ಬಳ್ಳಾರಿ: ನಗರದ ಬುಡಾ ಕಚೇರಿ ಸಭಾಂಗಣದಲ್ಲಿ ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರದ ಸಾಮಾನ್ಯ ಸಭೆ ಬುಧವಾರ ನಡೆಯಿತು.
ಪ್ರಾಧಿಕಾರದ ಅಧ್ಯಕ್ಷ ದಮ್ಮೂರು ಶೇಖರ್ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ನಗರದ ಡಾ| ರಾಜಕುಮಾರ್ ಉದ್ಯಾನವನದ ಅಭಿವೃದ್ಧಿ, ಗೋನಾಳ್ ಗ್ರಾಮದಲ್ಲಿ ನೂತನ ವಸತಿ ಬಡಾವಣೆ ನಿರ್ಮಾಣ, ಬಳ್ಳಾರಿ ಮಾಸ್ಟರ್ ಪ್ಲ್ಯಾನ್‌ಗೆ 12 ಗ್ರಾಮಗಳ ಸೇರ್ಪಡೆ ಸೇರಿದಂತೆ ಹಲವಾರು ವಿಷಯಗಳ ಬಗ್ಗೆ ಚರ್ಚಿಸಿ ಸಭೆಯ ಒಪ್ಪಿಗೆ ಪಡೆಯಲಾಯಿತು.
ನಗರದ ಡಾ| ರಾಜಕುಮಾರ್ ಉದ್ಯಾನವನ ಹಾಗೂ ಕೆರೆಯನ್ನು 6.48 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸುವುದಕ್ಕೆ ಹಾಗೂ ಸಂಪರ್ಕ ರಸ್ತೆ ಕಲ್ಪಿಸುವುದಕ್ಕೆ ತೀರ್ಮಾನ ತೆಗೆದುಕೊಳ್ಳಲಾಗಿದೆ. ನಗರದ ಕೊಳಚೆ ಪ್ರದೇಶಗಳನ್ನು 77 ಲಕ್ಷ ರೂ ವೆಚ್ಚದಲ್ಲಿ ಅಭಿವೃದ್ಧಿಪಡಿಸುವುದಕ್ಕೆ ತೀರ್ಮಾನಿಸಲಾಯಿತು.
ಬಿ.ಗೋನಾಳ್ ಗ್ರಾಮದಲ್ಲಿ ಪ್ರಾಧಿಕಾರ ಮತ್ತು ರೈತರ ಸಹಭಾಗಿತ್ವದಲ್ಲಿ 101.98 ಎಕರೆ ಜಮೀನಿನಲ್ಲಿ 50:50 ಅನುಪಾತದಂತೆ, ಪ್ರಾಧಿಕಾರ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ವಸತಿ ಬಡಾವಣೆನಿರ್ಮಿಸಲು ಇ-ಟೆಂಡರ್ ಪ್ರಾಕ್ಯೂಮೆಂಟ್ ಮುಖಾಂತರ ಟೆಂಡರ್ ಕರೆಯಲು ಸಭೆಯಲ್ಲಿ ಒಪ್ಪಿಗೆ ನೀಡಲಾಯಿತು. ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಲಭ್ಯವಿರುವ ನಾಗರಿಕ ಸೌಲಭ್ಯ ನಿವೇಶನಗಳನ್ನು ಬಹಿರಂಗ ಹರಾಜಿನ ಮೂಲಕ ಹಂಚಿಕೆ ಮಾಡುವುದಕ್ಕೆ ಸಾಮಾನ್ಯ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಯಿತು ಎಂದು ಅಧ್ಯಕ್ಷ ದಮ್ಮೂರು ಶೇಖರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಗರಾಭಿವೃದ್ಧಿ ಪ್ರಾಧಿಕಾರದ ಮಾಸ್ಟರ್ ಪ್ಲ್ಯಾನ್ ನಲ್ಲಿ 12 ಗ್ರಾಮಗಳನ್ನು ಸೇರ್ಪಡೆ ಮಾಡುವ ಬಗ್ಗೆ ಹಾಗೂ ನಗರದ ವಿವಿಧ ಸ್ಥಳಗಳಲ್ಲಿ 1 ಕೋಟಿ ರೂ. ವೆಚ್ಚದಲ್ಲಿ ಸ್ವಾಗತ ಫಲಕ, 1 ಕೋಟಿ ವೆಚ್ಚದಲ್ಲಿ ಶುದ್ಧ ಕುಡಿವ ನೀರಿನ ಘಟಕ, 1 ಕೋಟಿ ಹೈ-ಮಾಸ್ಟ್ ಕಾಮಗಾರಿಗಳ ಕೈಗೆತ್ತಿಕೊಳ್ಳುವುದರ ಕುರಿತು ವಿವರಿಸಿದರು. ಪ್ರಾಧಿಕಾರದ ವ್ಯಾಪ್ತಿಯ ಹಳ್ಳಿಗಳಿಗೆ ಸ್ವಾಗತ ಫಲಕಗಳನ್ನು ನಿರ್ಮಿಸುವುದು ಮತ್ತು ಖಾಸಗಿ ವಸತಿ ವಿನ್ಯಾಸದ ಅಂತಿಮ ಹಂತದ ನಿವೇಶನವನ್ನು ಬಿಡುಗಡೆ ಮಾಡುವ ಕುರಿತು ಚರ್ಚಿಸಲಾಯಿತು. ಪ್ರಾಧಿಕಾರದ ವ್ಯಾಪ್ತಿಯಲ್ಲಿನ
ಅನುಮೋದಿತ/ ಟಿ.ಎಸ್. ನಂಬರ್‌ಗಳ ನಿವೇಶನ ಉಪ ವಿಭಜನೆ ಕೋರಿ ಬಂದ ಅರ್ಜಿಗಳ ಬಗ್ಗೆಯೂ ಚರ್ಚೆ ನಡೆಯಿತು. ಪಿಪಿಪಿ ಮಾದರಿಯಲ್ಲಿ ನಗರದ 3 ಭಾಗಗಳಲ್ಲಿ ಪ್ರಾಧಿಕಾರ ಆವರಣದ ಎರಡುಸ್ಥಳಗಳಲ್ಲಿ ಮತ್ತು ಆಯುಕ್ತರ ವಸತಿಗೃಹದ ಬಳಿ ವಾಣಿಜ್ಯ ಮಳಿಗೆ ನಿರ್ಮಿಸುವುದಕ್ಕೆ ಸಭೆ ಒಪ್ಪಿಗೆ ನೀಡಿತು. ಖಾಲಿ ನಿವೇಶನಗಳಿಗೆ ಸ್ವತ್ಛಗೊಳಿಸುವ ಸಂಬಂಧ ಪಾಲಿಕೆಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಲಾಗುವುದು ಎಂದು ದಮ್ಮೂರು ಶೇಖರ್ ತಿಳಿಸಿದರು.
ಕೈಗಾರಿಕೆ ಬಹುನಿವೇಶನ ವಿನ್ಯಾಸನಕ್ಷೆ ಅನುಮೋದನೆ, ಖಾಸಗಿ ವಸತಿ ವಿನ್ಯಾಸ ನಕ್ಷೆ ಅನುಮೋದನೆ ನೀಡಲು, ಜಮೀನುಗಳಿಗೆ ಭೂ-ಉಪಯೋಗ ಬದಲಾವಣೆಗೆ ಅನುಮೋದನೆ ನೀಡುವ ಬಗ್ಗೆ ಚರ್ಚಿಸಲಾಯಿತು.
ನಗರ ಶಾಸಕ ಜಿ.ಸೋಮಶೇಖರ್ ರೆಡ್ಡಿ, ವಿಧಾನ ಪರಿಷತ್ ಸದಸ್ಯರಾದ ಕೆ.ಸಿ. ಕೊಂಡಯ್ಯ, ಅಲ್ಲಂ ವೀರಭದ್ರಪ್ಪ, ಎಡಿಸಿ ಮಂಜುನಾಥ್, ಬುಡಾ ಆಯುಕ್ತ ಈರಪ್ಪ ಬಿರಾದಾರ, ಇಂಜಿನೀಯರ್ ರವಿಶಂಕರ್, ಜಿಲ್ಲಾ ಆರೊಗ್ಯ, ಲೋಕೋಪಯೋಗಿ, ಜೆಸ್ಕಾಂ ಸೇರಿ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.