ಕಾಪು: ಜೇಸಿಐ ಭಾರತದ ನಿರ್ದೇಶನದಂತೆ ಸೆಲ್ಯೂಟ್ ದಿ ಸೈಲೆಂಟ್ ವರ್ಕರ್ ಎಂಬ ವಿಶೇಷ ಕಾರ್ಯಕ್ರಮದಡಿಯಲ್ಲಿ ವಿವಿಧ ಘಟಕಗಳ ಮೂಲಕವಾಗಿ ಪ್ರತೀ ತಿಂಗಳು ಎರಡು ಸಾವಿರಕ್ಕೂ ಅಧಿಕ ಮಂದಿ ಸೇವಾನಿರತರನ್ನು ಸಮ್ಮಾನಿಸಲಾಗುತ್ತಿದೆ ಎಂದು ಜೇಸಿಐ ಭಾರತದ ಕಾರ್ಯಕ್ರಮ ವಿಭಾಗದ ರಾಷ್ಟ್ರೀಯ ನಿರ್ದೇಶಕ ಸಂದೀಪ್ ಕುಮಾರ್ ಹೇಳಿದರು.
ಸೆಲ್ಯೂಟ್ ದ ಸೈಲೆಂಟ್ ವರ್ಕರ್ ಕಾರ್ಯಕ್ರಮದಡಿ ಕಾಪು ಜೇಸಿಐ ವತಿಯಿಂದ ಜೂ. 26ರಂದು ಕಾಪು ಅಂಚೆ ಕಚೇರಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಅಂಚೆ ಪೇದೆಗಳ ಸಮ್ಮಾನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ಪ್ರತೀ ತಿಂಗಳು ಒಂದೊಂದು ಕ್ಷೇತ್ರದ ಸಾಧಕರನ್ನು / ಸಿಬಂದಿಗಳನ್ನು ಗುರುತಿಸಿ, ಗೌರವಿಸುವ ಮೂಲಕ ಜೇಸಿ ಸಂಸ್ಥೆಯನ್ನು ಪ್ರತೀಯೊಬ್ಬರ ಹತ್ತಿರಕ್ಕೆ ಕೊಂಡೊಯ್ಯುವ ಪ್ರಯತ್ನ ನಡೆಸಲಾಗುತ್ತಿದೆ. ಕಾಪು ಜೇಸಿಐ ಕಳೆದ ಆರು ತಿಂಗಳಿನಿಂದಲೂ ನಿರಂತರವಾಗಿ ಮಾದರಿಯಾಗಿ ಕಾರ್ಯಕ್ರಮವನ್ನು ನಡೆಸಿಕೊಂಡು ಬರುತ್ತಿರುವುದು ಶ್ಲಾಘನೀಯವಾಗಿದೆ ಎಂದರು.
ಅಂಚೆ ಪೇದೆಗಳಾದ ನವೀನ್ ಕುಮಾರ್, ದಯಾನಂದ್ ಅವರನ್ನು ಸಮ್ಮಾನಿಸಿ, ಗೌರವಿಸಲಾಯಿತು.
ಕಾಪು ಅಂಚೆ ಕಚೇರಿಯ ಅಧಿಕಾರಿ ಕೃಷ್ಣಪ್ಪ, ಜೇಸಿಐ ವಲಯ ಹದಿನೈದರ ನಿಕಟಪೂರ್ವ ವಲಯಾಧ್ಯಕ್ಷರು, ಅಭಿವೃದ್ಧಿ ಮತ್ತು ಬೆಳವಣಿಗೆ ವಿಭಾಗದ ವಲಯ ನಿರ್ದೇಶಕಿ ಸೌಮ್ಯಾ ರಾಕೇಶ್, ಕಾಪು ಜೇಸಿಐನ ನಿಕಟಪೂರ್ವ ಅಧ್ಯಕ್ಷ ರಮೇಶ್ ನಾಯ್ಕ, ಪೂರ್ವ ವಲಯಾಧಿಕಾರಿ ಸಂದೀಪ್ ಶೆಟ್ಟಿ, ಕಾರ್ಯಕ್ರಮ ನಿರ್ದೇಶಕಿ ಸಾವಿತ್ರಿ ನಾಯ್ಕ, ಅಂಚೆ ಕಛೇರಿಯ ಅಧಿಕಾರಿಗಳು ಮತ್ತು ಸಿಬಂದಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಪು ಜೇಸಿಐ ಅಧ್ಯಕ್ಷೆ ಶಾರದೇಶ್ವರಿ ಗುರ್ಮೆ ಸ್ವಾಗತಿಸಿದರು. ಕಾರ್ಯದರ್ಶಿ ಸುಖಲಾಕ್ಷಿ ಬಂಗೇರ ವಂದಿಸಿದರು.