Advertisement

ಅಪಾಯಕಾರಿ ಸ್ಥಳಕ್ಕೆ ಕಬ್ಬಿಣ ತಡೆಬೇಲಿ ಅಳವಡಿಕೆ : ಹಳೆಯಂಗಡಿ ಗ್ರಾ.ಪಂ.ನಿಂದ ನಿರ್ಮಾಣ ಕಾರ್ಯ

10:32 PM Mar 06, 2021 | Team Udayavani |

ಹಳೆಯಂಗಡಿ: ಇಲ್ಲಿನ ಹಳೆಯಂಗಡಿ ಗ್ರಾ.ಪಂ.ನ ಕೊಪ್ಪಲ ನಾರಾಯಣಗುರು ರಸ್ತೆಯಲ್ಲಿನ ಅಪಾಯಕಾರಿ ತಿರುವಿನಲ್ಲಿ ರಸ್ತೆ ಬದಿಯ ಗುಂಡಿ ಪ್ರದೇಶಕ್ಕೆ ಕಬ್ಬಿಣದ ತಡೆ ಬೇಲಿಯನ್ನು ಹಳೆಯಂಗಡಿ ಗ್ರಾ.ಪಂ. ನಿರ್ಮಾಣ ಮಾಡಿ ರಸ್ತೆ ಸಂಚಾರಿಗಳ ಆತಂಕ ದೂರ ಮಾಡಿದ್ದಾರೆ.

Advertisement

ಹಳೆಯಂಗಡಿ ರಾಷ್ಟ್ರೀಯ ಹೆದ್ದಾರಿಯಿಂದ ಈ ಕೊಪ್ಪಲ ರಸ್ತೆಯಾಗಿ ಚೇಳಾçರು ಸೇತುವೆ ಹಾಗೂ ಕರಿತೋಟ ಪ್ರದೇಶಕ್ಕೆ ಹಾಗೂ ನೇರವಾಗಿ ಇಂದಿರಾನಗರಕ್ಕೆ ಈ ರಸ್ತೆಯನ್ನೇ ಬಳಸುತ್ತಿದ್ದು, ಇಲ್ಲಿನ ರಸ್ತೆಯ ಪಕ್ಕದಲ್ಲಿಯೇ ಬೃಹತ್‌ ಗುಂಡಿಯೊಂದು ಇದ್ದು, ಅದರಲ್ಲಿ ನೀರು ನಿಂತು ಸಣ್ಣ ಕೆರೆಯಂತಾಗಿದ್ದು ಬಹಳಷ್ಟು ಅಪಾಯಕಾರಿಯಾಗಿ ಇರುವುದರಿಂದ ಇದಕ್ಕೊಂದು ಪರಿಹಾರ ನೀಡುವಂತೆ ಇಲ್ಲಿನ ನಾಗರಿಕರು ಗ್ರಾ. ಪಂ.ನ್ನು ಆಗ್ರಹಿಸಿದ್ದರು.

ಗ್ರಾಮ ಪಂಚಾಯತ್‌ನಲ್ಲಿ 2019ರ ಆಗಸ್ಟ್‌ 28ರಂದು ನಡೆದ ವಿಶೇಷ ಸಭೆಯಲ್ಲಿ ಪ್ರಸ್ತಾವಗೊಂಡು ಸುಮಾರು ಒಂದು ಲಕ್ಷ ರೂ. ವೆಚ್ಚದಲ್ಲಿ ಬದಿ ಕಟ್ಟುವುದು ಎಂದು ನಿರ್ಧರಿಸಲಾಗಿ, ಅನುದಾನವನ್ನು ಮೀಸಲಾಗಿರಿಸಿತ್ತು. ಆದರೆ ಇಲ್ಲಿನ ನೀರಿನ ಗುಂಡಿಯ ಪ್ರದೇಶದ ಜಮೀನಿನ ವಿವಾದವಿದ್ದು ಸೂಕ್ತ ಪರಿಹಾರ ಕಾಣಲು ಸಾಧ್ಯವಾಗಿರಲಿಲ್ಲ. ಈ ನಡುವೆ ಬಾಲಕನೋರ್ವ ಸೈಕಲ್‌ ಮೂಲಕ ತೆರಳುತ್ತಿರುವಾಗ ಆಕಸ್ಮಿಕವಾಗಿ ನೀರಿಗೆ ಬೀಳುವ ದುರಂತವೊಂದು ಪಾದಚಾರಿಯೊಬ್ಬರು ತಡೆದಿದ್ದರಿಂದ ಆ ಘಟನೆಯ ಅನಂತರ ಸೂಕ್ತ ವ್ಯವಸ್ಥೆಗಾಗಿ ಗ್ರಾ.ಪಂ.ಗೆ ಸ್ಥಳೀಯರು ತೀವ್ರ ಒತ್ತಡ ಹಾಕಿದರು, ಇದೀಗ ಈ ಪ್ರದೇಶದಲ್ಲಿ 14ನೇ ಹಣಕಾಸು ಯೋಜನೆಯಲ್ಲಿ ಸುಮಾರು 1.5 ಲಕ್ಷ ರೂ. ವೆಚ್ಚದಲ್ಲಿ ಕಬ್ಬಿಣದ ಭದ್ರತೆಯ ತಡೆಗೋಡೆಯನ್ನು ನಿರ್ಮಿಸಲಾಗಿದೆ.

ಜಮೀನಿನ ವಿವಾದದಿಂದ ವಿಳಂಬ
ರಸ್ತೆಯ ಪಕ್ಕದಲ್ಲಿಯೇ ಅಪಾಯಕಾರಿ ತಿರುವು ಇರುವುದರಿಂದ ಕೆರೆಯ ಜಮೀನಿನ ಬಗ್ಗೆ ತಕರಾರು ಇದ್ದುದರಿಂದ ಇಲ್ಲಿ ತಡೆಗೋಡೆ ಅಥವ ರಸ್ತೆಯ ವಿಸ್ತರಣೆ ಕಾಮಗಾರಿ ಸಾಧ್ಯವಾಗಲಿಲ್ಲ, ಇದೀಗ ಪಂಚಾಯತ್‌ ತನ್ನದೇ ಅನುದಾನದಲ್ಲಿ ವ್ಯವಸ್ಥೆಗೊಳಿಸಿರುವುದನ್ನು ಸ್ಥಳೀಯರು ಸ್ವಾಗತಿಸಿದ್ದಾರೆ ಎಂದು ದ.ಕ. ಜಿ.ಪಂ. ಸದಸ್ಯ ವಿನೋದ್‌ಕುಮಾರ್‌ ಬೊಳ್ಳೂರು ತಿಳಿಸಿದ್ದಾರೆ.

“ಉದಯವಾಣಿ’ ಸುದಿನ ಎಚ್ಚರಿಸಿತ್ತು
ಕೊಪ್ಪಲ ನಾರಾಯಣಗುರು ರಸ್ತೆಯು ಇಕ್ಕಟ್ಟಾಗಿದ್ದು, ಇಂದಿರಾನಗರದ ರೈಲ್ವೇ ಗೇಟ್‌ ಬೀಳುವುದರಿಂದ ಸುಮಾರು 10 ನಿಮಿಷ ಕಾಯುವ ಸ್ಥಿತಿ ಬಂದಾಗ ಕೆಲವು ವಾಹನಗಳ ಸಂಚಾರಿಗಳು ಪರ್ಯಾಯವಾಗಿ ಇದೇ ರಸ್ತೆಯನ್ನು ಬಳಸುತ್ತಿದ್ದಾರೆ. ಸಣ್ಣ ರಸ್ತೆಯಾಗಿರುವುದರಿಂದ ಹಾಗೂ ಕೆರೆಯ ಅಪಾಯದ ಜತೆಗೆ ಹಲವು ಅಪಘಾತಗಳು ಸಹ ಸಂಭವಿಸಿದ್ದನ್ನು “ಉದಯವಾಣಿ’ ಸುದಿನ ಬೆಳಕು ಚೆಲ್ಲಿ ಆಡಳಿತವನ್ನು ಎಚ್ಚರಿಸಿತ್ತು.

Advertisement

14ನೇ ಹಣಕಾಸು ವಿನಿಯೋಗ
ಪಂಚಾಯತ್‌ ತುರ್ತಾಗಿ ಹಾಗೂ ಜನರ ಬೇಡಿಕೆಯಂತೆ 14ನೇ ಹಣಕಾಸು ಯೋಜನೆಯಲ್ಲಿ ಕಾಮಗಾರಿ ನಡೆಸಲಾಗಿದೆ. ಮುಂದಿನ ದಿನದಲ್ಲಿ ಜಮೀನು ವಿವಾದ ಇತ್ಯರ್ಥವಾದಲ್ಲಿ ಈ ರಸ್ತೆಯನ್ನು ಇನ್ನಷ್ಟು ಅಭಿವೃದ್ಧಿ ನಡೆಸಲು ಬದ್ಧರಾಗಿದ್ದೇವೆ.

-ಪೂರ್ಣಿಮಾ, ಅಧ್ಯಕ್ಷರು, ಹಳೆಯಂಗಡಿ ಗ್ರಾ.ಪಂ.

Advertisement

Udayavani is now on Telegram. Click here to join our channel and stay updated with the latest news.

Next