ಹೊಸದಿಲ್ಲಿ: ಸೀರೆಯುಟ್ಟ ಮಹಿಳೆಗೆ ಹೋಟೆಲ್ ಒಳಗೆ ಪ್ರವೇಶ ನಿರಾಕರಿಸಿದ ಕಾರಣಕ್ಕೆ ಇತ್ತೀಚೆಗೆ ಭಾರೀ ಸುದ್ದಿಯಾಗಿದ್ದ ದೆಹಲಿ ಅಕ್ವಿಲಾ ರೆಸ್ಟೋರೆಂಟ್ ನ್ನು ಮುಚ್ಚಲಾಗಿದೆ. ಆರೋಗ್ಯ ವ್ಯಾಪಾರ ಲೈಸೆನ್ಸ್ ಇಲ್ಲದೆ ರೆಸ್ಟೋರೆಂಟ್ ನಡೆಸುತ್ತಿದ್ದರು ಎಂಬ ಕಾರಣಕ್ಕೆ ರೆಸ್ಟೋರೆಂಟನ್ನು ದೆಹಲಿ ನಗರ ಪಾಲಿಕೆ ಬಂದ್ ಮಾಡಿಸಿದೆ.
ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ (ಎಂಸಿಡಿ) ಅಧಿಕಾರಿಗಳು ಈ ಬಗ್ಗೆ ನೋಟಿಸ್ ನೀಡಿದ್ದಾರೆ. ಇತ್ತೀಚಿನ ಘಟನೆಯ (ಅನುಮತಿ ನಿರಾಕರಣೆ) ಬಗ್ಗೆ ಸೂಚನೆಯಲ್ಲಿ ಯಾವುದೇ ಉಲ್ಲೇಖ ಮಾಡಿಲ್ಲ. ಬದಲಿಗೆ ರೆಸ್ಟೋರೆಂಟ್ ಆರೋಗ್ಯ ವ್ಯಾಪಾರ ಪರವಾನಗಿ ಇಲ್ಲದೆ ಕಾರ್ಯನಿರ್ವಹಿಸುತ್ತಿದೆ ಎಂದು ಸೂಚಿಸಲಾಗಿದೆ, ಬಳಿಕ ಮಾಲೀಕರಿಗೆ ನೋಟಿಸ್ ನೀಡಿ, ಹೋಟೆಲ್ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿದೆ.
ಸೆಪ್ಟೆಂಬರ್ 27 ರಂದು ರೆಸ್ಟೋರೆಂಟ್ ಮುಚ್ಚಲಾಗಿದೆ ಎಂದು ದಕ್ಷಿಣ ಎಂಸಿಡಿಯ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಇದನ್ನೂ ಓದಿ:ಪ್ರಾದೇಶಿಕ ಭಾಷೆಗಳಲ್ಲಿ ಬ್ಯಾಂಕ್ ಗುಮಾಸ್ತ ಹುದ್ದೆಗೆ ನೇಮಕಾತಿ ಪರೀಕ್ಷೆ ?
ಸಾರ್ವಜನಿಕ ಆರೋಗ್ಯ ತಪಾಸಕರು ಸೆಪ್ಟೆಂಬರ್ 21 ರಂದು ನಡೆಸಿದ ತಪಾಸಣೆಯ ಸಮಯದಲ್ಲಿ, ವ್ಯಾಪಾರ ಪರವಾನಗಿ ಇಲ್ಲದೆ ಮತ್ತು ನೈರ್ಮಲ್ಯವಿಲ್ಲದ ಪರಿಸ್ಥಿತಿಗಳಲ್ಲಿ ರೆಸ್ಟೋರೆಂಟ್ ನಡೆಸಲಾಗುತ್ತಿದೆ ಎಂದು ಹೇಳಲಾಗಿದೆ. ಇದಲ್ಲದೆ ಸಾರ್ವಜನಿಕ ಭೂಮಿಯನ್ನು ಅತಿಕ್ರಮಣ ಮಾಡಿರುವುದು ಕಂಡುಬಂದಿದೆ ಎಂದು ಹೇಳಲಾಗಿದೆ.
“ಸಾರ್ವಜನಿಕ ಆರೋಗ್ಯ ನಿರೀಕ್ಷಕರು ಸೆಪ್ಟೆಂಬರ್ 24 ರಂದು ಮತ್ತೊಮ್ಮೆ ಸ್ಥಳವನ್ನು ಪರಿಶೀಲಿಸಿದಾಗಲೂ ರೆಸ್ಟೋರೆಂಟ್ ವ್ಯಾಪಾರವು ಅದೇ ಸ್ಥಿತಿಯಲ್ಲಿ ನಡೆಯುತ್ತಿರುವುದನ್ನು ಕಂಡುಬಂದಿತ್ತು. ಹೀಗಾಗಿ 48 ಗಂಟೆಗಳಲ್ಲಿ ವ್ಯಾಪಾರವನ್ನು ಮುಚ್ಚುವಂತೆ ರೆಸ್ಟೋರೆಂಟ್ ಮಾಲೀಕರಿಗೆ ಎಸ್‌ಡಿಎಂಸಿ ಸಾರ್ವಜನಿಕ ಆರೋಗ್ಯ ಇಲಾಖೆ ಸೂಚನೆ ತಿಳಿಸಿತ್ತು.
ಆಂಡ್ರೂಸ್ ಗಂಜ್‌ನ ಕಾಂಗ್ರೆಸ್ ಕೌನ್ಸಿಲರ್ ಅಭಿಷೇಕ್ ದತ್ ಅವರು ಬುಧವಾರ ಸಾಂಪ್ರದಾಯಿಕ ಭಾರತೀಯ ಉಡುಪು ಧರಿಸಿದ ವ್ಯಕ್ತಿಗೆ ಪ್ರವೇಶವನ್ನು ನಿರಾಕರಿಸುವ ಯಾವುದೇ ರೆಸ್ಟೋರೆಂಟ್, ಬಾರ್ ಅಥವಾ ಹೋಟೆಲ್ ವಿರುದ್ಧ 5 ಲಕ್ಷ ದಂಡ ವಿಧಿಸುವ ಪ್ರಸ್ತಾಪವನ್ನು ಮಂಡಿಸಿದಾಗ ಎಸ್‌ಡಿಎಂಸಿ ಹೌಸ್ ಸಭೆಯಲ್ಲಿ ಈ ಬೆಳವಣಿಗೆ ಬೆಳಕಿಗೆ ಬಂದಿದೆ.
“ರೆಸ್ಟೋರೆಂಟ್ ಪರವಾನಗಿ ಇಲ್ಲದೆ ಕಾನೂನುಬಾಹಿರವಾಗಿ ನಡೆಯುತ್ತಿತ್ತು. ನಾನು ಸಮಸ್ಯೆಯನ್ನು ಪ್ರಸ್ತಾಪಿಸಿದ ನಂತರ ನೋಟಿಸ್ ನೀಡಲಾಗಿದೆ. ಈಗ, ರೆಸ್ಟೋರೆಂಟ್ ಮುಚ್ಚಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಪರವಾನಗಿ ಇಲ್ಲದೆ ರೆಸ್ಟೋರೆಂಟ್ ಹೇಗೆ ನಡೆಯುತ್ತಿತ್ತು ಎಂಬುದು ತನಿಖೆಯ ವಿಷಯವಾಗಿದೆ”ಎಂದು ಕೌನ್ಸಿಲರ್ ಅಭಿಷೇಕ್ ದತ್ ಹೇಳಿದ್ದಾರೆ.