ಕುಂದಾಪುರ: ಅಡಿಕೆ ಬೆಳೆಗೆ ಬಾಧಿಸಿದ ಎಲೆ ಚುಕ್ಕೆ ರೋಗವು ಕರಾವಳಿ ಹಾಗೂ ಮಲೆನಾಡು ಭಾಗದ ರೈತರ ನಿದ್ದೆಗೆಡಿಸಿದೆ. ಕುಂದಾಪುರ ಗ್ರಾಮಾಂತರ ಭಾಗದ ಹಳ್ಳಿಹೊಳೆ, ಯಡಮೊಗೆ ಭಾಗದಲ್ಲಿ ವಿಜ್ಞಾನಿಗಳ ಸಲಹೆಯಂತೆ ರೈತರು ಔಷಧ ಸಿಂಪಡಣೆ ಸಹಿತ ಕೆಲವೊಂದು ಕ್ರಮಗಳನ್ನು ಕೈಗೊಳ್ಳುವ ಮೂಲಕ ಎಲೆಚುಕ್ಕಿ ರೋಗವನ್ನು ನಿಯಂತ್ರಣಕ್ಕೆ ತರುವಲ್ಲಿ ಯಶಸ್ವಿಯಾಗಿದ್ದಾರೆ.
ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ 1964ರಲ್ಲಿಯೇ ಈ ರೋಗ ಕಂಡು ಬಂದಿದ್ದು, ಅಡಿಕೆೆಗೆ ಕಡಿಮೆ ಹಾನಿಯುಂಟು ಮಾಡಿತ್ತು. ಮಲೆನಾಡಿನ ಸಸಿ ತೋಟಗಳಲ್ಲಿ ಸಾಮಾನ್ಯವಾಗಿ ಕಂಡು ಬರುತ್ತಿದ್ದ ಈ ರೋಗವು ಎರಡು ವರ್ಷಗಳಿಂದೀಚೆಗೆ ಫಸಲು ಕೊಡುತ್ತಿರುವ ತೋಟಗಳಲ್ಲಿ ಕಾಣಿಸಿಕೊಳ್ಳುತ್ತಿರುವುದರಿಂದ ಅಡಿಕೆ ಗಿಡಗಳ ಎಲೆಗಳಲ್ಲಿ ದ್ಯುತಿ ಸಂಶ್ಲೇಷಣ ಪ್ರಕ್ರಿಯೆಗೆ ಹಾನಿ ಉಂಟು ಮಾಡಿ ಇಳುವರಿ ಮೇಲೆ ಪರಿಣಾಮ ಬೀರಿದೆ ಎನ್ನಲಾಗಿದೆ.
ಹರಡುವಿಕೆಗೆ ಕಾರಣ ?
ಕಡಿಮೆ ಉಷ್ಣಾಂಶ ಹಾಗೂ ಹೆಚ್ಚಿನ ಆದ್ರìತೆಯಿಂದ ಕೂಡಿದ ವಾತಾವರಣ ಈ ರೋಗ ವೇಗವಾಗಿ ಹರಡಲು ಕಾರಣವಾಗಿದೆ. ಎಲೆ ಚುಕ್ಕಿ ರೋಗವು ಯಡಮೊಗೆ, ಹಳ್ಳಿಹೊಳೆ, ಕಮಲಶಿಲೆ, ಆಜ್ರಿ ಹಾಗೂ ಇನ್ನಿತರ ಗ್ರಾಮಗಳಲ್ಲಿ ಕಾಣಿಸಿಕೊಂಡಿದ್ದು, ಸೆಪ್ಟಂಬರ್‌ನಲ್ಲಿ ರೋಗ ಬಾಧೆಯು ತೀವ್ರವಾಗಿತ್ತು. ಇದನ್ನು ಗಮನಿಸಿದ ಯಡಮೊಗೆಯ ಜಯರಾಮ್ ನಾಯ್ಕ, ಈ ರೋಗವನ್ನು ನಿವಾರಣೆ ಮಾಡುವ ಸಲುವಾಗಿ ಬ್ರಹ್ಮಾವರ ಕೃಷಿ ವಿಜ್ಞಾನಿಗಳಿಂದ ಮಾಹಿತಿ ಪಡೆದು ಔಷಧ ಸಿಂಪಡಣೆ ಮಾಡಿದ್ದರಿಂದ ರೋಗವು ನಿಯಂತ್ರಣಕ್ಕೆ ಬಂದಿದೆ.
ಈ ರೋಗದ ನಿಯಂತ್ರಣವನ್ನು ರೈತರು ಸಾಮೂಹಿಕವಾಗಿ ಕೈಗೆತ್ತಿಕೊಳ್ಳಬೇಕು. ಈ ನಿಟ್ಟಿನಲ್ಲಿ ಈ ಭಾಗದ ಕೃಷಿಕರು ಈಗಾಗಲೇ ಪ್ರಯತ್ನಕ್ಕೆ ಕೈಹಾಕಿದ್ದು ರೋಗದ ನಿಯಂತ್ರಣಕ್ಕೆ ಪ್ರಯತ್ನಿಸುತ್ತಿದ್ದಾರೆ ಎಂದು ಕುಂದಾಪುರದ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ನಿಧೀಶ್ ಕೆ.ಜಿ. ಅವರು ತಿಳಿಸಿದ್ದಾರೆ.
Related Articles
ರೋಗದ ಲಕ್ಷಣಗಳು
– ಅಡಿಕೆ ಸೋಗೆಯಲ್ಲಿ ಹಳದಿ ಬಣ್ಣದ ಅಂಚುಗಳಿರುವ ಬೂದು ಬಣ್ಣದ ಚುಕ್ಕೆಗಳು ಕಂಡು ಬರುತ್ತದೆ.
– ಸೋಗೆಗಳಲ್ಲಿ ಚುಕ್ಕೆಗಳು ಹೆಚ್ಚಾದಂತೆ ಒಂದಕ್ಕೊಂದು ಕೂಡಿಕೊಂಡು ಒಣಗಿದ ಸೋಗೆಗಳು ಸುಟ್ಟಂತೆ ಕಾಣುತ್ತದೆ.
– ಈ ಚುಕ್ಕೆ ರೋಗವು ತೋಟದಿಂದ ತೋಟಕ್ಕೆ ಹರಡಬಹುದು.
– ರೋಗ ಬಂದಿರುವ ಗಿಡಗಳಲ್ಲಿ ಫಸಲು ಕಡಿಮೆಯಾಗಿ ಇಳುವರಿ ಕುಂಠಿತವಾಗುತ್ತದೆ.
ನಿಯಂತ್ರಣಕ್ಕೇನು ಕ್ರಮ ?
– ಮಳೆಗಾಲದ ಆರಂಭಕ್ಕೂ ಮುನ್ನ ಶೇ. 1ರ ಬೋಡೋì ದ್ರಾವಣವನ್ನು ಅಡಿಕೆ ಗೊನೆಗಳ ಜತೆಗೆ ಎಲೆಗಳು ಹಾಗೂ ಶಿರ ಭಾಗಗಳು ಸಂಪೂರ್ಣವಾಗಿ ನೆನೆಯುವ ಹಾಗೆ ಸಿಂಪಡಿಸಬೇಕು. ಕನಿಷ್ಠ 3 ಬಾರಿ ಹಂತ ಹಂತವಾಗಿ ಸಿಂಪಡಿಸಬೇಕು.
– ಯಾವುದೇ ಶಿಲೀಂಧ್ರ (propico nozol) ನಾಶಕ ಸಿಂಪಡಿಸುವ ಸಂದರ್ಭ ತೋಟದ ಶುಚಿತ್ವ ಹಾಗೂ ಮಳೆ ಬಾರದಿರುವ ಸಮಯ ನಿಗದಿಪಡಿಸಬೇಕು.
– ಮಣ್ಣು ಪರೀಕ್ಷೆ ಆಧಾರದ ಮೇಲೆ ಸಮರ್ಪಕವಾಗಿ ಪೋಷಕಾಂಶಗಳನ್ನು ನೀಡಬೇಕು.