ಮಂಗಳೂರು: ಈ ಬಾರಿಯ ಮಳೆಗಾಲದ ಋತು ಬಹುತೇಕ ಮುಗಿಯುತ್ತ ಬಂದಿದ್ದು, ಇನ್ನು ಹಿಂಗಾರು ಮಳೆ ಕೆಲವು ಸಮಯ ಸುರಿದು ಬಳಿಕ ಸಂಪೂರ್ಣವಾಗಿ ಸ್ತಬ್ಧಗೊಳ್ಳಲಿದೆ. ಇದೇ ವೇಳೆ ಈ ಬಾರಿಯ ಚಂಡ ಮಾರುತಗಳನ್ನು ನೋಡುವುದಾದರೆ ಇಲ್ಲಿಯವರೆಗೆ ಕೇವಲ ಎರಡು ಮಾತ್ರ ಅಬ್ಬರಿಸಿರುವುದನ್ನು ಕಾಣಬಹುದು.
ಪ್ರತಿ ಮಳೆಗಾಲದಲ್ಲಿ ವಾಯುಭಾರ ಕುಸಿತ, ಚಂಡಮಾರುತಗಳು ಮಳೆ ಪ್ರಮಾಣ ವನ್ನು ಹೆಚ್ಚಿಸಿ ಭರ್ಜರಿಯಾಗಿ ಸುರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಆದರೆ ಹಿಂದಿನ ವರ್ಷಗಳಿಗೆ ಹೋಲಿಸಿದೆ ಈ ಬಾರಿ ಸೈಕ್ಲೋನ್‌ಗಳ ಸಂಖ್ಯೆ ಅತ್ಯಂತ ಕಡಿಮೆ. ವಾಯು ಭಾರ ಕುಸಿತಗಳು ಉಂಟಾದರೂ, ಅವು ಚಂಡಮಾರುತ ವಾಗಿ ಬದಲಾಗು ವಲ್ಲಿ ವಿಫಲವಾಗಿವೆ.
11 ಬಾರಿ ಪೂರಕ ವಾತಾವರಣ:
ದೇಶದ ಪೂರ್ವ ಮತ್ತು ಪಶ್ಚಿಮ ಕರಾವಳಿಯಲ್ಲಿ ಈ ಸಲ ಒಟ್ಟು 11 ಬಾರಿ ಸೈಕ್ಲೋನ್‌ಗೆ ಪೂರಕ ವಾತಾವರಣ ನಿರ್ಮಾಣವಾಗಿತ್ತು. ಅದರಲ್ಲಿ ಎರಡು ಮಾತ್ರ ಚಂಡಮಾರುತವಾಗಿ ಬದಲಾ ಗಿದ್ದು, ಅದೂ ಬಂಗಾಲ ಕೊಲ್ಲಿಯಲ್ಲಿ. ಉಳಿದಂತೆ ಒಟ್ಟು 11 ವಾಯುಭಾರ ಕುಸಿತ, 5 ತೀವ್ರ ವಾಯುಭಾರ ಕುಸಿತ ಗಳು ಉಂಟಾಗಿವೆ. ಅರಬ್ಬಿ ಸಮುದಲ್ಲಿ ಒಂದೂ ಚಂಡಮಾರುತ ಎದ್ದಿಲ್ಲ.
Related Articles
ಅಸಾನಿಯಿಂದ ಸಿತರಂಗ್ ವರೆಗೆಮೇ ತಿಂಗಳ 7ರಿಂದ 12ರ ನಡುವೆ ಬಂಗಾಲ ಕೊಲ್ಲಿಯಲ್ಲಿ “ಅಸಾನಿ’ ಚಂಡ ಮಾರುತ ಉಂಟಾಗಿ ಅಂಡಮಾನ್ ನಿಕೋಬಾರ್, ಆಂಧ್ರಪ್ರದೇಶ, ತಮಿಳುನಾಡು, ಕರ್ನಾಟಕ ಮತ್ತು ಒಡಿಶಾ ರಾಜ್ಯದಲ್ಲಿ ವ್ಯಾಪಕ ಹಾನಿ ಯುಂಟಾ ಗಿತ್ತು. ಎರಡನೇ ಚಂಡ ಮಾರುತ “ಸಿತರಂಗ್’ ಅ. 22-26ರ ನಡುವೆ ಕಾಣಿಸಿಕೊಂಡಿತ್ತು. ಅಂಡಮಾನ್ ನಿಕೋಬಾರ್, ಒಡಿಶಾ, ಪಶ್ಚಿಮ ಬಂಗಾಲ, ಝಾರ್ಖಂಡ್, ಮೇಘಾಲಯ, ಅಸ್ಸಾಂ, ತ್ರಿಪುರಾಗ ಳಲ್ಲಿ ವ್ಯಾಪಕ ಮಳೆಗೆ ಕಾರಣವಾಗಿತ್ತು.
ಬದಲಾವಣೆಗೆ ಕಾರಣ :
ಜಾಗತಿಕ ತಾಪಮಾನ ಹೆಚ್ಚಳ, ಹವಾಮಾನದಲ್ಲಿ ಉಂಟಾಗುವ ಬದಲಾವಣೆ, ಮಾನವ ಪ್ರೇರಿತ ಮತ್ತು ಪ್ರಕೃತಿಯ ಸ್ವಯಂಪ್ರೇರಿತ ಹವಾಮಾನ ಬದಲಾವಣೆ ಮೊದಲಾದವುಗಳು ಚಂಡಮಾರುತ, ವಾಯುಭಾರ ಕುಸಿತ ಚಂಡಮಾರುತದ ಮಟ್ಟಕ್ಕೆ ಪರಿ ವರ್ತನೆಯಾಗುವುದು, ಅತಿವೃಷ್ಟಿ- ಆನಾ ವೃಷ್ಟಿ ಮೊದಲಾದವುಗಳಿಗೆ ಕಾರಣ. ಈ ಬಾರಿಯ ಮುಂಗಾರಿನಲ್ಲಿ ಮೊದಲ ಬಾರಿಗೆ ಎಂಬಂತೆ ಪ್ರದೇಶದಿಂದ ಪ್ರದೇಶಕ್ಕೆ ಸೀಮಿತವಾಗಿ ಮಳೆ ಸುರಿ ದಿರುವುದನ್ನು ಇಲ್ಲಿ ಸ್ಮರಿಸಬಹುದು.
ಸಾಧ್ಯತೆ ಅಲ್ಲಗಳೆಯುವಂತಿಲ್ಲ:
ಬಂಗಾಲ ಕೊಲ್ಲಿಯಲ್ಲಿ ಡಿಸೆಂಬರ್ ಅಂತ್ಯದವರೆಗೂ ಚಂಡಮಾರುತ ಬರುವ ಸಾಧ್ಯತೆ ಅಲ್ಲಗಳೆಯುವಂತಿಲ್ಲ. ಆದರೆ ಅರಬ್ಬಿ ಸಮುದ್ರದಲ್ಲಿ ಮಾತ್ರ ಇನ್ನು ಚಂಡಮಾರುತದ ಸಾಧ್ಯತೆ ಇಲ್ಲ.ಸದ್ಯ ಬಂಗಾಲ ಕೊಲ್ಲಿಯಲ್ಲಿ ಗಾಳಿ ಇರುವುದರಿಂದ ತಮಿಳುನಾಡು ಭಾಗದಲ್ಲಿ ವ್ಯಾಪಕ ಮಳೆಯಾಗುತ್ತಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಹಿಂದಿನ ವರ್ಷಗಳ ಚಂಡಮಾರುತಗಳು :
- 2019ರಲ್ಲಿ ಅರಬ್ಬಿ ಸಮುದ್ರದಲ್ಲಿ ಒಂದರ ಹಿಂದೆ ಒಂದರಂತೆ ಐದು ಚಂಡಮಾರುತಗಳು ಎದ್ದು ದಾಖಲೆ ನಿರ್ಮಾಣವಾಗಿತ್ತು. ಮುಂಗಾರು ಅವಧಿಯಲ್ಲಿ “ವಾಯು’, “ಹಿಕಾ’, ಮುಂಗಾರಿನ ಅನಂತರ “ಕ್ಯಾರ್’, “ಮಹಾ’, “ಪವನ್’ ಹೀಗೆ ಸಾಗಿತ್ತು. ಬಂಗಾಲ ಕೊಲ್ಲಿಯಲ್ಲಿ “ಪಾಬುಕ್’, “ಫನಿ’, “ಬುಲ್‌ಬುಲ್’ ಹೀಗೆ ಒಟ್ಟು 8 ಚಂಡಮಾರುತಗಳು ಎದ್ದಿದ್ದವು.
- 2020ರಲ್ಲಿ ಅರಬ್ಬಿ ಸಮುದ್ರದಲ್ಲಿ “ನಿಸರ್ಗ’, “ಗಟಿ’, ಬಂಗಾಲ ಕೊಲ್ಲಿಯಲ್ಲಿ “ಅಂಫಾನ್’, “ನಿವಾರ್’ ಮತ್ತು “ಬುರೇವಿ’ ಸೇರಿ ಒಟ್ಟು 5 ಚಂಡಮಾರುತಗಳು ಕಾಣಿಸಿಕೊಂಡಿದ್ದವು.
- 2021ರಲ್ಲೂ ಒಟ್ಟು ಐದು ಚಂಡಮಾರುತಗಳು ಎದ್ದಿದ್ದವು. ಅರಬ್ಬಿ ಸಮುದ್ರದಲ್ಲಿ “ತೌಕ್ತೆ’, “ಶಾಹೀನ್’ ಹಾಗೂ ಬಂಗಾಲ ಕೊಲ್ಲಿಯಲ್ಲಿ “ಯಾಸ್’, “ಗುಲಾಬ್’, “ಜವಾದ್’ ಚಂಡಮಾರುತ ಭೂ ಪ್ರದೇಶದತ್ತ ಅಪ್ಪಳಿಸಿದ್ದವು.
ಸಮುದ್ರದ ಮೇಲ್ಮೈ ತಾಪಮಾನ ಬಂಗಾಲ ಕೊಲ್ಲಿಯಲ್ಲಿ ಯಾವಾಗಲೂ ಹೆಚ್ಚಿದ್ದು, ಗಾಳಿಯ ದಿಕ್ಕಿನ ಬದಲಾವಣೆ ಪ್ರಕ್ರಿಯೆ ಕಡಿಮೆ ಇರುತ್ತದೆ. ಇದರಿಂದ ಚಂಡಮಾರುತ ಸಾಧ್ಯತೆ ಹೆಚ್ಚು. ಆದರೆ ಅರಬ್ಬಿ ಸಮುದ್ರದಲ್ಲಿ ಅಂತಹ ವಾತಾವರಣ ಕಂಡು ಬರುವುದಿಲ್ಲ.– ಎ. ಪ್ರಸಾದ್, ಹವಾಮಾನ ತಜ್ಞ, ಐಎಂಡಿ ಬೆಂಗಳೂರು
–ಭರತ್ ಶೆಟ್ಟಿಗಾರ್