ಬೆಂಗಳೂರು: ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಸ್ಥಾನದ ಆಡಳಿತ ನಿರ್ವಹಣೆಗೆ ರಚಿಸಲಾಗಿರುವ ಮೇಲ್ವಿಚಾರಣೆ ಸಮಿತಿಗೆ ನಾಲ್ವರು ಹೊಸ ಸದಸ್ಯರನ್ನು ನೇಮಿಸಿದ್ದ ರಾಜ್ಯ ಸರಕಾರದ ಆದೇಶವನ್ನು ಹೈಕೋರ್ಟ್ ರದ್ದುಪಡಿಸಿದೆ.
ಇದೇ ವೇಳೆ ರಾಜ್ಯ ಸರಕಾರ ಸುಪ್ರೀಂಕೋರ್ಟ್‌ಗೆ ಮನವಿ ಸಲ್ಲಿಸಿ, ಅಲ್ಲಿಂದ ಸೂಕ್ತ ಆದೇಶ ಪಡೆದುಕೊಂಡು ಮೇಲ್ವಿಚಾರಣೆ ಸಮಿತಿಗೆ ಸದಸ್ಯರನ್ನು ನಾಮನಿರ್ದೇಶನ ಮಾಡುವ ಸಂಪೂರ್ಣ ಅಧಿಕಾರ ರಾಜ್ಯ ಸರಕಾರಕ್ಕಿದೆ ಎಂದೂ ಹೈಕೋರ್ಟ್ ಆದೇಶದಲ್ಲಿ ಹೇಳಿದೆ.
ದೇವಸ್ಥಾನದ ಮೇಲ್ವಿಚಾರಣೆ ಸಮಿತಿಗೆ ಈ ಹಿಂದೆ ನಾಮನಿರ್ದೇಶನ ಮಾಡಲಾಗಿದ್ದ ನಾಲ್ವರು ಸದಸ್ಯ ರನ್ನು ಬದಲಾಯಿಸಿ ನಾಲ್ವರು ಹೊಸ ಸದಸ್ಯರನ್ನು ನಾಮ ನಿರ್ದೇಶನ ಮಾಡಿದ ರಾಜ್ಯ ಸರಕಾರದ ಕ್ರಮವನ್ನು ಪ್ರಶ್ನಿಸಿ ಹೊಸನಗರ ಶ್ರೀರಾಮಚಂದ್ರಪುರ ಮಠದ ಪೀಠಾಧಿಪತಿ ರಾಘವೇಶ್ವರ ಭಾರತಿ ಸ್ವಾಮೀಜಿ ಹಾಗೂ ನಾಮನಿರ್ದೇಶನದಿಂದ ವಜಾಗೊಂಡಿದ್ದ ಸದಸ್ಯರು ಸಲ್ಲಿಸಿದ್ದ ತಕರಾರು ಅರ್ಜಿ ವಿಚಾರಣೆ ನಡೆಸಿ ಕಾದಿರಿಸಿದ್ದ ತೀರ್ಪು ಪ್ರಕಟಿಸಿದ ನ್ಯಾ| ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯ ಪೀಠ, ಈ ಆದೇಶ ನೀಡಿದೆ. ಮಠದ ಪರ ಪಿ.ಎನ್. ಮನಮೋಹನ್ ವಾದಿಸಿದ್ದರು.
ದೇವಾಲಯ ಸಮಿತಿಗೆ ನಾಮ ನಿರ್ದೇ ಶನ ಮಾಡುವುದಕ್ಕೆ ರಾಜ್ಯ ಸರಕಾರಕ್ಕೆ ಅಧಿ ಕಾರವಿದೆ. ಆದರೆ ಮೇಲ್ವಿಚಾರಣೆ ಸಮಿತಿ ರಚಿಸುವ ವಿಚಾರ ತನ್ನ ಅಂತಿಮ ಆದೇಶಕ್ಕೆ ಒಳಪಟ್ಟಿರು ತ್ತದೆ ಎಂದು ಸುಪ್ರೀಂಕೋರ್ಟ್ ಹೇಳಿದೆ. ಹೀಗಿದ್ದಾಗ, ಈ ಹಿಂದೆ ಇದ್ದ ಸಮಿತಿ ಸದಸ್ಯರ ಬದಲಾವಣೆ ಮಾಡಬೇಕಾ ದರೆ ಅದಕ್ಕೂ ಮುನ್ನ ರಾಜ್ಯ ಸರಕಾರ ಸುಪ್ರೀಂಕೋರ್ಟಿನಲ್ಲಿ ಮನವಿ ಸಲ್ಲಿಸಿ ಹೊಸ ಸದಸ್ಯರ ನೇಮಕಕ್ಕೆ ಅನುಮತಿ ಪಡೆಯಬೇಕಾಗಿತ್ತು. ಆದರೆ ರಾಜ್ಯ ಸರಕಾರ ಹಾಗೆ ಮಾಡದೆ ನೇರವಾಗಿ ಇತರ ಸದಸ್ಯರನ್ನು ನಾಮ ನಿರ್ದೇಶನ ಮಾಡಿದೆ. ಈ ರೀತಿ ಮಾಡಲು ಸರಕಾರಕ್ಕೆ ಅವಕಾಶವಿಲ್ಲ ಎಂದು ಹೈಕೋರ್ಟ್ ಆದೇಶದಲ್ಲಿ ತಿಳಿಸಿದೆ.