ಬೆಂಗಳೂರು: ನ್ಯಾಯವಾದಿಗಳಾದ ವಿಜಯಕುಮಾರ್ ಅಡಗೌಡ ಪಾಟೀಲ್ ಮತ್ತು ರಾಜೇಶ್ ರೈ ಕಲ್ಲಂಗಾಲ ಅವರನ್ನು ಹೈಕೋರ್ಟಿನ ಹೆಚ್ಚುವರಿ ನ್ಯಾಯಮೂರ್ತಿಗಳನ್ನಾಗಿ ಕೇಂದ್ರ ಸರಕಾರ ನೇಮಿಸಿದೆ.
ಈ ಸಂಬಂಧ ಕೇಂದ್ರ ಕಾನೂನು ಮತ್ತು ನ್ಯಾಯ ಇಲಾಖೆ ಸೋಮವಾರ ಆದೇಶ ಹೊರಡಿಸಿದೆ.
ಜ.19ರಂದು ಸಿಜೆಐ ಡಿ.ವೈ. ಚಂದ್ರಚೂಡ್ ನೇತೃತ್ವದ ಸುಪ್ರೀಂಕೋರ್ಟ್ ಕೊಲೀಜಿಯಂ ಇವರಿಬ್ಬರನ್ನು ನ್ಯಾಯಮೂರ್ತಿಗಳನ್ನಾಗಿ ನೇಮಕ ಮಾಡಲು ಕೇಂದ್ರ ಸರಕಾರಕ್ಕೆ ಶಿಫಾರಸು ಮಾಡಿತ್ತು.
ನ್ಯಾಯವಾದಿ ತಜಲಿ ಮೌಲಾಸಾಬ್ ನದಾಫ್ ಅವರ ಹೆಸರನ್ನೂ ಕೊಲೀಜಿಯಂ ಕೇಂದ್ರಕ್ಕೆ ಶಿಫಾರಸು ಮಾಡಿತ್ತು. ಆದರೆ ಆ ಹೆಸರನ್ನು ಕೇಂದ್ರ ಅನುಮೋದಿಸಿಲ್ಲ.
ಮೂಲತಃ ಉತ್ತರ ಕರ್ನಾಟಕ ಭಾಗದ ವಿಜಯಕುಮಾರ್ ಪಾಟೀಲ್ ಸುಮಾರು 10 ವರ್ಷಗಳಿಂದಲೂ ಸರಕಾರಿ ವಕೀಲರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ರಾಜೇಶ್ ರೈ ಅವರು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕಲ್ಲಂಗಾಲದವರು. ಅವರು 1999ರಿಂದ ಹೈಕೋರ್ಟಿನಲ್ಲಿ ವಕೀಲಿಕೆ ಮಾಡುತ್ತಿದ್ದು, ಸಿವಿಲ್ ಹಾಗೂ ಕ್ರಿಮಿನಲ್ ಕೇಸುಗಳನ್ನು ನಡೆಸುವುದರಲ್ಲಿ ಖ್ಯಾತರಾಗಿದ್ದಾರೆ.
Related Articles
ಹೈಕೋರ್ಟಿನ ಬೆಂಗಳೂರು ಪ್ರಧಾನ ಪೀಠ, ಧಾರವಾಡ ಮತ್ತು ಕುಲಬುರಗಿ ಪೀಠಗಳಿಗೆ ಒಟ್ಟು 62 ನ್ಯಾಯಮೂರ್ತಿಗಳ ಹುದ್ದೆ ಮಂಜೂರಾಗಿದ್ದು, ಸದ್ಯ 51 ನ್ಯಾಯಮೂರ್ತಿಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಈಗ ಇಬ್ಬರು ನೇಮಕಗೊಂಡಿರುವುದರಿಂದ ಆ ಸಂಖ್ಯೆ 53ಕ್ಕೆ ಏರಿಕೆಯಾಗಲಿದ್ದು, ಇನ್ನೂ 9 ಹುದ್ದೆಗಳು ಖಾಲಿ ಇರಲಿವೆ.