Advertisement

ಇಲಾಖೆಗೆ ಆಧುನಿಕ ತಂತ್ರಜ್ಞಾನ ಅಳವಡಿಕೆ

01:37 AM Oct 10, 2021 | Team Udayavani |

ಉಡುಪಿ: ಪೊಲೀಸ್‌ ಇಲಾಖೆ ಬಲವರ್ಧನೆಗೆ ಎಲ್ಲ ಕ್ರಮ ಕೈಗೊಳ್ಳಲಾಗುತ್ತಿದ್ದು, ಕ್ರೈಂ ಸೀನ್‌ ಅಧಿಕಾರಿಗಳ ನೇಮಕಾತಿ ನಡೆಯುತ್ತಿದೆ. ಇಲಾಖೆಯಲ್ಲಿ ಆಧುನಿಕ ತಂತ್ರಜ್ಞಾನಗಳನ್ನು ಅಳವಡಿಸಲಾಗಿದ್ದು ಸೈಬರ್‌ ಅಪರಾಧಗಳನ್ನು ಪತ್ತೆ ಮಾಡಲು ಬ್ಯಾಂಕ್‌ಗಳೊಂದಿಗೆ ಒಪ್ಪಂದ ಆಗಿದೆ ಎಂದು ರಾಜ್ಯ ಗೃಹಸಚಿವ ಆರಗ ಜ್ಞಾನೇಂದ್ರ ಹೇಳಿದರು.

Advertisement

ಉಡುಪಿ ಮಿಷನ್‌ ಕಾಂಪೌಂಡ್‌ ಬಳಿ 10 ಕೋ.ರೂ. ವೆಚ್ಚದಲ್ಲಿ ನಿರ್ಮಿಸಲಾದ 56 ಮನೆಗಳನ್ನೊಳಗೊಂಡ ನೂತನ ಪೊಲೀಸ್‌ ವಸತಿ ಸಮುಚ್ಚಯವನ್ನು ಶನಿವಾರ ಅವರು ಉದ್ಘಾಟಿಸಿ ಮಾತನಾಡಿದರು.

ಗೃಹ ಇಲಾಖೆ ವತಿಯಿಂದ 2025 ರೊಳಗೆ 10,000 ಪೊಲೀಸ್‌ ವಸತಿ ಗೃಹಗಳ ನಿರ್ಮಾಣ ನಡೆಯುತ್ತಿದ್ದು, 200 ಕೋ.ರೂ. ವೆಚ್ಚದಲ್ಲಿ 100 ನೂತನ ಠಾಣೆಗಳ ನಿರ್ಮಾಣ, 140 ಪೊಲೀಸ್‌ ಠಾಣೆಗಳನ್ನು ಮೇಲ್ದರ್ಜೆಗೇರಿಸಲಾಗುತ್ತಿದೆ ಎಂದರು.

ಕ್ಲಿಯರೆನ್ಸ್‌ ಪತ್ರ ಕಡ್ಡಾಯ
ಬಹು ಮಹಡಿ ಕಟ್ಟಡ ನಿರ್ಮಿಸುವಾಗ ಅಗ್ನಿಶಾಮಕ ಇಲಾಖೆಯ ನಿರಾಕ್ಷೇಪಣ ಪತ್ರ ಮತ್ತು ಕಟ್ಟಡ ಮುಕ್ತಾಯಗೊಂಡಾಗ ಕ್ಲಿಯರೆನ್ಸ್‌ ಪತ್ರ ಪಡೆಯುವುದು ಕಡ್ಡಾಯ.ಮಾದಕ ವಸ್ತು ನಿಯಂತ್ರಣ ನಿಟ್ಟಿನಲ್ಲಿ ಸಾರ್ವಜನಿಕರು ಇಲಾಖೆಗೆ ಮಾಹಿತಿ ನೀಡಬೇಕು ಎಂದು ತಿಳಿಸಿದರು.

ಪಾರದರ್ಶಕ ನೇಮಕಾತಿ
ಪೊಲೀಸ್‌ ನೇಮಕಾತಿ ಪ್ರಕ್ರಿಯೆ ಅತ್ಯಂತ ಪಾರದರ್ಶಕವಾಗಿದ್ದು, ಮಧ್ಯವರ್ತಿಗಳನ್ನು ನಂಬಿ ಯಾರೂ ಮೋಸ ಹೋಗಬೇಡಿ. ಮಧ್ಯವರ್ತಿಗಳ ಬಗ್ಗೆ ಸ್ಥಳೀಯ ಠಾಣೆಗಳಿಗೆ ಮಾಹಿತಿ ನೀಡುವಂತೆ ತಿಳಿಸಿದರು.

Advertisement

ಶಾಸಕ ಕೆ. ರಘುಪತಿ ಭಟ್‌ ಮಾತನಾಡಿ, ಉಡುಪಿಯಲ್ಲಿ ಪೊಲೀಸರಿಗೆ ಮನೆ ಕೊರತೆ ಇದೆ. ದೊಡ್ಡಣಗುಡ್ಡೆಯಲ್ಲಿ ಶಿಥಿಲಾವಸ್ಥೆಯಲ್ಲಿರುವ ವಸತಿಗೃಹಗಳನ್ನು ನೆಲಸಮ ಮಾಡಿ, ಸಮುಚ್ಚಯ ಮಾದರಿ ಯಲ್ಲಿ ನೂತನ ಗೃಹಗಳ ನಿರ್ಮಾಣ, ಶ್ರೀಕೃಷ್ಣ ಮಠದಲ್ಲಿ ಪೊಲೀಸ್‌ ಔಟ್‌ಪೋಸ್ಟ್‌ ನಿರ್ಮಾಣ ಮತ್ತು ಮಣಿಪಾಲದಲ್ಲಿ ಅಗ್ನಿಶಾಮಕ ಠಾಣೆಗೆ ಸ್ಥಳ ಮಂಜೂರು ನೀಡುವಂತೆ ಕೋರಿದರು.

ಇದನ್ನೂ ಓದಿ:ಕೊರೊನಾ ಮಾತಾ ದೇಗುಲ : ಅರ್ಜಿದಾರನಿಗೇ ದಂಡ ವಿಧಿಸಿದ ಸುಪ್ರೀಂಕೋರ್ಟ್

4 ವರ್ಷಗಳಲ್ಲಿ ಎಲ್ಲ ಪೊಲೀಸರಿಗೆ ವಸತಿಗೃಹ
ಪಶ್ಚಿಮ ವಲಯ ಐಜಿ ದೇವಜ್ಯೋತಿ ರೇ ಮಾತನಾಡಿ, ರಾಜ್ಯ ಪೊಲೀಸ್‌ ಇಲಾಖೆ ಯಲ್ಲಿ 4 ವರ್ಷಗಳಿಂದ ಹಲವಾರು ಅಭಿವೃದ್ಧಿ ಕೆಲಸಗಳಾಗಿವೆ. 2025ರೊಳಗೆ ಎಲ್ಲ ಪೊಲೀಸರಿಗೆ ವಸತಿಗೃಹ ನೀಡಲು ಉದ್ದೇಶಿಸಲಾಗಿದೆ ಎಂದರು.

ಶಾಸಕ ಲಾಲಾಜಿ ಆರ್‌. ಮೆಂಡನ್‌, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರಾಘವೇಂದ್ರ ಕಿಣಿ, ನಗರಸಭೆ ಅಧ್ಯಕ್ಷೆ ಸುಮಿತ್ರಾ ನಾಯಕ್‌, ಜಿಲ್ಲಾಧಿಕಾರಿ ಕೂರ್ಮಾ ರಾವ್‌ ಎಂ., ಜಿ.ಪಂ. ಸಿಇಒ ಡಾ| ನವೀನ್‌ ಭಟ್‌, ಎಎನ್‌ಎಫ್ ಹಾಗೂ ಕರಾವಳಿ ಕಾವಲು ಪಡೆ ಎಸ್ಪಿ ನಿಖೀಲ್‌ ಉಪಸ್ಥಿತರಿದ್ದರು.ಎಸ್‌ಪಿ ವಿಷ್ಣುವರ್ಧನ್‌ ಸ್ವಾಗತಿಸಿ, ಎಎಸ್‌ಪಿ ಕುಮಾರ್‌ ಚಂದ್ರ ವಂದಿಸಿದರು. ಮನಮೋಹನ್‌ ರಾವ್‌ ನಿರೂಪಿಸಿದರು.

ರಾಜ್ಯ, ದೇಶ ಧರ್ಮಛತ್ರವಲ್ಲ !
ರಾಜ್ಯ, ದೇಶ ಧರ್ಮಛತ್ರವಲ್ಲ. ರಾಜ್ಯ,ಹೊರರಾಜ್ಯ, ಹೊರದೇಶಗಳಿಂದ ಆಗಮಿಸುವವರ ಬಗ್ಗೆ ಸ್ಥಳೀಯ ಠಾಣೆಗಳಲ್ಲಿ ಮಾಹಿತಿ ಇರಬೇಕು. ಬಾಂಗ್ಲಾ ನುಸುಳು ಕೋರರನ್ನು ರಾಜ್ಯಕ್ಕೆ ನುಗ್ಗಿಸುವ ಜಾಲದಬಾಲ ಕತ್ತರಿಸಲಾಗುವುದು. ರಾಜ್ಯದ ಭದ್ರತೆಗೆ ಹೆಚ್ಚಿನ ಆದ್ಯತೆ ನೀಡಲಾಗು ವುದು ಎಂದು ಸಚಿವರು ತಿಳಿಸಿದರು.

ಮತಾಂತರ ತಡೆಗೆ ಶೀಘ್ರ ಕಾಯಿದೆ
ರಾಜ್ಯದಲ್ಲಿ ಮತಾಂತರದ ಸಮಸ್ಯೆ ಮನೆ ಬಾಗಿಲಿಗೆ ಬಂದಿದೆ. ಅದನ್ನು ತಡೆಗಟ್ಟುವ ನಿಟ್ಟಿನಲ್ಲಿ ಶೀಘ್ರದಲ್ಲಿ ಮತಾಂತರ ತಡೆ ಮಸೂದೆ ಜಾರಿ ಗೊಳಿಸಲಾಗುತ್ತದೆ ಎಂದು ಆರಗ ಜ್ಞಾನೇಂದ್ರ ತಿಳಿಸಿದರು.

ಉಡುಪಿಯಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಎಲ್ಲ ಧರ್ಮದ ವರು ತಮ್ಮ ಧರ್ಮದಲ್ಲಿ ಚೆನ್ನಾಗಿ ಇರಬೇಕು ಎನ್ನುವುದು ಸರಕಾರದ ಆಶಯ. ಆದರೆ ಮತಾಂತರಗೊಳಿಸುತ್ತಿರುವ ವೇಗ ನೋಡಿದರೆ ಕ್ಷೋಭೆ ನಿರ್ಮಾಣದ ಲಕ್ಷಣ ಕಾಣಿಸುತ್ತಿವೆ ಎಂದರು. ದತ್ತ ಪೀಠ ವಿವಾದವನ್ನು ನ್ಯಾಯಾಲಯ ನೀಡಿದ ಆದೇಶವನ್ನು ವಿಶ್ಲೇಷಿಸಿ ಪರಿಹಾರ ಕ್ರಮ ಕೈಗೊಳ್ಳ ಲಾಗುವುದು ಎಂದು ತಿಳಿಸಿದರು.

ಸೈಬರ್‌ ವಂಚನೆ: ತತ್‌ಕ್ಷಣ 112ಕ್ಕೆ ತಿಳಿಸಿ
ಸೈಬರ್‌ ಅಪರಾಧ ಪ್ರಕರಣಗಳಲ್ಲಿ ಹಣ ಕಳೆದುಕೊಂಡವರು 3 ಗಂಟೆಯೊಳಗೆ ಪೊಲೀಸರಿಗೆ ದೂರು ನೀಡಬೇಕು. ತತ್‌ಕ್ಷಣ ಲಿಖಿತ ದೂರು ನೀಡಲು ಸಾಧ್ಯವಾಗದಿದ್ದಲ್ಲಿ ಪೊಲೀಸ್‌ ಸಹಾಯವಾಣಿ 112ಕ್ಕೆ ಕರೆ ಮಾಡಿ ದೂರು ಸಲ್ಲಿಸಬಹುದು. ಆಗ ಹಣವನ್ನು ಕೊಡಿಸಲು ಸಾಧ್ಯ ವಾಗುತ್ತದೆ ಎಂದು ಆರಗ ಜ್ಞಾನೇಂದ್ರ ಅವರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next