ಬೆಂಗಳೂರು: ಪ್ರದೇಶ ಕಾಂಗ್ರೆಸ್ ಸಮಿತಿಗೆ ಪ್ರಾದೇಶಿಕ ಹಾಗೂ ಜಾತಿವಾರು ಲೆಕ್ಕಾಚಾರದಲ್ಲಿ ಇನ್ನಿಬ್ಬರು ಕಾರ್ಯಾಧ್ಯಕ್ಷರನ್ನು ನೇಮಿಸಲು ಕಸರತ್ತು ನಡೆಸಲಾಗುತ್ತಿದೆ ಎಂದು ತಿಳಿದು ಬಂದಿದೆ.
ಈಗಾಗಲೇ ಕೆಪಿಸಿಸಿಗೆ ಈಶ್ವರ್ ಖಂಡ್ರೆಯನ್ನು ಕಾರ್ಯಾಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಆದರೆ, ಲೋಕಸಭೆ ಚುನಾವಣೆ ದೃಷ್ಠಿಯಿಂದ ಪ್ರಾದೇಶಿಕತೆ ಮತ್ತು ಜಾತಿವಾರು ಇನ್ನಿಬ್ಬರು ಕಾರ್ಯಾಧ್ಯಕ್ಷರನ್ನು ನೇಮಿಸಬೇಕೆಂದು ಬಿ.ಕೆ. ಹರಿಪ್ರಸಾದ್ ನೇತೃತ್ವದಲ್ಲಿ ಸಂಸತ್ ಸದಸ್ಯರು ಪಕ್ಷದ ಹೈಕಮಾಂಡ್ ಮೇಲೆ ಒತ್ತಡ ಹೇರುತ್ತಿದ್ದಾರೆಂದು ಹೇಳಲಾಗಿದೆ.
ಪಕ್ಷದ ಬಲವರ್ಧನೆಗೆ ಕೇರಳ ಕೆಪಿಸಿಸಿ ಸೇರಿ ಅನೇಕ ರಾಜ್ಯಗಳಲ್ಲಿ ಅಧ್ಯಕ್ಷರ ಹೊರತಾಗಿ ಮೂವರು ಕಾರ್ಯಾಧ್ಯಕ್ಷರನ್ನು ನೇಮಿಸಲಾಗಿದೆ.
ಅದೇ ರೀತಿಯಲ್ಲಿ ರಾಜ್ಯದಲ್ಲಿಯೂ ಪ್ರಾದೇಶಿಕತೆ ಜತೆಗೆ ಜಾತಿ ಪ್ರಾತಿನಿಧ್ಯ ನೀಡಬೇಕೆಂಬ ಬೇಡಿಕೆ ಇಟ್ಟಿದ್ದಾರೆ.ಬ್ರಾಹ್ಮಣ ಸಮುದಾಯಕ್ಕೆ ಸೇರಿದ ದಿನೇಶ್ ಗುಂಡೂರಾವ್ ಬೆಂಗಳೂರು ವಿಭಾಗಕ್ಕೆ ಸೇರಿ ದವರಾಗಿದ್ದು, ವೀರಶೈವ ಲಿಂಗಾಯತ ಸಮು
ದಾಯಕ್ಕೆ ಸೇರಿರುವ ಈಶ್ವರ್ ಖಂಡ್ರೆ ಹೈದರಾಬಾದ್ ಕರ್ನಾಟಕ ಭಾಗಕ್ಕೆ ಸೇರಿದವರಾಗಿದ್ದಾರೆ.
ಮುಂಬೈ ಕರ್ನಾಟಕ ಹಾಗೂ ಮೈಸೂರು ವಿಭಾಗಕ್ಕೆ ಪ್ರತ್ಯೇಕವಾಗಿ ಕಾರ್ಯಾಧ್ಯಕ್ಷರನ್ನು ನೇಮಿಸಬೇಕು. ಒಂದು ದಲಿತ ಹಾಗೂ ಇನ್ನೊಂದು ಒಕ್ಕಲಿಗ ಸಮುದಾಯದವರಿಗೆ ಕಾರ್ಯಾಧ್ಯಕ್ಷ ಸ್ಥಾನ ನೀಡಿದರೆ, ಎರಡು ಪ್ರಮುಖ ಸಮುದಾಯಗಳಿಗೆ ಪ್ರಾತಿನಿಧ್ಯ ನೀಡಿದಂತಾಗುತ್ತದೆ. ಅಲ್ಲದೇ ಈ ಸಮುದಾಯ ಗಳಿಗೆ ಪಕ್ಷದ ಜವಾಬ್ದಾರಿ ನೀಡುವ ಕಾರಣ ಸಂಪುಟ ವಿಸ್ತರಣೆ ಸಂದರ್ಭದಲ್ಲಿ ಆ ಸಮುದಾಯಗಳ ಶಾಸಕರನ್ನು ಸಮಾಧಾನ ಪಡಿಸಬಹುದೆಂಬ ಲೆಕ್ಕಾಚಾರವನ್ನು ಸಂಸದರು ಹೈಕಮಾಂಡ್ ನಾಯಕರ ಮುಂದೆ ಹೇಳಿದ್ದಾರೆಂದು ತಿಳಿದು ಬಂದಿದೆ. ಆದರೆ, ಈ ಪ್ರಯತ್ನಕ್ಕೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹಾಗೂ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಇಬ್ಬರೂ ಆಕ್ಷೇಪ ವ್ಯಕ್ತಪಡಿಸಿದ್ದಾರೆಂದು ತಿಳಿದು ಬಂದಿದೆ.