಕತೆ ಹೆಣೆದು ಪ್ರೇಕ್ಷಕರನ್ನು ರಂಜಿಸುವ ಮತ್ತು ಚಿಂತನೆಗೆ ಹಚ್ಚುವ ಈ ತೆರನಾದ ಹೊಸ ಪ್ರಯತ್ನಗಳು ಅಭಿನಂದನೀಯ. ನಾಟಕದ ಮುನ್ನ ಕವಿಗಳನ್ನು , ಹಿನ್ನೆಲೆಗಾಯಕರನ್ನು ಸ್ಮರಿಸಿಕೊಂಡು ಕೃತಜ್ಞತೆ ಅರ್ಪಿಸಿದ್ದು ಉತ್ತಮ ಲಕ್ಷಣ.
ವಿದ್ಯಾರ್ಥಿಗಳಲ್ಲಿ ಜನರಲ್ಲಿ ಉತ್ತಮ ವಿಚಾರಗಳನ್ನು ಪ್ರಚೋದಿಸುವ ಹಿರಿಯ ಸಾಹಿತಿಗಳ ಬಗೆಗೆ ಗೌರವ ಮೂಡಿಸುವ ಇಂತಹ ಕಲಾತ್ಮಕ ನಾಟಕಗಳಿಗೆ ಮತ್ತಷ್ಟು ಪ್ರೋತ್ಸಾಹ ಸಿಗಬೇಕಿದೆ. ಸಿಗಲಿ ಎನ್ನುವುದು ಆಶಯ.
– ಸುಚಿತ್ರಾ ಕುಂದಾಪುರ