ಬೆಂಗಳೂರು: ಕೋವಿಡ್ 19 ಹಿನ್ನೆಲೆಯಲ್ಲಿ ಜಾರಿಯಿರುವ ನಿರ್ಬಂಧ ಕಟ್ಟುನಿಟ್ಟಾಗಿ ಜಾರಿಗೊಳಿಸಲು ನಗರ ಪೊಲೀಸ್ ಸಿಬ್ಬಂದಿ ಕಾರ್ಯವೈಖರಿಗೆ ಉತ್ತಮ ಪ್ರಶಂಸೆ ವ್ಯಕ್ತವಾಗುತ್ತಿದೆ. ಆದರೆ, ಪೊಲೀಸ್ ಸಿಬ್ಬಂದಿಯಲ್ಲೂ ಕೋವಿಡ್ 19 ಸಣ್ಣಮಟ್ಟಿಗಿನ ಆತಂಕ ಸೃಷ್ಟಿಸಿದೆ. ಹೀಗಾಗಿ ಅತ್ಯಂತ ಮುಂಜಾಗ್ರತಾ ಕ್ರಮ ಅನುಸರಿಸಿಯೇ ಕರ್ತವ್ಯ ನಿರ್ವಹಣೆ ಮಾಡುತ್ತಿದ್ದಾರೆ.
ಈ ನಡುವೆಯೇ ಕರ್ತವ್ಯಕ್ಕೆ ಗೈರಾದರೆ, ರಜೆ ಪಡೆದರೆ ವೇತನ ಕಡಿತಗೊಳಿಸಲಾಗುವುದು ಎಂಬ ಹಿರಿಯ ಅಧಿಕಾರಿಗಳ ಮೌಖೀಕ ಆದೇಶ ಸಿಬ್ಬಂದಿಯಲ್ಲಿ ಕೊಂಚ ಬೇಸರಕ್ಕೆ ಕಾರಣವಾಗಿದೆ ಎಂದು ತಿಳಿದು ಬಂದಿದೆ.
ಕೋವಿಡ್ 19 ವಿರುದ್ಧದ ಸಮರದಲ್ಲಿ ಹೋರಾಡಲು ನಾವು ಸಿದ್ಧವಾಗಿದ್ದೇವೆ. ಈ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಿದ್ದೇವೆ. ಆದರೆ, ಕೆಲವೊಮ್ಮೆ ಅನಿವಾರ್ಯ ಸಂದರ್ಭ ಬಂದರೆ ರಜೆ ಪಡೆಯಬೇಕಾಗುತ್ತದೆ. ಹೀಗಾಗಿ ರಜೆ ಪಡೆದರೆ ವೇತನ ಕಡಿತ ಎಂಬ ಮಾತು ಸಿಬ್ಬಂದಿ ಬೇಸರಕ್ಕೆ ಕಾರಣ ಎಂದು ಹೇಳಲಾಗುತ್ತಿದೆ ಜತೆಗೆ, ಮಹಿಳಾ ಸಿಬ್ಬಂದಿಗೆ ಸಾಧ್ಯವಾದರೆ ರಜೆ ಪಡೆಯಲು ಅನುಮತಿ ನೀಡಬಾರದೇಕೆ ಎಂಬ ಮನವಿ ಸಹ ಎದ್ದಿದೆ. ಇಂತಹ ಸಂದರ್ಭದಲ್ಲಿ ಕರ್ತವ್ಯ ನಿರ್ವಹಣೆ ಮಾಡುವುದು ನಮಗೂ ಹೆಮ್ಮೆ ವಿಚಾರ. ನಾವು ಕೂಡ ಕರ್ತವ್ಯ ನಿರ್ವಹಿಸಿದ್ದೇವೆ.
ನಗರ ವಿಭಾಗದಲ್ಲಿ ಹಲವು ಮಹಿಳಾ ಸಿಬ್ಬಂದಿಗೆ ಪುಟ್ಟ ಪುಟ್ಟ ಮಕ್ಕಳಿದ್ದಾರೆ. ಹೀಗಾಗಿ ಇಂತಹ ಸಂದರ್ಭದಲ್ಲಿ ಮಕ್ಕಳ ಆರೋಗ್ಯದ ಕಡೆಗೂ ಹೆಚ್ಚು ಗಮನಹರಿಸಬೇಕಾದ ಅನಿವಾರ್ಯತೆ ಇದೆ. ಹೀಗಾಗಿ, ಅಂತಹ ಮಹಿಳಾ ಸಿಬ್ಬಂದಿಗೆ ಸಾಧ್ಯವಾದರೆ ರಜೆಗೆ ಅವಕಾಶ ನೀಡಬೇಕು ಎಂದು ಹೆಸರು ಹೇಳಲು ಇಚ್ಛಿಸದ ಅಧಿಕಾರಿಯೊಬ್ಬರು ತಿಳಿಸಿದರು.
ಠಾಣೆಯೇ ಮನೆ, ಎಲ್ಲವೂ ಆಗಿದೆ! : ಮತ್ತೂಂದೆಡೆ ಕೋವಿಡ್ 19 ಹಿನ್ನೆಲೆಯಲ್ಲಿ ಹಲವು ಪೊಲೀಸ್ ಸಿಬ್ಬಂದಿಯೂ ತಮ್ಮ ಕುಟುಂಬವನ್ನು ಸ್ವಂತ ಊರುಗಳಿಗೆ ಕಳುಹಿಸಿಕೊಟ್ಟಿದ್ದಾರೆ. ಕೊರೊನಾ ವಿರುದ್ಧಹೋರಾಡಲೇಬೇಕಿದೆ. ಹೀಗಾಗಿ ಮನೆಯವರಿಂದ ಸ್ವಲ್ಪ ಕಾಲ ಅಂತರ ಕಾಯ್ದುಕೊಳ್ಳಲು ಸಿದ್ಧರಿದ್ದೇವೆ. ಹೀಗಾಗಿ, ಕುಟುಂಬವನ್ನು ಊರಿಗೆ ಕಳುಹಿಸಿಕೊಟ್ಟಿದ್ದೇನೆ. ಸದ್ಯಕ್ಕೆ ಠಾಣೆಯೇ ಮನೆಯಾಗಿದೆ. ಊಟವೂ ಠಾಣೆಯಲ್ಲಿಯೇ ತಯಾರಿಸಿಕೊಳ್ಳಲಾಗುತ್ತಿದೆ ಎಂದು ಪೊಲೀಸ್ ಸಿಬ್ಬಂದಿಯೊಬ್ಬರು ಹೇಳಿದರು. ಕೊರೊನಾ ಹಿನ್ನೆಲೆಯಲ್ಲಿ ನಗರದ ಎಲ್ಲಾ ಠಾಣೆಗಳಲ್ಲಿ ಪೊಲೀಸ್ ಸಿಬ್ಬಂದಿಗೆ ಆಹಾರ ತಯಾರಿಸಲಾಗುತ್ತಿದೆ. ಬಳಿಕ ಬೀಟ್ ನಲ್ಲಿ ಕರ್ತವ್ಯದಲ್ಲಿದ್ದವರಿಗೆ ಕೆಲ ಸಿಬ್ಬಂದಿ ಅಹಾರ ನೀಡಿ ಬರುತ್ತಿದ್ದಾರೆ.