Advertisement

ರೋಹಿತ್ ಚಕ್ರತೀರ್ಥ ಮತ್ತು ಸಮಿತಿ ಸದಸ್ಯರಿಗೆ ಸೂಕ್ತ ಪೊಲೀಸ್ ಭದ್ರತೆ; ಮನವಿ

09:09 PM Jun 02, 2022 | Vishnudas Patil |

ಸಾಗರ: ರೋಹಿತ್ ಚಕ್ರತೀರ್ಥ ಅಧ್ಯಕ್ಷತೆಯ ಪಠ್ಯಪುಸ್ತಕಗಳ ಪರಿಷ್ಕರಣಾ ಸಮಿತಿ ತಯಾರಿಸಿರುವ ಪಠ್ಯಪುಸ್ತಕಗಳನ್ನು ಮುದ್ರಿಸಬೇಕು. ಸರ್ಕಾರ ಅಪಪ್ರಚಾರಗಳಿಗೆ ಕಿವಿಗೊಡಬಾರದು. ನಕಲಿ ಬುದ್ಧಿಜೀವಿಗಳ ಮಾತಿಗೆ ಮನ್ನಣೆ ನೀಡಬಾರದು. ರೋಹಿತ್ ಚಕ್ರತೀರ್ಥ ಮತ್ತು ಸಮಿತಿ ಸದಸ್ಯರಿಗೆ ಸೂಕ್ತ ಪೊಲೀಸ್ ಭದ್ರತೆ ಒದಗಿಸುವಂತೆ ಒತ್ತಾಯಿಸಿ ಗುರುವಾರ ಕರ್ನಾಟಕ ಪಠ್ಯಪುಸ್ತಕ ಸಂರಕ್ಷಣಾ ವೇದಿಕೆ ವತಿಯಿಂದ ಉಪವಿಭಾಗಾಧಿಕಾರಿಗಳ ಕಚೇರಿ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.

Advertisement

ಈ ಸಂದರ್ಭದಲ್ಲಿ ಮಾತನಾಡಿದ ಸಮಿತಿಯ ಪ್ರಧಾನ ಸಂಚಾಲಕ ಮ.ಸ.ನಂಜುಂಡಸ್ವಾಮಿ, ರೋಹಿತ್ ನೇತೃತ್ವದ ಪಠ್ಯಪುಸ್ತಕ ಪರಿಷ್ಕರಣಾ ಸಮಿತಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಕೆಲವು ನಕಲಿ ಬುದ್ಧಿಜೀವಿಗಳು, ಎಡಪಂಥೀಯರು, ಕೋಮುವಾದಿಗಳು ಮತ್ತು ಸರ್ಕಾರದ ಜನಪ್ರಿಯ ಕಾರ್ಯಕ್ರಮಗಳನ್ನು ಸಹಿಸದವರು ಅನಗತ್ಯವಾಗಿ ವಿವಾದ ಸೃಷ್ಟಿ ಮಾಡುತ್ತಿದ್ದಾರೆ. ವಿರೋಧ ಮಾಡುತ್ತಿರುವವರು ಬಹಿರಂಗ ಚರ್ಚೆಗೆ ಬರಲಿ. ಅದನ್ನು ಬಿಟ್ಟು ಅನಗತ್ಯವಾಗಿ ರಾಜ್ಯದ ಜನರಿಗೆ ತಪ್ಪು ಸಂದೇಶ ತರುವ ಇಂತಹ ಕೆಲಸ ಸರಿಯಲ್ಲ. ರೋಹಿತ್ ಕುವೆಂಪು ಅವರಿಗೆ ಅವಮಾನ ಮಾಡಿದ್ದಾರೆ ಎನ್ನುವುದು ಅಪ್ಪಟ ಸುಳ್ಳು. ರಾಜ್ಯದಲ್ಲಿ ಅಶಾಂತಿ ಸೃಷ್ಟಿಸಿ ಸರ್ಕಾರಕ್ಕೆ ಕೆಟ್ಟ ಹೆಸರು ತರುವ ಇಂತಹ ಪ್ರಯತ್ನ ಸರಿಯಲ್ಲ. ಕುವೆಂಪು ಸೇರಿದಂತೆ ಅನೇಕ ಸಾಧಕರನ್ನು ಜಾತಿಯೊಂದಕ್ಕೆ ಸೀಮಿತಗೊಳಿಸುವುದು ಸರಿಯಾದ ಕ್ರಮವಲ್ಲ. ಸರ್ಕಾರ ಈ ಸಮಿತಿ ತಯಾರಿಸಿದ ಪಠ್ಯಪುಸ್ತಕಕ್ಕೆ ಮಾನ್ಯತೆ ನೀಡಬೇಕು ಎಂದು ಒತ್ತಾಯಿಸಿದರು.

ನಿವೃತ್ತ ಪ್ರಾಚಾರ್ಯ ಅ.ಪು.ನಾರಾಯಣಪ್ಪ ಮಾತನಾಡಿ, ರಾಜ್ಯದಲ್ಲಿ ಪಠ್ಯಪುಸ್ತಕದ ಹೆಸರಿನಲ್ಲಿ ಕೆಲವರು ಅನಗತ್ಯ ವಿವಾದ ಸೃಷ್ಟಿಸುವ ಪ್ರಯತ್ನ ನಡೆಸುತ್ತಿದ್ದಾರೆ. ಸದರಿ ಪಠ್ಯಪುಸ್ತಕ ರಚನಾ ಸಮಿತಿ ಉತ್ತಮವಾಗಿ ಕೆಲಸ ಮಾಡುತ್ತಿದೆ. ಇಷ್ಟು ವರ್ಷಗಳ ಕಾಲ ಪ್ರಚಾರವೇ ಸಿಗದ ಅನೇಕ ಮಾನ್ಯರ ಸಾಧನೆಗಳನ್ನು ಪಠ್ಯದಲ್ಲಿ ಸೇರಿಸುವ ಮೂಲಕ ರಾಜ್ಯದ ಮಕ್ಕಳಿಗೆ ನಮ್ಮ ನಿಜವಾದ ಇತಿಹಾಸವನ್ನು ತಿಳಿಸುವ ಪ್ರಯತ್ನ ಮಾಡಿದೆ. ಇಷ್ಟು ವರ್ಷಗಳ ಕಾಲ ಪಠ್ಯಪುಸ್ತಕ ರಚನೆ ಕೆಲವರ ಹಿಡಿತದಲ್ಲಿತ್ತು. ಈಗ ವಾಮಪಂಥದವರ ಹಿಡಿತದಿಂದ ತಪ್ಪಿ ಹೋಗುವ ಸಂದರ್ಭ ಬಂದಿದ್ದರಿಂದ ಬೆರಳೆಣಿಕೆಯ ವ್ಯಕ್ತಿಗಳು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಸರ್ಕಾರ ಅನಗತ್ಯವಾಗಿ ವಿರೋಧ ಮಾಡುವವರ ಮಾತಿಗೆ ಸೊಪ್ಪು ಹಾಕದೆ ರೋಹಿತ್ ರಚಿಸಿದ ಪಠ್ಯಪುಸ್ತಕಕ್ಕೆ ಆದ್ಯತೆ ನೀಡಬೇಕು ಎಂದು ಒತ್ತಾಯಿಸಿದರು.

ನಗರಸಭೆ ಅಧ್ಯಕ್ಷೆ ಮಧುರಾ ಶಿವಾನಂದ್ ಮಾತನಾಡಿದರು. ಪ್ರತಿಭಟನೆಯಲ್ಲಿ ನಗರಸಭೆ ಉಪಾಧ್ಯಕ್ಷ ವಿ.ಮಹೇಶ್, ಸ್ಥಾಯಿ ಸಮಿತಿ ಅಧ್ಯಕ್ಷ ಅರವಿಂದ ರಾಯ್ಕರ್, ಸದಸ್ಯರಾದ ಪುರುಷೋತ್ತಮ್, ಸವಿತಾ ವಾಸು, ಬಿ.ಎಚ್.ಲಿಂಗರಾಜ್, ಸತೀಶ್ ಕೆ., ಪ್ರೇಮ ಸಿಂಗ್, ಮೈತ್ರಿ ಪಾಟೀಲ್, ಸಂತೋಷ್ ಶೇಟ್, ಪ್ರಮುಖರಾದ ರಾಜೇಂದ್ರ ಪೈ ಹಾರಾಡಿ, ಕೃಷ್ಣ ಶೇಟ್, ಕೆ.ವಿ.ಪ್ರವೀಣ್, ನಾರಾಯಣಮೂರ್ತಿ, ಎಚ್.ಕೆ.ಪರಮಾತ್ಮ, ಪರಶುರಾಮ್ ಇನ್ನಿತರರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next