Advertisement

4 ವರ್ಷವಾದರೂ ಮುಗಿಯದ “ಸಿ’ಗ್ರೂಪ್‌ ಹುದ್ದೆ ನೇಮಕ

05:04 PM Feb 11, 2021 | Team Udayavani |

ರಾಯಚೂರು: ಸರ್ಕಾರಿ ಹುದ್ದೆಗಳ ನೇಮಕಾತಿಗೆ ಒಂದೆರಡು ವರ್ಷ ಕಾಲಾವಕಾಶ ಹಿಡಿಯುವುದು ಸರ್ವೇ ಸಾಮಾನ್ಯ. ಆದರೆ, ರಾಜ್ಯ ಸರ್ಕಾರ ನಡೆಸಿದ “ಸಿ” ಗ್ರೂಪ್‌ ಹುದ್ದೆಗಳ ನೇಮಕಾತಿ ನಾಲ್ಕು ವರ್ಷವಾದರೂ ಮುಗಿಯದೆ ಪಂಚ ವಾರ್ಷಿಕ ಯೋಜನೆಯಂತಾಗಿದೆ. ಸರ್ಕಾರಿ ಕೆಲಸ ಸಿಕ್ಕಿದೆ ಎಂಬ ಖುಷಿಯಲ್ಲಿದ್ದ ಆಕಾಂಕ್ಷಿಗಳು ಅಂತಿಮ ಆದೇಶ ಸಿಗದೆ ಬೇಸತ್ತು ಹೋಗಿದ್ದಾರೆ. ಮೂರು ಸರ್ಕಾರಗಳು ಬದಲಾದರೂ ನಮ್ಮ ಹಣೆಬರಹ ಬದಲಾಗುತ್ತಿಲ್ಲ ಎಂದು ನೊಂದು ನುಡಿಯುತ್ತಿದ್ದಾರೆ.

Advertisement

ಕರ್ನಾಟಕ ಲೋಕಸೇವಾ ಆಯೋಗವು 18 ಇಲಾಖೆಗಳಲ್ಲಿ ಖಾಲಿಯಿದ್ದ 706 ಹುದ್ದೆಗಳಿಗೆ 2017, ಮಾ.15ರಂದು ಅಧಿ ಸೂಚನೆ ಹೊರಡಿಸಿತ್ತು. 2017ರ ಜೂನ್‌ನಲ್ಲೇ ಪರೀಕ್ಷೆ ನಡೆಸಲಾಯಿತು. 2018ರ ಫೆಬ್ರವರಿಯಲ್ಲಿ ತಾತ್ಕಾಲಿಕ ಆಯ್ಕೆ ಪಟ್ಟಿ ಬಿಡುಗಡೆ ಮಾಡಿದ್ದರೆ; 2018ರಲ್ಲಿ ಅರ್ಹತಾ ಪಟ್ಟಿ ಬಿಡುಗಡೆ ಮಾಡಲಾಗಿತ್ತು. 2019ರ ತಾತ್ಕಾಲಿಕ ಆಯ್ಕೆಪಟ್ಟಿ ಬಿಡುಗಡೆ ಮಾಡಿ ಫೆಬ್ರವರಿಯಲ್ಲಿ ದಾಖಲಾತಿ ಪರಿಶೀಲನೆ ಕೂಡ ನಡೆಯಿತು. 2020ರ ಏಪ್ರಿಲ್‌ನಲ್ಲಿ
ಅಂತಿಮ ಆಯ್ಕೆ ಪಟ್ಟಿ ಬಿಡುಗಡೆ ಮಾಡಲಾಯಿತು.

ಬಳಿಕ ಪೊಲೀಸ್‌ ವೆರಿಫಿಕೇಶನ್‌, ದಾಖಲಾತಿ ಪರಿಶೀಲನೆ, ಸಿಂಧುತ್ವ, ನಡತೆ ಪ್ರಮಾಣ ಪತ್ರ ಹೀಗೆ ನೇಮಕಾತಿಗೆ ಬೇಕಾದ ಎಲ್ಲ ಪ್ರಕ್ರಿಯೆ ಮುಗಿಸಿ, ಆಯಾ ಇಲಾಖೆಗಳಿಗೆ ದಾಖಲೆ ಹಸ್ತಾಂತರಿಸಲಾಗಿದೆ. ಆದರೆ, ಅದಾಗಿ ವರ್ಷ ಕಳೆದರೂ ಈವರೆಗೂ ಸರ್ಕಾರದಿಂದ ನೇಮಕಾತಿ ಆದೇಶ ಮಾತ್ರ ಬಂದಿಲ್ಲ. ಸರ್ಕಾರ ಇದಾದ ಮೇಲೆ ಎಫ್‌ಡಿಎ, ಎಸ್‌ಡಿಎ ನೇಮಕಾತಿ ನಡೆಸಿ ಆದೇಶ ಕೂಡ ನೀಡಿದೆ. ಆದರೆ, “ಸಿ’ ಗ್ರೂಪ್‌ ನೌಕರರ ಬವಣೆ ಮಾತ್ರ ನೋಡುತ್ತಿಲ್ಲ.

ಅಲೆದಲೆದು ಸುಸ್ತಾದ ಆಕಾಂಕ್ಷಿಗಳು: ನೇಮಕಾತಿಗೆ ಆರಂಭಿಸಿದಾಗ ಕಾಂಗ್ರೆಸ್‌ ಸರ್ಕಾರ ಆಡಳಿತದಲ್ಲಿತ್ತು. ಬಳಿಕ ಸಮ್ಮಿಶ್ರ ಸರ್ಕಾರ ಅಧಿ ಕಾರಕ್ಕೆ ಬಂತು. ಈಗ ಬಿಜೆಪಿ ಸರ್ಕಾರ ಅಧಿ ಕಾರದಲ್ಲಿದೆ. ಆದರೂ ನೇಮಕಾತಿ ಪ್ರಕ್ರಿಯೆಗೆ ಮುಕ್ತಿ ಸಿಕ್ಕಿಲ್ಲ. ಅರ್ಹತೆ ಹೊಂದಿದ ಆಕಾಂಕ್ಷಿಗಳು ಕೆಪಿಎಸ್‌ಸಿ ಕಚೇರಿಗೆ ವಿಚಾರಿಸಿದರೆ ನಮ್ಮ ಪಾತ್ರ ಮುಗಿದಿದೆ. ಇನ್ನೇನಿದ್ದರೂ ಸರ್ಕಾರವೇ ಕ್ರಮ ಕೈಗೊಳ್ಳಬೇಕು ಎನ್ನುತ್ತಿದೆ. ಸಂಬಂಧಿಸಿದ ಇಲಾಖೆಗಳ ಸಚಿವರನ್ನು ಕೇಳಿದರೆ ನೋಡೊಣ ಮಾಡೋಣ ಎನ್ನುತ್ತಿದ್ದಾರೆ. ಆರ್ಥಿಕ ಇಲಾಖೆಗೆ ವಿಚಾರಿಸಿದರೆ ಸಿಎಂ ಆದೇಶ ಮಾಡಿದರೆ ಸಾಕು ನಿಮ್ಮ ಕೆಲಸ ಆದ್ಹಂಗೆ ಎನ್ನುತ್ತಾರೆ. ಹೀಗೆ ಒಬ್ಬರಲ್ಲಿ ಹೋದರೆ ಮತ್ತೂಬ್ಬರಲ್ಲಿಗೆ ಅಲೆಸುತ್ತಿದ್ದಾರೆ ವಿನಃ ಕೆಲಸ ಮಾತ್ರ ಆಗುತ್ತಿಲ್ಲ

ನಿಶ್ಚಯವಾದ ಮದುವೆ ರದ್ದು
ದೇವದುರ್ಗದಲ್ಲಿ ಜೆಡಿಎಸ್‌ ಸಮಾವೇಶ-ಪದಗ್ರಹಣ ಕಾರ್ಯಕ್ರಮ ಸರ್ಕಾರಿ ಕೆಲಸ ಸಿಕ್ಕಿದೆ ಇನ್ನೇನು ಆದೇಶ ಬರುವುದೊಂದೇ ಬಾಕಿ ಎಂದು ಹೇಳಿದ್ದಕ್ಕೆ ಆಕಾಂಕ್ಷಿಯೊಬ್ಬರಿಗೆ ಹೆಣ್ಣು ಕೊಡಲಾಗಿತ್ತು. ವರ್ಷಾನುಗಟ್ಟಲೇ ಕಳೆದರೂ ಆದೇಶ ಬಾರದ ಕಾರಣಕ್ಕೆ ಸರ್ಕಾರಿ ನೌಕರಿ ಬರುತ್ತದೆ ಎಂದು ಸುಳ್ಳು ಹೇಳಿದ್ದಾರೆ ಎಂದು ಮದುವೆಯೇ ಮುರಿದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

Advertisement

ಇಷ್ಟು ಮಾತ್ರವಲ್ಲ ಒಬ್ಬೊಬ್ಬ ಆಕಾಂಕ್ಷಿ ಒಂದೊಂದು ಸಮಸ್ಯೆ ಎದುರಿಸುತ್ತಿದ್ದಾರೆ. ಹೇಗಿದ್ದರೂ ಆದೇಶ ಬರುತ್ತದೆ ಎಂದು ಸಿಕ್ಕ ಖಾಸಗಿ ಕೆಲಸ ಬಿಟ್ಟವರು ಈಗ ನಿರುದ್ಯೋಗಿಗಳು. ಲಾಕ್‌ಡೌನ್‌ ವೇಳೆ ಖಾಸಗಿ ಕೆಲಸವೂ ಇಲ್ಲದಾಗಿದೆ. ಮೂಲ ದಾಖಲಾತಿಗಳೆಲ್ಲ ಸರ್ಕಾರದ ಬಳಿಯಿದ್ದು, ಬೇರೆ ಕೆಲಸ ಕೂಡ ಸಿಗುತ್ತಿಲ್ಲ. ಕೆಲವರಿಗೆ ವಯೋಮಿತಿ ಮೀರುತ್ತಿದ್ದು, ಬೇರೆ ಕೆಲಸಗಳಿಗೆ ಅನರ್ಹರಾಗುತ್ತಿದ್ದಾರೆ.

ಅನಿರ್ದಿಷ್ಟಾವಧಿ ನಿರಶನಕ್ಕೆ ಚಿಂತನೆ ಸರ್ಕಾರದ ನಡೆಗೆ ಬೇಸತ್ತಿರುವ ಆಕಾಂಕ್ಷಿಗಳು ಅನಿರ್ದಿಷ್ಟಾವಧಿ ನಿರಶನ ಮಾಡುವ ಚಿಂತನೆಯಲ್ಲಿದ್ದಾರೆ. ಎಲ್ಲ ಪ್ರಯತ್ನಗಳನ್ನು ಮಾಡಿ ಮುಗಿಸಿದ್ದು, ಸರ್ಕಾರದಿಂದ ಪೂರಕ ಸ್ಪಂದನೆ ಸಿಗುತ್ತಿಲ್ಲ. ಸರ್ಕಾರಕ್ಕೆ ಆರ್ಥಿಕ ಸಂಕಷ್ಟವಿದ್ದರೆ ಬೇರೆ ನೇಮಕಾತಿಗಳನ್ನು ನಿಲ್ಲಿಸಲಿ. ಆದರೆ, ಮುಂಚೆ ಕರೆದ ಹುದ್ದೆಗಳನ್ನು ಭರ್ತಿ ಮಾಡದೆ ಹೊಸ ನೇಮಕಾತಿಗೆ ಒತ್ತು ನೀಡುವುದು ಸರಿಯಲ್ಲ ಎಂಬುದು ಆಕಾಂಕ್ಷಿಗಳ ಆಕ್ರೋಶ.

ಎಲ್ಲ ದಾಖಲೆ ಸರಿಯಾಗಿದ್ದರೂ ಸರ್ಕಾರ ನೇಮಕಾತಿ ಆದೇಶ ನೀಡಲು ಏಕೆ ಮೀನಮೇಷ ಎಣಿಸುತ್ತಿದೆಯೋ ಗೊತ್ತಿಲ್ಲ. ನಾಲ್ಕು ವರ್ಷದಿಂದ ಒಂದೇ ಹುದ್ದೆ ನಂಬಿಕೊಂಡು 706 ಜನ ಕಂಗೆಟ್ಟು ಹೋಗಿದ್ದೇವೆ. ಕನಿಷ್ಟ ಪಕ್ಷ ಯಾವಾಗ ನೀಡುತ್ತೇವೆ ಎನ್ನುವುದಾದರೂ ಸ್ಪಷ್ಟವಾಗಿ ತಿಳಿಸಲಿ. ಅದು ಬಿಟ್ಟು ನಮ್ಮ ಜೀವನದ ಜತೆ ಹೀಗೆ ಚೆಲ್ಲಾಟವಾಡುವುದು ಸರಿಯಲ್ಲ. ನಿತ್ಯ ಸತ್ತು ಬದುಕುವಂತಾಗಿದೆ. ನಮ್ಮ ಅಮೂಲ್ಯ ಸಮಯ ವ್ಯಯವಾಗುತ್ತಿದ್ದು, ಸೇವಾವಧಿ ಮಧ್ಯೆದಲ್ಲಿ ಕಳೆದು ಹೋಗುತ್ತಿದೆ. ಈಗಲೂ ಸರ್ಕಾರ ನೇಮಕಾತಿ ಆದೇಶ ನೀಡದಿದ್ದಲ್ಲಿ ಹೋರಾಟವೊಂದೇ ನಮ್ಮ ಮಾರ್ಗ.
ನೊಂದ “ಸಿ’ ಗ್ರೂಪ್‌ ಹುದ್ದೆಯ ಆಕಾಂಕ್ಷಿಗಳು

*ಸಿದ್ದಯ್ಯಸ್ವಾಮಿ ಕುಕುನೂರು

Advertisement

Udayavani is now on Telegram. Click here to join our channel and stay updated with the latest news.

Next