ಪಡುಬಿದ್ರಿ : ಔರಾದ್ಕರ್ ವರದಿಯು ಹೊಸದಾಗಿ ನೇಮಕಗೊಂಡಿರುವ ಪೊಲೀಸ್ ಸಿಬಂದಿಗೆ ಮಾತ್ರ ಅನ್ವಯವಾಗುವಂತಿದೆ. ಹಿರಿಯ ಸಿಬಂದಿಗೆ ಕೆಲವೊಂದು ಭತ್ತೆಗಳನ್ನು ನೀಡುವ ಮೂಲಕ ವೇತನ ತಾರತಮ್ಯ ನೀಗಿಸಲು ಯತ್ನಿಸಲಾಗಿದೆ ಎಂದು ರಾಜ್ಯ ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದರು.
ಉಚ್ಚಿಲದ ಶ್ರೀ ಮಹಾಲಕ್ಷ್ಮೀ ದೇವಸ್ಥಾನಕ್ಕೆ ಆಗಮಿಸಿದ ಸಂದರ್ಭ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ವರದಿಯ ಎಲ್ಲ ಅಂಶಗಳನ್ನು ಜಾರಿಗೊಳಿಸಿದಾಗ ಸರಕಾರಕ್ಕೆ ಬಹಳಷ್ಟು ಆರ್ಥಿಕ ಹೊರೆ ಬೀಳಲಿದೆ. ಕಾನ್‌ಸ್ಟೆಬಲ್, ದಫೇದಾರ್, ಎಎಸ್‌ಐ, ಪಿಎಸ್‌ಐಗಳಿಗೆ ಭತ್ತೆಗಳನ್ನು ಏರಿಸಿ ಸರಿ ಪಡಿಸಿಕೊಳ್ಳಲು ಯತ್ನಿಸಲಾಗಿದೆ. ಶೇ. 25ರಷ್ಟನ್ನು ಇನ್ನು ಸರಿದೂಗಿಸಬೇಕಿದೆ. ವಿತ್ತ ಖಾತೆಯು ಪೂರ್ಣ ಅನುಮತಿಯನ್ನೂ ನೀಡಿಲ್ಲ. ಮಾತುಕತೆ ಈಗಲೂ ನಡೆಯುತ್ತಿದೆ ಎಂದರು.
ತಾಂತ್ರಿಕ ತೊಡಕು
ಮಹಿಳಾ ಠಾಣೆಗಳನ್ನು ಹೆಚ್ಚಿಸುವ ನಿಟ್ಟಿನಲ್ಲಿ ಸಿಬಂದಿಯನ್ನು ಹೊಂದಾಣಿಕೆ ಮಾಡಿ ಕೊಳ್ಳಲು ಮಹಿಳಾ ಪೊಲೀಸರಿಗೆ ಭಡ್ತಿ ನೀಡಿರುವುದರಿಂದ ಪುರುಷ ಸಿಬಂದಿಗೆ ವೇತನ ತಾರತಮ್ಯವಾಗಿಲ್ಲವೇ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಮಹಿಳಾ ಠಾಣೆಗಳಿಗೆ ಸಿಬಂದಿ ನೇಮಕಾತಿ ಪ್ರತ್ಯೇಕವಾಗಿಯೇ ನಡೆಯುತ್ತದೆ. ಹಾಗಾಗಿ ವೇತನ ತಾರತಮ್ಯ, ವ್ಯತ್ಯಾಸ ಆಗಿದೆ. ಇಲಾಖೆಯಲ್ಲಿರುವ ಸೇವಾ ಹಿರಿತನದ ಪುರುಷ ಸಿಬಂದಿಗೆ ತಾರತಮ್ಯ ಅನಿಸುತ್ತದೆ. ಇದು ಸೈಬರ್ ವಿಭಾಗದಲ್ಲೂ ಇದೆ. ಆದರೆ ಅಲ್ಲಿ ಸಿಬಂದಿ ಅಲ್ಪ ಪ್ರಮಾಣದಲ್ಲಿರುವುದರಿಂದ ಭಡ್ತಿ ಬೇಗ ಆಗುತ್ತದೆ. ಇವುಗಳನ್ನೆಲ್ಲ ಸರಿಪಡಿಸಲು ತಾಂತ್ರಿಕ ತೊಡಕುಗಳೂ ಇವೆ ಎಂದರು. ಶಾಸಕ ಲಾಲಾಜಿ ಮೆಂಡನ್, ಕಾಪು ಕ್ಷೇತ್ರ ಬಿಜೆಪಿ ಅಧ್ಯಕ್ಷ ಶ್ರೀಕಾಂತ್ ನಾಯಕ್, ಕಾರ್ಯದರ್ಶಿ ಗೋಪಾಲಕೃಷ್ಣ ರಾವ್ ಮಟ್ಟು ಉಪಸ್ಥಿತರಿದ್ದರು.
Related Articles
ಇದನ್ನೂ ಓದಿ: ಆಧಾರ್ ಸುರಕ್ಷಿತವಾಗಿಟ್ಟುಕೊಳ್ಳಿ…ಕಳೆದು ಹೋದರೆ ಏನು ಮಾಡಬೇಕು? ಇಲ್ಲಿದೆ ಮಾಹಿತಿ…