Advertisement

ಎ. 26: ಮೊದಲ ಹಂತದ ಮತಕ್ಕೆ ಕಣ ಸಜ್ಜು; ಕಾಂಗ್ರೆಸ್‌-ಎನ್‌ಡಿಎ ನಡುವೆ ನೇರಾನೇರ ಹಣಾಹಣಿ

12:32 AM Apr 09, 2024 | Team Udayavani |

ಬೆಂಗಳೂರು: ಮೊದಲ ಹಂತದಲ್ಲಿ ಎ. 26ರಂದು ಚುನಾವಣೆ ನಡೆಯಲಿರುವ ರಾಜ್ಯದ 14 ಲೋಕಸಭಾ ಕ್ಷೇತ್ರಗಳ ಅಖಾಡ ಅಂತಿಮಗೊಂಡಿದ್ದು, ಬಹುತೇಕ ಎಲ್ಲ ಕ್ಷೇತ್ರಗಳಲ್ಲೂ ಕಾಂಗ್ರೆಸ್‌ ಹಾಗೂ ಎನ್‌ಡಿಎ ಅಭ್ಯರ್ಥಿಗಳ ನಡುವೆ ನೇರ ಹಣಾಹಣಿ ಏರ್ಪಡುವ ಸಾಧ್ಯತೆಯೇ ಹೆಚ್ಚಿದೆ.

Advertisement

ಸೋಮವಾರ ನಾಮಪತ್ರ ಹಿಂಪ ಡೆಯಲು ಕೊನೆಯ ದಿನವಾಗಿದ್ದು, ಕಾಂಗ್ರೆಸ್‌, ಬಿಜೆಪಿ, ಜೆಡಿಎಸ್‌ ಮತ್ತು ಇತರ ಪಕ್ಷಗಳು, ಪಕ್ಷೇತರ ಅಭ್ಯರ್ಥಿಗಳು ಸೇರಿ 247 ಮಂದಿ ಕಣದಲ್ಲಿ ಉಳಿದಿದ್ದಾರೆ. ಈ ಪೈಕಿ 21 ಮಹಿಳಾ ಅಭ್ಯರ್ಥಿಗಳಿದ್ದರೆ, 226 ಪುರುಷ “ಕಲಿ’ಗಳು ಕಣದಲ್ಲಿದ್ದಾರೆ.

ಸ್ಪರ್ಧೆ ಬಯಸಿ 359 ಅಭ್ಯರ್ಥಿಗಳು 492 ನಾಮಪತ್ರ ಸಲ್ಲಿಸಿದ್ದು, ಈ ಪೈಕಿ 59 ಅಭ್ಯರ್ಥಿಗಳು ಕಣದಿಂದ ಹಿಂದೆ ಸರಿದಿದ್ದರೆ, 74 ನಾಮಪತ್ರಗಳು ತಿರಸ್ಕೃತ ಗೊಂಡಿದ್ದು, 419 ನಾಮಪತ್ರಗಳು ಸಿಂಧುವಾಗಿವೆ.

ಕಳೆದ ಲೋಕಸಭೆ ಚುನಾವಣೆಯಲ್ಲಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಮಾತ್ರ ಗೆದ್ದಿದ್ದ ಕಾಂಗ್ರೆಸ್‌ 14 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಮಿತ್ರಪಕ್ಷಗಳಾಗಿರುವ ಬಿಜೆಪಿ 11 ಮತ್ತು ಜೆಡಿಎಸ್‌ 3 ಕ್ಷೇತ್ರಗಳನ್ನು ಹಂಚಿಕೊಂಡು ಹುರಿಯಾಳುಗಳನ್ನು ಅಖಾಡಕ್ಕಿಳಿಸಿವೆ.

ರಾಹುಲ್‌ ಗಾಂಧಿ ತಿರಸ್ಕೃತ
ಎಸ್‌.ಎಂ. ಕೃಷ್ಣ ಪುರಸ್ಕೃತ
ಬೆಂಗಳೂರು ಕೇಂದ್ರ ಕ್ಷೇತ್ರದಿಂದ ಸ್ಪರ್ಧಿಸಲು ಇಚ್ಛಿಸಿದ್ದ ರಾಹುಲ್‌ ಗಾಂಧಿ ಎನ್‌. ಎಂಬವರ ನಾಮಪತ್ರ ತಿರಸ್ಕೃತಗೊಂಡಿದೆ. ಇದೇ ಕ್ಷೇತ್ರದಿಂದ ಎಸ್‌.ಎಂ. ಕೃಷ್ಣ ಎಂಬವರು ಪಕ್ಷೇತರರಾಗಿ ಸಲ್ಲಿಸಿದ್ದ ನಾಮಪತ್ರ ಪುರಸ್ಕೃತಗೊಂಡಿದೆ.

Advertisement

ಬೆಂಗಳೂರು ಗ್ರಾಮಾಂತರದಲ್ಲಿ ಬಿಜೆಪಿ ಅಭ್ಯರ್ಥಿ ಡಾ. ಸಿಎನ್‌. ಮಂಜುನಾಥ್‌ ಎದುರು ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿದ್ದ ಮಂಜುನಾಥ್‌ ಕೆ., ಮಂಜುನಾಥ್‌ ಎನ್‌., ಮಂಜುನಾಥ್‌ ಸಿ. ಕಣದಿಂದ ಹಿಂದೆ ಸರಿದಿದ್ದು, ಬಹುಜನ ಭಾರತ ಪಕ್ಷದ ಮಂಜುನಾಥ ಸಿ.ಎನ್‌. ಎಂಬವರು ಕಣದಲ್ಲಿದ್ದಾರೆ.

ಬೆಂ. ದಕ್ಷಿಣದಲ್ಲಿ ವಾಟಾಳ್‌ ನಾಗರಾಜ್‌ ಸ್ಪರ್ಧೆ
ಬೆಂಗಳೂರು ದಕ್ಷಿಣದಲ್ಲಿ ಕನ್ನಡ ಚಳವಳಿ ವಾಟಾಳ್‌ ಪಕ್ಷದಿಂದ ವಾಟಾಳ್‌ ನಾಗರಾಜ್‌ ಸ್ಪರ್ಧೆಗಿಳಿದಿದ್ದು, ಅವರ ನಾಮಪತ್ರ ಸಿಂಧುವಾಗಿದೆ. ಇನ್ನು ಕೋಲಾರದಲ್ಲಿ ಸೋಶಿಯಲಿಸ್ಟ್‌ ಪಕ್ಷ (ಇಂಡಿಯಾ)ದ ಡಿ. ಗೋಪಾಲಕೃಷ್ಣ ಅದೃಷ್ಟ ಪರೀಕ್ಷೆಗಿಳಿದಿದ್ದು, ರಿಪಬ್ಲಿಕನ್‌ ಪಾರ್ಟಿ ಆಫ್ ಇಂಡಿಯಾ (ಕರ್ನಾಟಕ) ತಿಮ್ಮರಾಯಮ್ಮ ನಾಮಪತ್ರವೂ ಮಾನ್ಯವಾಗಿದೆ. ಎಂ.ಎಸ್‌. ಬದರಿನಾರಾಯಣ ಎಂಬವರು ಲೋಕಶಕ್ತಿ ಪಕ್ಷದಿಂದಲೂ ನಾಮಪತ್ರ ಸಲ್ಲಿಸಿದ್ದು, ಪಕ್ಷೇತರರಾಗಿ ಸಲ್ಲಿಸಿರುವ ನಾಮಪತ್ರವೂ ಪುರಸ್ಕೃತವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next