ವಧುಪರೀಕ್ಷೆಯ ದಿನ ನಾನು ಹುಡುಗನನ್ನು ನೇರವಾಗಿ ನೋಡಲೇ ಇಲ್ಲ. ಆಮೇಲೊಮ್ಮೆ ಕುತೂಹಲದಿಂದ ಇಣುಕಿ ನೋಡಿದಾಗ ಕಾಣಿಸಿದ ಹುಡುಗ, ಹಿಂದಿನ ವಾರ ಮನೆಗೆ ಬಂದಿದ್ದ ಸುಂದರನೇ ಆಗಿದ್ದ…
ಮೈ ನೆರೆದ ವರ್ಷದಲ್ಲೇ ಮದುವೆ ಮಾಡಿ ಮುಗಿಸುವ ಕಾಲವೊಂದಿತ್ತಲ್ಲ; ಆಗ ನಡೆದ ವಧುಪರೀಕ್ಷೆಯ ಕಥೆಯಿದು. 60ರ ದಶಕದಲ್ಲಿ ನನ್ನಜ್ಜಿ 13 ವರ್ಷಕ್ಕೆ ದೊಡ್ಡವಳಾದಾಗ, ಹುಡುಗನನ್ನು ಹುಡುಕತೊಡಗಿದರು. ಲಂಗ ಕುಪ್ಪಸ ತೊಟ್ಟು, ಉದ್ದವಾಗಿ ಎರಡು ಜಡೆ ಹೆಣೆದುಕೊಂಡು ಆಟವಾಡಿಕೊಂಡಿದ್ದ ಅಜ್ಜಿಗೆ, ಮದುವೆ ಎಂದರೆ ನಾಚಿಕೊಳ್ಳುವುದು ಎಂದಷ್ಟೇ ಗೊತ್ತಿತ್ತಂತೆ. ತನ್ನ ಮದುವೆಯ ಕತೆಯನ್ನು ಆಕೆ ಹೇಳುವುದು ಹೀಗೆ-
“ನನ್ನಪ್ಪ ಊರಿಗೆ ದೊಡ್ಡ ಸಾಹುಕಾರ. 13 ಜನ ಗಂಡು ಮಕ್ಕಳ ನಂತರ ಹುಟ್ಟಿದ ನಾನು, ಮನೆಯ ರಾಜಕುಮಾರಿ, ಅಪ್ಪನ ಮುದ್ದಿನ ಮಗಳು. ನೋಡಲು ಅಂದವಾಗಿದ್ದೆ. ಅವತ್ತೂಂದಿನ ಮನೆಯಲ್ಲಿ ಯಾರೂ ಇರಲಿಲ್ಲ. ಒಬ್ಬಳೇ ಇಬ್ಬರಂತೆ ಲೆಕ್ಕ ಹಾಕಿಕೊಂಡು ಚೌಕಾಬಾರ ಆಡುತ್ತಿದ್ದೆ. “ಮಾವ…’ ಎಂದು ಹೊರಗಿನಿಂದ ಯಾರೋ ಕೂಗಿದಾಗ, ಎದ್ದು ಹೊರಗೆ ಹೋಗಿ ನೋಡಿದೆ. ತೆಳ್ಳಗಿನ, ಬೆಳ್ಳಗಿನ ಚೆಲುವನೊಬ್ಬ, ಕೈಯಲ್ಲಿ ಸುಣ್ಣದ ಮಡಕೆ ಹಿಡಿದು ನಿಂತಿದ್ದ. ಆ ಮೊದಲು ಅವರನ್ನು ನೋಡಿರಲಿಲ್ಲ.
“ಮನೆಯ ಗೋಡೆಯ ಸುಣ್ಣ ಉದುರಿಹೋಗಿದೆ, ಹಚ್ಚಿ ಬಾ ಅಂತ ಕಳುಹಿಸಿದರು ಮಾವ’ ಎಂದ. “ಸರಿ ಬನ್ನಿ’ ಎಂದೆ. ಅವನು ನನ್ನನ್ನೇ ನೋಡುತ್ತಿದ್ದ, ಮುಖದಲ್ಲಿ ಮಂದಹಾಸವಿತ್ತು. “ನಿಚ್ಚಣಿಕೆ ಹಿಡ್ಕೋತೀರಾ, ನಾ ಸುಣ್ಣ ಹಚ್ತೀನಿ’ ಅಂದ. ನಿಚ್ಚಣಿಕೆ ಹತ್ತಿ, ಸುಣ್ಣ ಹಚ್ಚುವಾಗ ಮತ್ತೆ ಮತ್ತೆ ನನ್ನತ್ತ ಕಳ್ಳನೋಟ ಬೀರುತ್ತ, ಲಂಗ- ಕುಪ್ಪಸ ಚೆಂದ ಇದೆ, ಮಾವ ಕೊಡಿಸಿದ್ದಾ? ಅಂದ. ನಂಗೆ ಕೋಪ ಬಂದು ಮುಖ ಊದಿಸಿಕೊಂಡೆ. ಎಲ್ಲಾ ಕೆಲಸ ಮುಗಿಸಿ ಹೋಗುವಾಗ, ನನ್ನ ಹತ್ತಿರ ಬಂದು- “ಹೇ ಹುಡುಗಿ, ಹೇಮಾ ಮಾಲಿನಿ ಥರ ಇದೀಯ ನೀನು’ (ಆಗಷ್ಟೇ ಚೆಂದುಳ್ಳಿ ಚೆಲುವೆ ಹೇಮಮಾಲಿನಿ ಸಿನಿಮಾಕ್ಕೆ ಕಾಲಿಟ್ಟಿದ್ದಳಂತೆ) ಎಂದ.
ನಾನು ಕೋಪದಿಂದ ಅಪ್ಪಂಗೆ ಹೇಳ್ತೀನಿ ಇರು ಎಂದಾಗ, ನಸುನಗುತ್ತಲೇ ಅಲ್ಲಿಂದ ಕಾಲ್ಕಿತ್ತಿದ್ದ. ಸಂಜೆ ಅಪ್ಪ ಬಂದಾಗ- ಸುಣ್ಣ ಮನೇಲಿಟ್ಟು ಬಾ ಅಂತ ಹೇಳಿದ್ದೆ, ಸುಣ್ಣ ಹಚ್ಚಿಯೇ ಹೋದ್ನಾ! ಅಂತ ಬೆರಗಾದ್ರು. ಇದಾದ ವಾರದ ನಂತರ, ನನ್ನ ವಧುಪರೀಕ್ಷೆ ಇತ್ತು. ಅಮ್ಮ ಅವಳ ಸೀರೆಯಲ್ಲಿ ನನ್ನ ಮುಳುಗಿಸಿ, ಒಂದು ಜಡೆ ಹೆಣೆದು, ಹೂ ಮುಡಿಸಿ, ಕುಂಕುಮವಿಟ್ಟು ತಯಾರು ಮಾಡಿದ್ದಳು. ಕೈಕಾಲು ನಡುಗಿಸುತ್ತಾ, ತಲೆ ತಗ್ಗಿಸಿ ಕೊಂಡು ಹೋಗಿ ಚಹಾ ಕೊಟ್ಟು ವಾಪಸ್ ಅಡುಗೆ ಮನೆ ಸೇರಿದ್ದೆ. ಹುಡುಗನನ್ನು ನೋಡಲೇ ಇಲ್ಲ, ಅಪ್ಪ- ಅಮ್ಮ ತೋರಿಸಿದವನನ್ನು ಬಾಯಿ ಮುಚ್ಚಿಕೊಂಡು ಮದುವೆಯಾಗುತ್ತಿದ್ದ ಕಾಲವದು.
ಆಮೇಲೆ, ಕುತೂಹಲ ತಾಳಲಾರದೆ ಇಣುಕಿ ನೋಡಿದಾಗ ಹುಡುಗ ಕಾಣಿಸಿದ. ಅವನೇ, ಹೇಮಮಾಲಿನಿ ಅಂತ ಕರೆದಿದ್ದ ಚೆಲುವ. ಆತ ಅಪ್ಪನ ದೂರದ ಸಂಬಂಧಿಯಂತೆ. ತಂದೆ- ತಾಯಿ ಇಲ್ಲದ, ಅಪ್ಪಟ ಚಿನ್ನದ ಗುಣದ ಹುಡುಗ ಅಂತ ಅಪ್ಪ ನನ್ನನ್ನು ಅವನಿಗೆ ಕೊಟ್ಟು ಮದುವೆ ಮಾಡಿಬಿಟ್ಟರು. ನಂತರದ ನನ್ನ ಜೀವನ ಹೂವಿನ ಹಾಸಿಗೆ- ಅನ್ನುತ್ತಾರೆ ಅಜ್ಜಿ. 25 ವರ್ಷದ ದಾಂಪತ್ಯದಲ್ಲಿ ಒಂದು ದಿನವೂ ಬೈದಿಲ್ಲವಂತೆ ತಾತ. ಮೊದಲ ನೋಟದಲ್ಲೇ ಅಜ್ಜಿಯನ್ನು ಇಷ್ಟಪಟ್ಟಿದ್ದ ತಾತ, ಆಕೆಯನ್ನು ಹೇಮಾ ಮಾಲಿನಿ ಎಂದೇ ಛೇಡಿಸುತ್ತಿದ್ದರಂತೆ.
-ಸೌಮ್ಯಶ್ರೀ ಸುದರ್ಶನ್ ಹಿರೇಮಠ್