Advertisement

ಗ್ರಂಥಾಲಯ ಅಭಿವೃದ್ಧಿಗೆ ಅನುಮೋದನೆ

10:14 AM Mar 22, 2022 | Team Udayavani |

ಚಿತ್ರದುರ್ಗ: ಗ್ರಂಥಾಲಯಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅನುಕೂಲವಾಗುವ ಹಾಗೂ ಹೆಸರಾಂತ ಲೇಖಕರ ಪುಸ್ತಕಗಳನ್ನು ಖರೀದಿಸಬೇಕು ಎಂದು ಜಿಲ್ಲಾಧಿಕಾರಿ ಕವಿತಾ ಎಸ್‌. ಮನ್ನಿಕೇರಿ ಹೇಳಿದರು. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ 87ನೇ ಜಿಲ್ಲಾ ಗ್ರಂಥಾಲಯ ಪ್ರಾಧಿಕಾರದ ಹಾಗೂ 2022-23ನೇ ಸಾಲಿನ ಆಯ-ವ್ಯಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

Advertisement

ಓದುಗರ ಬೇಡಿಕೆ ಹಾಗೂ ಸಾರ್ವಜನಿಕ ಸ್ಪರ್ಧಾತ್ಮಕ ಓದುಗರಿಂದ ಪುಸ್ತಕಗಳ ಬೇಡಿಕೆ ಪಟ್ಟಿ ಪಡೆದು ಓದುಗರಿಗೆ ಅನುಕೂಲವಾಗುವಂತೆ ಪುಸ್ತಕಗಳನ್ನು ಒದಗಿಸಬೇಕು. ಶಾಖಾ ಗ್ರಂಥಾಲಯ ಹಾಗೂ ಸ್ಪರ್ಧಾತ್ಮಕ ಅಧ್ಯಯನ ಕೇಂದ್ರ, ಶಾಖಾ ಗ್ರಂಥಾಲಯಗಳಿಗೆ ಪುಸ್ತಕಗಳನ್ನು ಸರಬರಾಜು ಮಾಡಬೇಕು. ಗ್ರಂಥಾಲಯದಲ್ಲಿ ಓದುಗರಿಗೆ ಪುಸ್ತಕ ಸುಲಭವಾಗಿ ದೊರಕುವಂತೆ ವ್ಯವಸ್ಥಿತವಾಗಿ ಕ್ರಮವಹಿಸಿ, ಸೂಚನಾ ಫಲಕಗಳನ್ನು ಅಳವಡಿಸಬೇಕು ಎಂದು ಸಲಹೆ ನೀಡಿದರು.

ಮುಖ್ಯ ಗ್ರಂಥಾಲಯಾಧಿಕಾರಿ ಪಿ.ಆರ್‌. ತಿಪ್ಪೇಸ್ವಾಮಿ ಮಾತನಾಡಿ, ಜಿಲ್ಲಾ ಗ್ರಂಥಾಲಯದ ಕಾಂಪೌಂಡ್‌ ಗೋಡೆ ಪುನರ್‌ ನಿರ್ಮಾಣಕ್ಕೆ ನಿರ್ಮಿತಿ ಕೇಂದ್ರದಿಂದ ಅಂದಾಜುಪಟ್ಟಿ ಪಡೆಯಲಾಗಿದೆ. ಜಿಲ್ಲಾ ಮತ್ತು ನಗರ ಪ್ರಾ ಧಿಕಾರ ನಿಧಿಯಿಂದ 2020-21ನೇ ಸಾಲಿನ ಆಯವ್ಯಯದಲ್ಲಿ 3.14 ಲಕ್ಷಗಳನ್ನು ನೀಡಲಾಗಿದೆ. ಉಳಿದ ಅನುದಾನವನ್ನು ಕಾಮಗಾರಿ ಮುಕ್ತಾಯವಾದ ಬಳಿಕ ನೀಡಲಾಗುವುದು. ಹಿರಿಯೂರು ಶಾಖಾ ಗ್ರಂಥಾಲಯಕ್ಕೆ ಹೆಚ್ಚಿನ ಓದುಗರು ಬರುವುದರಿಂದ ಹೆಚ್ಚುವರಿಯಾಗಿ 2ನೇ ಮಹಡಿ ಕಟ್ಟಡ ನಿರ್ಮಾಣಕ್ಕೆ ಬೇಡಿಕೆ ಇದೆ. ಹಾಗಾಗಿ ಇಲಾಖೆಯಿಂದ ಹಣ ಬಿಡುಗಡೆಯಾದ ಬಳಿಕ ಕ್ರಮ ಕೈಗೊಳ್ಳಲಾಗುವುದು ಎಂದರು.

12 ಲಕ್ಷ ಡಿಜಿಟಲ್‌ ಸದಸ್ಯತ್ವ ನೋಂದಣಿ: ಚಿತ್ರದುರ್ಗ ಜಿಲ್ಲೆಯಲ್ಲಿ 2022ರ ಮಾರ್ಚ್‌ 20ರ ಅಂತ್ಯಕ್ಕೆ 12,71,838 ಡಿಜಿಟಲ್‌ ಗ್ರಂಥಾಲಯದ ಸದಸ್ಯತ್ವ ಪಡೆದಿದ್ದಾರೆ. ರಾಜ್ಯದಲ್ಲಿ ಚಿತ್ರದುರ್ಗ ಆರನೇ ಸ್ಥಾನದಲ್ಲಿದೆ. 2022 ಮಾರ್ಚ್‌ 20ರ ಅಂತ್ಯಕ್ಕೆ ಇಲಾಖೆಯಲ್ಲಿ 2,23 ಕೋಟಿ ಡಿಜಿಟಲ್‌ ಸದಸ್ಯತ್ವ ಹೊಂದಿದ್ದಾರೆ. 2022-23ನೇ ಸಾಲಿನ ಜಿಲ್ಲಾ ಗ್ರಂಥಾಲಯ ಪ್ರಾಧಿಕಾರದಲ್ಲಿ ಒಟ್ಟು ರೂ.98 ಲಕ್ಷ ಅಂದಾಜು ಆದಾಯದ ನಿರೀಕ್ಷೆ ಇದೆ. ಇದರಲ್ಲಿ ಅಂದಾಜು 77.90 ಲಕ್ಷ ವ್ಯಯವಾಗುವ ನಿರೀಕ್ಷೆ ಇದೆ. ರೂ.2.10ಲಕ್ಷ ಉಳಿತಾಯವಾಗಲಿದೆ ಎಂದರು.

ಗ್ರಂಥಾಲಯ ಅಭಿವೃದ್ಧಿಗೆ ಹಲವು ವಿಷಯಗಳಿಗೆ ಸಭೆ ಅನುಮೋದನೆ ನೀಡಿತು. ಸಭೆಯಲ್ಲಿ ಜಿಲ್ಲಾ ಗ್ರಂಥಾಲಯ ಪ್ರಾಧಿಕಾರದ ಸದಸ್ಯರಾದ ಸಿ.ಬಿ.ಶೈಲ, ಲಿಂಗರಾಜು, ಚೋಳಗಟ್ಟ ಗ್ರಾಪಂ ಸದಸ್ಯ ಸುರೇಶ್‌ ಉಗ್ರಾಣ, ಎಂ.ಕೆ. ಹಟ್ಟಿ ಗ್ರಾಪಂ ಸದಸ್ಯೆ ನಾಗರತ್ನಮ್ಮ, ಡಿಡಿಪಿಇ ಕೆ.ರವಿಶಂಕರ್‌ ರೆಡ್ಡಿ, ಹೊಳಲ್ಕೆರೆ ಬಿಇಒ ಸಿ.ಎಂ.ತಿಪ್ಪೇಸ್ವಾಮಿ ಸೇರಿದಂತೆ ಗ್ರಂಥಾಲಯ ಸಿಬ್ಬಂದಿ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next