Advertisement

AR Rahman ಕಾರ್ಯಕ್ರಮದಲ್ಲಿ ಕಾಲ್ತುಳಿತ: ಜನದಟ್ಟಣೆಯಲ್ಲಿ ಮಹಿಳೆಯರಿಗೆ ಕಿರುಕುಳ

12:05 PM Sep 11, 2023 | Team Udayavani |

ಚೆನ್ನೈ: ಭಾರತದ ಮ್ಯೂಸಿಕ್‌ ಲೆಜೆಂಡ್‌ ಎ ಆರ್ ರೆಹಮಾನ್ ಅವರ ಕಾನ್ಸರ್ಟ್‌(ಸಂಗೀತ ಸಂಜೆ) ಕಾರ್ಯಕ್ರಮದಲ್ಲಿ ನೂಕುನುಗ್ಗಲು ಉಂಟಾದ ಪರಿಣಾಮ ಸಾವಿರಾರು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement

ಎಆರ್ ರೆಹಮಾನ್ ಹಾಗೂ ಎಸಿಟಿಸಿ ಇವೆಂಟ್‌ ಇವರ ಸಹಭಾಗಿತ್ವದಲ್ಲಿ ‘ಮರಕುಮಾ ನೆಂಜಮ್’ ಎಂಬ ಸಂಗೀತ ಕಾರ್ಯಕ್ರಮವನ್ನು ಭಾನುವಾರ(ಸೆ.10 ರಂದು)  ಚೆನ್ನೈನ ಪನೈಯೂರಿನಲ್ಲಿರುವ ಆದಿತ್ಯರಾಮ್ ಪ್ಯಾಲೇಸ್ ಆಯೋಜಿಸಲಾಗಿತ್ತು.

50 ಸಾವಿರ ಜನರು ಒಟ್ಟುಗೂಡುವ ಕಾರ್ಯಕ್ರಮ ಇದಾಗಿದ್ದು, ಈ ಕಾರ್ಯಕ್ರಮದಲ್ಲಿ ಭಾಗಿಯಾಗಲು ಜನ 5 ಸಾವಿರದಿಂದ 25 ಸಾವಿರ‌ ರೂಪಾಯಿವರೆಗಿನ  ಟಿಕೆಟ್‌ ನ್ನು ಜನ ಖರೀದಿಸಿದ್ದರು. ಆದರೆ ಕಾರ್ಯಕ್ರಮ ಆರಂಭವಾಗಲು ಕೆಲ ನಿಮಿಷ ಇರುವ ವೇಳೆ ಟಿಕೆಟ್‌ ಹೊಂದಿರುವ ಜನರನ್ನು ಒಳಗೆ ಬಿಡಲು ನಿರಾಕರಿಸಲಾಗಿದೆ. ನಿರೀಕ್ಷೆಗಿಂತ ಹೆಚ್ಚು ಜನರು ಕಾರ್ಯಕ್ರಮದಲ್ಲಿ ಸೇರಿದ್ದರಿಂದ ಟಿಕೆಟ್‌ ಇರುವ ಜನರನ್ನು ಒಳಗೆ ಬಿಡಲು ನಿರಾಕರಿಸಲಾಗಿದೆ. ಈ ಕಾರಣದಿಂದ ಅವರೆಲ್ಲ ಗೇಟ್‌ ನಲ್ಲೇ ನಿಲ್ಲುವ ಸ್ಥಿತಿ ಉಂಟಾಗಿದೆ. ಇದರಿಂದ ನೂಕುನುಗ್ಗಲು ಉಂಟಾಗಿದೆ.

ಈ ಸಮಯದಲ್ಲಿ ಕೆಲವರು ಕಾಲ್ತುಳಿಕ್ಕೆ ಒಳಗಾಗಿ ಗಾಯಗೊಂಡಿದ್ದಾರೆ. ಕೆಲ ಮಹಿಳೆಯರಿಗೆ ಜನದಟ್ಟಣೆಯಿಂದಾಗಿ ಕಿರುಕುಳ ನೀಡಿದ್ದಾರೆ ಎನ್ನಲಾಗಿದೆ. ಈ ವೇಳೆ ಪೋಷಕರ ಜೊತೆಗಿದ್ದ ಮಕ್ಕಳು ಕಾಣೆಯಾಗಿದ್ದರೆಂದು ಆಯೋಜಕರು ಮೈಕ್‌ ನಲ್ಲಿ ಘೋಷಿಸಿದ ಸನ್ನಿವೇಶವೂ ನಡೆಯಿತು.

ತುಂಬಾ ಕೆಟ್ಟದಾಗಿ ಆಯೋಜಿಸಲಾದ ಕಾನ್ಸರ್ಟ್‌ ಇದು. ಇದರಿಂದ ನನ್ನ ಹಣ ವ್ಯರ್ಥವಾಯಿತು. ಸರಿಯಾಗಿ ಸೌಂಡ್‌ ಕೂಡ ಕೇಳಿಲ್ಲ ಎಂದು ಒಬ್ಬರು ಟ್ವಿಟರ್‌ (ಎಕ್ಸ್)‌ ನಲ್ಲಿ ಬರೆದುಕೊಂಡಿದ್ದಾರೆ.

Advertisement

ಹೆಂಗಸರು ಕಿರುಕುಳಕ್ಕೊಳಗಾದರು, ಕಾಲ್ತುಳಿತದಲ್ಲಿ ಮಕ್ಕಳು ಗಾಯಗೊಂಡರು, ಉಸಿರುಗಟ್ಟುವಿಕೆಯಿಂದಾಗಿ ವೃದ್ಧರು ಕುಸಿದುಬಿದ್ದರು, ಇಷ್ಟೆಲ್ಲ ಆದರೂ ಎಆರ್ ರೆಹಮಾನ್ ಅವರು ಏನೂ ಆಗದಂತೆ ಹಾಡುತ್ತಿದ್ದರು ಎಂದು ಒಬ್ಬರು ಅಸಮಾಧಾನವನ್ನು ಹೊರಹಾಕಿದ್ದಾರೆ.

ಸದ್ಯ ಈ ಕಾರ್ಯಕ್ರಮದ ಅವ್ಯವಸ್ಥೆಯ ಕುರಿತ ವಿಡಿಯೋಗಳು ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

“ಚೆನ್ನೈನಲ್ಲಿನ ರೆಹಮಾನ್ ಅವರೆ ಕಾರ್ಯಕ್ರಮಕ್ಕೆ ದೊಡ್ಡಮಟ್ಟದ ಜನಸಮೂಹ ಬಂದಿದೆ. ಜನದಟ್ಟಣೆಯಲ್ಲಿ ಭಾಗವಹಿಸಲು ಸಾಧ್ಯವಾಗದವರಿಗೆ ನಾವು ಪ್ರಾಮಾಣಿಕ ಕ್ಷಮೆಯಾಚಿಸುತ್ತೇವೆ. ಇದರ ಜವಬ್ದಾರಿಯನ್ನು ನಾವು ತೆಗೆದುಕೊಳ್ಳುತ್ತೇವೆ. ನಾವು ನಿಮ್ಮೊಂದಿಗಿದ್ದೇವೆ” ಎಂದು ಎಸಿಟಿಸಿ ಇವೆಂಟ್‌ ಟ್ವೀಟ್‌ ಮಾಡಿದೆ.

ಈ ಬಗ್ಗೆ ಎಆರ್‌ ರೆಹಮಾನ್ ಅವರು ಇನ್ನಷ್ಟೇ ಪ್ರತಿಕ್ರಿಯೆ ನೀಡಬೇಕಿದೆ. ಈ ಕಾರ್ಯಕ್ರಮವನ್ನು ಮೊದಲು ಆಗಸ್ಟ್‌ 12 ರಂದು ಆಯೋಜನೆ ಮಾಡಲಾಗಿತ್ತು. ಆದರೆ ಮಳೆಯ ಕಾರಣದಿಂದ ಸೆ.10 ಕ್ಕೆ ಮುಂದೂಡಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next