ಹೊಸದಿಲ್ಲಿ: ಈ ವರ್ಷದ ರಾಷ್ಟ್ರೀಯ ಕ್ರೀಡಾ ಪ್ರಶಸ್ತಿಗಳಿಗೆ ಅರ್ಜಿಗಳ ಮಹಾಪೂರವೇ ಹರಿದು ಬಂದಿದೆ. ದಾಖಲೆ ಸಂಖ್ಯೆಯ 600ಕ್ಕೂ ಹೆಚ್ಚು ಅರ್ಜಿಗಳು ಬಂದಿದ್ದು, ಕಳೆದ ವರ್ಷದ 400ರಷ್ಟು ಅರ್ಜಿಗಳ ದಾಖಲೆಯನ್ನು ಇದು ಮುರಿದಿದೆ.
ಪರಮೋಚ್ಚ ಖೇಲ್‌ರತ್ನ ಪ್ರಶಸ್ತಿ ಯೊಂದಕ್ಕೇ 35 ಮಂದಿ, ಅರ್ಜುನ ಪ್ರಶಸ್ತಿಗೆ 215 ಕ್ರೀಡಾಪಟುಗಳು ಅರ್ಜಿ ಸಲ್ಲಿಸಿದ್ದಾರೆ. ಉಳಿದವು ದ್ರೋಣಾ ಚಾರ್ಯ, ಜೀವಮಾನ ಸಾಧನೆ ಹಾಗೂ ಇತರ ಪ್ರಶಸ್ತಿಗಳ ಅರ್ಜಿಗಳಾಗಿವೆ. ದ್ರೋಣಾಚಾರ್ಯಕ್ಕೆ 48, ಜೀವಮಾನ ಸಾಧನೆಗೆ ಸುಮಾರು 138 ಮಂದಿ ಅರ್ಜಿ ಸಲ್ಲಿಸಿದ್ದಾರೆ. “ರಾಷ್ಟ್ರೀಯ ಖೇಲ್ ಪ್ರೋತ್ಸಾಹನ್’ಗೆ 36 ಕಾರ್ಪೊರೇಟ್ ಎಂಟ್ರಿಗಳು ಬಂದಿವೆ.
ಕೇಂದ್ರದ ಅಧಿಕಾರಿಗಳು ಹೆಚ್ಚುವರಿ ಅವಧಿಯಲ್ಲಿ ಕೆಲಸ ನಿಭಾಯಿಸಿ ಈ ಅರ್ಜಿಗಳನ್ನು ವಿಲೇವಾರಿ ಮಾಡು ತ್ತಿದ್ದಾರೆ. ಇವರು ಆಯ್ದ ಅರ್ಹ ಸಾಧಕರ ಅರ್ಜಿಗಳನ್ನು ರಾಷ್ಟ್ರೀಯ ಕ್ರೀಡಾ ಪ್ರಶಸ್ತಿ ಸಮಿತಿಗೆ ಕಳು ಹಿಸಲಿದ್ದಾರೆ.
ಪ್ರಶಸ್ತಿ ನಿಯಮ:
ನಿಯಮಾವಳಿಯಂತೆ ಖೇಲ್‌ರತ್ನ ಪ್ರಶಸ್ತಿಗೆ ಗರಿಷ್ಠ ಇಬ್ಬರನ್ನು ಆಯ್ಕೆ ಮಾಡಬಹುದಾಗಿದೆ. ಅರ್ಜುನ ಪ್ರಶಸ್ತಿಗೆ 15 ಕ್ರೀಡಾಳುಗಳ ಮಿತಿ ಇದೆ. ಆದರೆ ಈ ವರ್ಷದ ಒಲಿಂಪಿಕ್ಸ್ ಹಾಗೂ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತದ ಕ್ರೀಡಾಪಟುಗಳು ದಾಖಲೆ ಸಂಖ್ಯೆಯ ಪದಕ ಗೆದ್ದಿರುವುದರಿಂದ ಪ್ರಶಸ್ತಿ ಪುರಸ್ಕೃತರ ಸಂಖ್ಯೆಯಲ್ಲಿ ಹೆಚ್ಚಳ ವಾಗಲೂಬಹುದು.