ಬೆಂಗಳೂರು: ರಾಜ್ಯಮಟ್ಟದ ಏಕಗವಾಕ್ಷಿ ಅನುಮೋದನ ಸಮಿತಿ ಸಭೆಯಲ್ಲಿ ಸುಮಾರು 2,627.88 ಕೋಟಿ ರೂ. ಮೊತ್ತದ ಸುಮಾರು 59 ಕೈಗಾರಿಕಾ ಯೋಜನೆಗಳಿಗೆ ಅನುಮೋದನೆ ದೊರಕಿದ್ದು, ಇದರಿಂದ 9,764 ಉದ್ಯೋಗ ಸೃಷ್ಟಿ ಆಗಲಿದೆ.
ಸಚಿವ ಮುರುಗೇಶ ನಿರಾಣಿ ಅಧ್ಯಕ್ಷತೆಯಲ್ಲಿ ನಡೆದ ಈ ಸಭೆಯಲ್ಲಿ ಒಟ್ಟಾರೆ 59 ಯೋಜನೆಗಳ ಪೈಕಿ ಪ್ರಮುಖ ಏಳು ಬೃಹತ್ ಮತ್ತು ಮಧ್ಯಮ ಯೋಜನೆಗಳಿಗೂ ಅನುಮೋದನೆ ದೊರಕಿದೆ. ಇದರಿಂದ 3,860 ಜನರಿಗೆ ಉದ್ಯೋಗಾವಕಾಶ ದೊರೆಯಲಿದೆ.
ಅದೇ ರೀತಿ, 15ರಿಂದ 50 ಕೋಟಿ ಮೊತ್ತದ ಒಳಗಿನ 48 ಯೋಜನೆಗಳಿಗೆ ಅನುಮೋದನೆ ನೀಡಲಾಗಿದ್ದು, ಇದರ ಒಟ್ಟು ಮೊತ್ತ 923 ಕೋಟಿ ರೂ. ಆಗಿದ್ದು, 4,444 ಜನರಿಗೆ ಉದ್ಯೋಗ ಲಭಿಸಲಿದೆ. ಇನ್ನು ಹೆಚ್ಚುವರಿ ಬಂಡವಾಳ ಹೂಡಿಕೆಯ ನಾಲ್ಕು ಯೋಜನೆಗಳಿಗೂ ಇದೇ ವೇಳೆ ಅನುಮೋದನೆ ನೀಡಲಾಗಿದ್ದು, 852.73 ಕೋಟಿ ಬಂಡವಾಳ ಹರಿದುಬರಲಿದೆ. 1,460 ಜನರಿಗೆ ಉದ್ಯೋಗ ದೊರೆಯಲಿದೆ ಎಂದು ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.