ಮಡಿಕೇರಿ: ಅಗಸ ಮತ್ತು ಕ್ಷೌರಿಕ ವೃತ್ತಿ ನಿರತ ಅಸಂಘಟಿತ ವಲಯದ ಕಾರ್ಮಿಕರಿಗೆ ವಿಶೇಷ ಧನಸಹಾಯ ನೀಡುವ ನಿಟ್ಟಿನಲ್ಲಿ ಅರ್ಹರು ಸೇವಾ ಸಿಂಧು ಪೋರ್ಟಲ್‌ನಲ್ಲಿ ಅರ್ಜಿ ಸಲ್ಲಿಸಬೇಕಿದೆ ಎಂದು ಕಾರ್ಮಿಕ ಇಲಾಖೆಯ ಅಧಿಕಾರಿ ಯತ್ನಟ್ಟಿ ತಿಳಿಸಿದ್ದಾರೆ.
ನಗರದ ಜಿ.ಪಂ. ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಅವರು ಮಾಹಿತಿ ನೀಡಿದರು.
ಅರ್ಜಿ ಸಲ್ಲಿಸಿದ ಅನಂತರ ಸಂಬಂಧಪಟ್ಟ ಗ್ರಾ.ಪಂ.ಅಭಿವೃದ್ಧಿ ಅಧಿಕಾರಿ, ಪ.ಪಂ. ಮುಖ್ಯಾಧಿಕಾರಿ, ನಗರಸಭೆ ಆಯುಕ್ತರು ತಮ್ಮ ವ್ಯಾಪ್ತಿಯಲ್ಲಿ ಅರ್ಜಿ ಸಲ್ಲಿಸಿರುವವರು ಕಾರ್ಯನಿರ್ವಹಿಸುತ್ತಿದ್ದಾರೆಯೇ ಎಂಬ ಬಗ್ಗೆ ಪರಿಶೀಲಿಸಿ, ಜಿಲ್ಲಾಧಿಕಾರಿ ಅವರಿಗೆ ಕಳುಹಿಸಿಕೊಡಬೇಕಿದೆ ಎಂದು ಅವರು ಮಾಹಿತಿ ನೀಡಿದರು.
ಕೋವಿಡ್-19 ಹಿನ್ನೆಲೆ ಅಗಸರು ಮತ್ತು ಕ್ಷೌರಿಕ ವೃತ್ತಿಯಲ್ಲಿ ದುಡಿಯುತ್ತಿರುವ ಅಸಂಘಟಿತ ವಲಯ ಕಾರ್ಮಿಕರಿಗೆ 5 ಸಾವಿರ ರೂ. ಪರಿಹಾರ ನೀಡಲಾಗುತ್ತಿದೆ ಎಂದರು. ಪರವಾನಿಗೆ ಪಡೆದಿರುವ ಸಂಸ್ಥೆ ಯಲ್ಲಿ 4ಕ್ಕಿಂತ ಹೆಚ್ಚು ಕಾರ್ಮಿಕರು ಕೆಲಸ ನಿರ್ವಹಿಸುತ್ತಿದ್ದು, ಅವರು
ಅರ್ಜಿ ಸಲ್ಲಿಸಿದ್ದಲ್ಲಿ ಕಡ್ಡಾಯವಾಗಿ ತಪಾಸಣೆ ಕೈಗೊಳ್ಳುವುದು. ಪರವಾನಿಗೆ ಪಡೆಯದೇ ಕಾರ್ಯ ನಿರ್ವಹಿಸುತ್ತಿರುವ ಸಂಸ್ಥೆಯ 2ಕ್ಕಿಂತ ಹೆಚ್ಚು ಫಲಾನುಭವಿಗಳು ಅರ್ಜಿ ಸಲ್ಲಿಸಿ ದ್ದಲ್ಲಿ ತಪಾಸಣೆ ಕಡ್ಡಾಯವಾಗಿದೆ. ಫಲಾನುಭವಿಗಳಿಗೆ ಪರಿಹಾರ ಧನವನ್ನು ಕಡ್ಡಾಯವಾಗಿ ಆಧಾರ್ ಆಧಾರಿತ ಡಿಬಿಟಿ(ಡೈರೆಕ್ಟ್ ಬೆನಿಫಿಟ್ಟ ಟ್ರಾನ್ಸ್‌ಫರ್) ಕೆ-2 ಮೂಲಕವೇ ವರ್ಗಾಯಿಸುವುದು. ಅರ್ಜಿದಾರರ ವಯೋಮಿತಿಯನ್ನು 18 ರಿಂದ 65 ವರ್ಷಗಳಿಗೆ ಸೀಮಿತಗೊಳಿಸಿದೆ. ಈ ಯೋಜನೆಯ ಸೌಲಭ್ಯವನ್ನು ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ಮಾತ್ರ ಸೀಮಿತಗೊಳಿಸಲಾಗಿದೆ.
ಕರ್ನಾಟಕದಲ್ಲಿ ಅಗಸ/ ಕ್ಷೌರಿಕ ವೃತ್ತಿ ನಿರ್ವಹಿಸುತ್ತಿರುವ ಬೇರೆ ರಾಜ್ಯದ ಕಾರ್ಮಿಕರು ಸಹ ಪರಿಹಾರವನ್ನು ಪಡೆಯಲು ಅರ್ಹರು. ಒಂದು ಕುಟುಂಬದಲ್ಲಿ ಒಂದಕ್ಕಿಂತ ಹೆಚ್ಚು ಮಂದಿ ವೃತ್ತಿಯಲ್ಲಿ ತೊಡಗಿದ್ದಲ್ಲಿ, ಒಬ್ಬರು ಮಾತ್ರ ಪರಿಹಾರ ಧನವನ್ನು ಪಡೆಯಲು ಅರ್ಹರು ಎಂದು ಅವರು ತಿಳಿಸಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ಪಿ. ಸುಮನ್, ಹೆಚ್ಚುವರಿ ಜಿಲ್ಲಾಧಿಕಾರಿ ಡಾ| ಸ್ನೇಹ, ಉಪ ವಿಭಾಗಾಧಿಕಾರಿ ಟಿ. ಜವರೇಗೌಡ, ಭೂದಾಖಲೆಗಳ ಉಪ ನಿರ್ದೇಶಕರಾದ ಶ್ರೀನಿವಾಸ್, ಸವಿತಾ ಸಮಾಜದ ತಾಲೂಕು ಅಧ್ಯಕ್ಷರಾದ ಮಧು, ಕೆ.ಟಿ. ವೆಂಕಟೇಶ್, ನಗರ ಕಾರ್ಯಾಧ್ಯಕ್ಷ ವಿ.ಟಿ. ರಮೇಶ್, ಜಿಲ್ಲಾ ಕಾರ್ಯದರ್ಶಿ ಅವಿನಾಶ್, ಶೀರಜ್ ಉಪಸ್ಥಿತರಿದ್ದರು.