Advertisement

ಲಿಂಗಾಯತಕ್ಕೆ ಸ್ವತಂತ್ರ ಧರ್ಮದ ಮಾನ್ಯತೆ ನೀಡಿ

08:02 AM Nov 06, 2017 | Team Udayavani |

ಹುಬ್ಬಳ್ಳಿ: ಲಿಂಗಾಯತ ಧರ್ಮಕ್ಕೆ ಸ್ವತಂತ್ರ ಮತ್ತು ಅಲ್ಪಸಂಖ್ಯಾತ ಸಮುದಾಯದ ಮಾನ್ಯತೆ ನೀಡುವಂತೆ ಒತ್ತಾಯಿಸಿ ಲಿಂಗಾಯತ ಧರ್ಮ ಹೋರಾಟಗಾರರು ಹಾಗೂ ಮಠಾಧೀಶರು ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.

Advertisement

ಇಲ್ಲಿನ ನೆಹರು ಮೈದಾನದಲ್ಲಿ ಭಾನುವಾರ ನಡೆದ ಬೃಹತ್‌ ಸಮಾವೇಶದ ನಂತರ ಆರಂಭವಾದ ಬೃಹತ್‌ ರ್ಯಾಲಿ ಕೊಪ್ಪೀಕರ್‌ ರಸ್ತೆ, ಕೋಯಿನ್‌ ರಸ್ತೆ, ಸ್ಟೇಷನ್‌ ರಸ್ತೆ, ಡಾ| ಬಿ.ಆರ್‌.ಅಂಬೇಡ್ಕರ್‌ ವೃತ್ತದ ಮೂಲಕ ಚನ್ನಮ್ಮ ವೃತ್ತಕ್ಕೆ ಆಗಮಿಸಿತು. ಅಲ್ಲಿ ಜಿಲ್ಲಾಧಿಕಾರಿಗಳ ಮೂಲಕ ಮನವಿ ಸಲ್ಲಿಸಲಾಯಿತು. ಬಸವರಾಜ ಹೊರಟ್ಟಿ, ವಿಧಾನ ಪರಿಷತ್‌ ಸದಸ್ಯ ಬಸವರಾಜ ಹೊರಟ್ಟಿ ಮಾತನಾಡಿ, ಇತರ ಧರ್ಮಗಳಂತೆ ಲಿಂಗಾಯತ ಸ್ವತಂತ್ರ ಧರ್ಮವಾಗಿ 900 ವರ್ಷಗಳಾಗಿದೆ. ದೇಶಕ್ಕೆ ಸ್ವಾತಂತ್ರ್ಯ ಸಿಕ್ಕ ನಂತರ
ಲಿಂಗಾಯತ ಧರ್ಮ ಸ್ವಾತಂತ್ರ್ಯ ಕಳೆದುಕೊಂಡಿದೆ. 1951ರಿಂದ ನಮ್ಮನ್ನು ಹಿಂದೂ ಲಿಂಗಾಯತ ಪರಿಭಾಷೆಯಡಿಯಲ್ಲಿ ಸೇರಿಸಿರುವುದರಿಂದ ನಮ್ಮ ಧಾರ್ಮಿಕ ಹಕ್ಕಿನ ಉಲ್ಲಂಘನೆಯಾಗಿದೆ. ಇತರ ಧರ್ಮಗಳಿಗೆ ನೀಡಿದ ಅಲ್ಪಸಂಖ್ಯಾತ ಮನ್ನಣೆ ನಮಗೆ
ದೊರೆಯದ ಕಾರಣ ಲಿಂಗಾಯತರಿಗೆ ದೊಡ್ಡ ಅನ್ಯಾಯವಾಗಿದೆ. ಸ್ವತಂತ್ರ ಧರ್ಮಕ್ಕಾಗಿ 1940ರಿಂದ ಹೋರಾಟ ಆರಂಭವಾಗಿದೆ. ಆ ಹೋರಾಟ ಇದೀಗ ಹೊಸ ಸ್ವರೂಪ ಪಡೆದುಕೊಂಡಿದೆ. ಸರಕಾರ ಲಿಂಗಾಯತ ಧರ್ಮಕ್ಕೆ ಸಾಂವಿಧಾನಿಕ ಮಾನ್ಯತೆ ನೀಡಬೇಕು. ಈ ನಿಟ್ಟಿನಲ್ಲಿ ರಾಜ್ಯ ಸರಕಾರ ಕೇಂದ್ರ ಸರಕಾರಕ್ಕೆ ಶಿಫಾರಸು ಮಾಡಬೇಕು ಎಂದು ಒತ್ತಾಯಿಸಿದರು.

ನಮ್ಮದು ಶನಿ ಸಂತಾನವಲ್ಲ, ಶರಣ ಸಂತಾನ 
ಹುಬ್ಬಳ್ಳಿ: “ಕೆಲವರು ನಮ್ಮನ್ನು ಶನಿ ಸಂತಾನ ಎಂದು ಟೀಕಿಸಿದ್ದಾರೆ. ಆದರೆ, ನಮ್ಮದು ಶನಿ ಸಂತಾನವಲ್ಲ, ಶರಣ ಸಂತಾನವಾಗಿದೆ. ಬಸವ ಧರ್ಮ ಜಾಗತಿಕ ಧರ್ಮವಾಗಿ ರೂಪುಗೊಳ್ಳಬೇಕು. ಈ ನಿಟ್ಟಿನಲ್ಲಿ ನಾವು ಯಾವುದೇ ತ್ಯಾಗಕ್ಕೂ ಸಿದ್ಧ’ ಎಂದು ಸಚಿವ 
ಎಂ.ಬಿ.ಪಾಟೀಲ ಹೇಳಿದರು.

ಲಿಂಗಾಯತ ಸ್ವತಂತ್ರ ಧರ್ಮ ಹೋರಾಟ ಸಮಾವೇಶದಲ್ಲಿ ಮಾತನಾಡಿದ ಅವರು, ಶರಣರ ವಚನಗಳ ಹೆಸರಲ್ಲಿ ಖೊಟ್ಟಿ ವಚನಗಳನ್ನು ಸೃಷ್ಟಿಸಿ ಇಲ್ಲವೆ ಖೊಟ್ಟಿ ಸಾಹಿತ್ಯ ಸೇರಿಸಿ ಶರಣರು ಸಹ ಇದೇ ಪರಂಪರೆ, ಪದ್ಧತಿ ಅನುಸರಿಸುತ್ತಿದ್ದರು ಎಂದು
ಬಿಂಬಿಸುವ ಯತ್ನ ಮಾಡಲಾಗಿದೆ. ಇದೀಗ ಸಮಾಜಕ್ಕೆ ಜಾಗೃತಿ ಬಂದಿದ್ದು, ನಮ್ಮನ್ನು ದಾರಿ ತಪ್ಪಿಸುವುದು ಸುಲಭವಲ್ಲ. 1942ರಲ್ಲಿಯೇ ಕೆಎಲ್‌ಇ ಸಂಸ್ಥೆಯ ಸಪ್ತಋಷಿಗಳು ಸೇರಿ ಒಟ್ಟು 55 ಜನರು ಸಹಿ ಮಾಡಿ ಲಿಂಗಾಯತ ಸ್ವತಂತ್ರ ಧರ್ಮದ ಮಾನ್ಯತೆ ಬೇಡಿಕೆ ಇರಿಸಿದ್ದರು. ವೀರಶೈವ ಮಹಾಸಭಾದವರು ಕೇವಲ ಕುರ್ಚಿಗಾಗಿ ನಮ್ಮ ಹೋರಾಟಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆಂದು ಆರೋಪಿಸಿದರು.

ಬಿಜೆಪಿ ನಾಯಕ ಜಗದೀಶ ಶೆಟ್ಟರ ಅವರಿಗೆ ಬಸವರಾಜ ಹೊರಟ್ಟಿ ಅವರು ಸಮಾವೇಶಕ್ಕೆ ಆಗಮಿಸುವಂತೆ ಖುದ್ದಾಗಿ ಆಹ್ವಾನ ನೀಡಿದ್ದರೂ ಅವರು ಬಂದಿಲ್ಲ. ಇವರಿಗೆ ಲಿಂಗಾಯತ ಹೆಸರಲ್ಲಿ ಟಿಕೆಟ್‌, ಸಚಿವ, ಮುಖ್ಯಮಂತ್ರಿ ಸ್ಥಾನ ಬೇಕು. ಆದರೆ ಬಾಲ ಹಿಡಿಯುವುದು ಮಾತ್ರ ವೀರಶೈವರದ್ದು ಎಂದು ಟೀಕಿಸಿದರು.

Advertisement

ಕಲ್ಯಾಣ ಕ್ರಾಂತಿಯ ನಂತರದಲ್ಲಿ ಬಹು ದೊಡ್ಡ ಜನ ಹೋರಾಟ ಇದಾಗಿದೆ. ಸುಮಾರು 500 ವರ್ಷಗಳಿಂದ ನಮ್ಮನ್ನು ಅಜ್ಞಾತಕ್ಕೆ ತಳ್ಳಿ ಸ್ವಾರ್ಥಕ್ಕೆ ಬಳಸಿಕೊಳ್ಳಲಾಗಿತ್ತು. ಇದೀಗ ಕತ್ತಲೆ ಕಳೆದಿದ್ದು, ಜಾಗೃತಿ ಮೂಡಿದೆ. 
●ಡಾ|ಎಸ್‌.ಎಂ.ಜಾಮದಾರ, ನಿವೃತ್ತ ಐಎಎಸ್‌ ಅಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next