Advertisement
ಅಡಿಕೆಗೆ ಬೇಡಿಕೆ ಹೆಚ್ಚಳಉತ್ತರ ಭಾರತದ ವರ್ತಕರು ಬಿಳಿ ಅಡಿಕೆ ಖರೀದಿಯಲ್ಲಿ ತೊಡಗಿರುವುದು ಧಾರಣೆ ಚೇತರಿಕೆಗೆ ಪ್ರಮುಖ ಕಾರಣ. ಹೊಸ ತೆರಿಗೆ ವ್ಯವಸ್ಥೆಗೆ ಹೊಂದಿಕೊಂಡಿರುವುದು, ಗೋದಾಮುನಲ್ಲಿ ಸ್ಟಾಕ್ ಖಾಲಿ ಆಗುತ್ತಿರುವುದರಿಂದ ಮಾರುಕಟ್ಟೆಯಲ್ಲಿ ಅಡಿಕೆಗೆ ಬೇಡಿಕೆ ಹೆಚ್ಚಾಗಿದೆ. ಉತ್ತರ ಭಾರತದಲ್ಲಿ ಪಾನ್ ಮಸಾಲಗಳಿಗೆ ಮಂಗಳೂರು ಚಾಲಿ ಅಡಿಕೆ ಹೆಚ್ಚಿನ ಪ್ರಮಾಣದಲ್ಲಿ ಬಳಕೆ ಆಗುವುದೂ ಹಾಗೂ ಅಲ್ಲಿ ಹಬ್ಬ ಹರಿದಿನಗಳು ಆರಂಭಗೊಳ್ಳಲಿದ್ದು, ಅಡಿಕೆ ಆಧಾರಿತ ಉತ್ಪನ್ನಗಳಿಗೆ ಬೇಡಿಕೆ ದ್ವಿಗುಣಗೊಳ್ಳಲಿರುವುದು ಕೂಡ ಬೆಲೆ ಏರಿಕೆಗೆ ಕಾರಣ ಅನ್ನುತ್ತಾರೆ ಮಾರುಕಟ್ಟೆ ತಜ್ಞರು.
ಕೃಷಿ ಮಾರುಕಟ್ಟೆ ತಜ್ಞರು ಹಾಗೂ ಅಡಿಕೆ ಖರೀದಿ ಸಹಕಾರಿ ಸಂಸ್ಥೆಗಳ ಲೆಕ್ಕಚಾರದಲ್ಲಿ ಹಳೆ ಅಡಿಕೆಗೆ ಆಗಸ್ಟ್ ಮೊದಲ ವಾರದಲ್ಲಿ 300 ರೂ. ಗಡಿ ದಾಟುವ ನಿರೀಕ್ಷೆ ಇದೆ. ಬಿಳಿ ಚೀಟಿ ವ್ಯವಹಾರದಾರರು, ಬೆಲೆ ಸ್ಥಿರವಾಗಿರಿಸಿ, ಅಡಿಕೆ ಖರೀದಿಸುವ ತಂತ್ರಗಾರಿಕೆ ಮಾಡುವ ಸಾಧ್ಯತೆ ಇರುವುದರಿಂದ ಅಡಿಕೆ ಖರೀದಿಸುವ ಅಧಿಕೃತ ಸಂಸ್ಥೆಗಳು ಸೂಕ್ತ ಧಾರಣೆ ನೀಡಿ ಬೆಳೆಗಾರರಿಂದ ಅಡಿಕೆ ಖರೀದಿಸುವ ಯೋಚನೆ ಮಾಡಿದೆ ಎನ್ನಲಾಗಿದೆ. ಈ ನಡುವೆ ಬೆಳೆಗಾರರು ಬೆಲೆ ಏರಿದರೂ ನಿರೀಕ್ಷಿತ ಪ್ರಮಾಣದಲ್ಲಿ ಅಡಿಕೆ ಮಾರುಕಟ್ಟೆಗೆ ಆವಕವಾಗುತ್ತಿಲ್ಲ. ಮೊದಲ ಹಂತದಲ್ಲಿ ಸಿಂಗಲ್ ಚೋಲ್ ಧಾರಣೆ 10ರಿಂದ 17 ರೂ.ನಷ್ಟು ಏರಿಕೆ ಕಂಡಿದೆ. ಅದು ಆಗಸ್ಟ್‌ನಲ್ಲಿ 300ಕ್ಕೆ ಏರಲಿದೆ. ಇನ್ನು ಹೊಸ ಅಡಿಕೆ ಧಾರಣೆ ಸ್ಥಿರವಾಗಿದ್ದು, ಆಗಸ್ಟ್ ಮೊದಲ ವಾರದಲ್ಲಿ ಇದರ ಧಾರಣೆಯಲ್ಲೂ ಏರಿಕೆ ಕಾಣಲಿದೆ ಎನ್ನುತ್ತದೆ ಮಾರುಕಟ್ಟೆ ಮೂಲಗಳು. ಎಪಿಎಂಸಿ ಸೆಸ್ ರದ್ದು ಲಾಭ
ರಾಷ್ಟದಲ್ಲೆಡೆ ಜಿಎಸ್‌ಟಿ ಜಾರಿ ಆದ ಕಾರಣ, ಏಕ ತೆರಿಗೆ ಪದ್ಧತಿ ಅಸ್ತಿತ್ವಕ್ಕೆ ಬಂದಿದೆ. ಹಾಗಾಗಿ ಉತ್ತರ ಭಾರತದಲ್ಲಿ ಎಪಿಎಂಸಿ ವ್ಯವಸ್ಥೆಗಳಲ್ಲಿ ವಿಧಿಸುವ ಸೆಸ್ ರದ್ದು ಪಡಿಸುವ ಆಗ್ರಹ ಕೇಳಿ ಬಂದಿದೆ. ಕೇರಳ, ಮಹಾರಾಷ್ಟ್ರಗಳ ಆ ನಿರ್ಧಾರ ಕೈಗೊಂಡಿದ್ದು, ಉತ್ತರ ಪ್ರದೇಶದಲ್ಲಿ ಆಗ್ರಹ ಕೇಳಿ ಬಂದಿದೆ. ಇದರಿಂದ ಅಡಿಕೆ ಮಾರಾಟಗಾರರ ಮೇಲಿನ ತೆರಿಗೆ ಹೊರೆ ಕಡಿಮೆ ಆಗಿ ಧಾರಣೆ ಏರಿಕೆ ಕಂಡು, ಬೆಳೆಗಾರರಿಗೆ ಲಾಭವಾಗಲಿದೆ.
Related Articles
ಕಳೆದ ಮೂರು ವರ್ಷದ ಅವಧಿಯಲ್ಲಿ ಜೂನ್ ತಿಂಗಳಿನಲ್ಲಿ ಹಳೆ ಅಡಿಕೆ-ಹೊಸ ಅಡಿಕೆ ಧಾರಣೆ ಏರಿಳಿತಗೊಂಡಿರುವುದನ್ನು ಅಂಕಿ ಅಂಶ ಹೇಳುತ್ತದೆ. ಹಳೆ ಅಡಿಕೆಗೆ 2014ರಲ್ಲಿ 222, 2015ರಲ್ಲಿ 330, 2016ರಲ್ಲಿ 300, 2017ರಲ್ಲಿ 265 ಹಾಗೂ ಹೊಸ ಅಡಿಕೆಗೆ 200, 250, 235 ಹಾಗೂ 2017ರಲ್ಲಿ 240 ರೂ. ಧಾರಣೆ ಹೊಂದಿತ್ತು. ಅಂದರೆ ಕಳೆದ ಧಾರಣೆ ಲೆಕ್ಕಚಾರದಲ್ಲಿ ಈ ಬಾರಿ ಹಳೆ ಅಡಿಕೆ ಧಾರಣೆ ಇಳಿಕೆ ಆಗಿದ್ದರೂ ಈಗ ಚೇತರಿಕೆ ಹಂತದಲ್ಲಿದೆ. ಹೊಸ ಅಡಿಕೆ ಧಾರಣೆ 240ರಲ್ಲಿ ಸ್ಥಿರವಾಗಿದ್ದರೂ ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ 5 ರೂ. ನಷ್ಟು ಹೆಚ್ಚಳ ಕಂಡಿದೆ.
Advertisement
ಸ್ಥಿರ ಧಾರಣೆಯ ಬೇಡಿಕೆಅಡಿಕೆಗೆ ಸ್ಥಿರ ಧಾರಣೆ ಬೇಕು ಎನ್ನುವ ಬೇಡಿಕೆಗೆ ಸರಕಾರ, ಅಡಿಕೆ ಖರೀದಿ ಸಂಸ್ಥೆಗಳು ಸ್ಪಂದಿಸುತ್ತಿಲ್ಲ ಎನ್ನುವ ಆಪಾದನೆ ಬೆಳೆಗಾರರದ್ದು. ಅಡಿಕೆ ತೋಟ ನಿರ್ವಹಣೆಗೆ ಬಳಸುವ ಗೊಬ್ಬರ, ಔಷಧ ಸಿಂಪಡಣೆ ಖರ್ಚು-ವೆಚ್ಚ ವರ್ಷಂಪ್ರತಿ ದುಪ್ಪಾಟಾಗುತ್ತದೆ. ಧಾರಣೆ ಇಳಿಮುಖ ಆಗುತ್ತಿರುವುದು ಸ್ಥಿರ ಧಾರಣೆ ನಿಗದಿ ಬೇಡಿಕೆಗೆ ಇರುವ ಪ್ರಮುಖ ಕಾರಣವಾಗಿದೆ. ಈ ಬಾರಿಗೆ ಮದ್ದು ಸಿಂಪಡಣೆ ಕೂಲಿ 1,200 ರೂ. ದಾಟಿದೆ. ಐದು ವರ್ಷದ ಹಿಂದೆ 500 ರೂ. ಇತ್ತು. ರಾಸಾಯನಿಕ ಗೊಬ್ಬರ ಧಾರಣೆ ಈಗ 980ಕ್ಕೆ ಏರಿದೆ. ಐದು ವರ್ಷದ ಹಿಂದೆ 600 ರೂ. ಆಸುಪಾಸಿನಲ್ಲಿತ್ತು. ಆದರೆ ಅಡಿಕೆ ಧಾರಣೆ ಈಗ 287 ರೂ. ಇದೆ. ಐದು ವರ್ಷದ ಹಿಂದೆ 350ಕ್ಕೂ ತಲುಪಿತ್ತು. ಅಡಿಕೆ ಬೆಳೆಯಲು ರೈತ ವ್ಯಯಿಸುವ ಖರ್ಚು ವರ್ಷಂಪ್ರತಿ ಏರಿಕೆ ಪ್ರಮಾಣದಲ್ಲಿ ಇದ್ದರೆ, ಆತನಿಗೆ ದೊರೆಯುವ ಧಾರಣೆ ಪ್ರತಿ ವರ್ಷ ಇಳಿಕೆಯತ್ತ ಸಾಗುತ್ತಿದೆ. ಬೆಲೆ ಏರಲಿದೆ
ಆಗಸ್ಟ್ ಮೊದಲ ವಾರದಲ್ಲಿ ಹಳೆ ಮತ್ತು ಹೊಸ ಅಡಿಕೆ ಬೆಲೆ ಏರುವ ಸಾಧ್ಯತೆ ಇದೆ. ಈಗಾಗಲೇ ಜಿಎಸ್‌ಟಿ ವ್ಯವಸ್ಥೆಗೆ ಎಲ್ಲರೂ ಹೊಂದಿಕೊಳ್ಳುತ್ತಿದ್ದು, ಗುಜರಾತು ವರ್ತಕರು ಖರೀದಿ ಪ್ರಕ್ರಿಯೆಯಲ್ಲಿ ತೊಡಗಿಕೊಂಡಿದ್ದಾರೆ. ತೆರಿಗೆ ಇಳಿಕೆಯಿಂದ ಸಹಜವಾಗಿ ಬೆಳೆಗಾರರಿಗೆ ಲಾಭ ಆಗಲಿದೆ.
– ಎಸ್.ಆರ್.ಸತೀಶ್ಚಂದ್ರ ಅಧ್ಯಕ್ಷರು, ಕ್ಯಾಂಪ್ಕೋ – ಕಿರಣ್ ಪ್ರಸಾದ್ ಕುಂಡಡ್ಕ