Advertisement

ಅನ್ಯಾಯ ಸರಿಪಡಿಸಲು ಜಿಲ್ಲಾಧಿಕಾರಿಗೆ ಮನವಿ

06:01 PM Dec 10, 2021 | Team Udayavani |

ಬೆಳಗಾವಿ: ರಾಜ್ಯ ಸರ್ಕಾರದ ವಿವಿಧ ಪ್ರಾಧಿಕಾರಗಳ ನೇಮಕದಲ್ಲಿ ಕಿತ್ತೂರು ಕರ್ನಾಟಕದ ಸಾಹಿತಿಗಳು, ಶಿಕ್ಷಣ ತಜ್ಞರು, ಕಲಾವಿದರ ಹಾಗೂ ಸಂಸ್ಕೃತಿ ಚಿಂತಕರ ವಲಯಕ್ಕೆ ಅನ್ಯಾಯವಾಗುತ್ತಲೇ ಬಂದಿದೆ. ಈ ಭಾಗದವರಿಗೆ ಸೂಕ್ತ ಪ್ರಮಾಣದ ಪ್ರಾತಿನಿಧ್ಯ ದೊರೆತಿಲ್ಲ.
ಕೂಡಲೇ ಈ ಕೊರತೆ ನೀಗಿಸುವಂತೆ ಒತ್ತಾಯಿಸಿ ಸಾಹಿತಿಗಳು ಹಾಗೂ ಕಲಾವಿದರು ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.

Advertisement

ಸುಮಾರು 13 ಅಕಾಡೆಮಿಗಳಲ್ಲಿ ಮೈಸೂರಿನ ರಂಗಾಯಣ ಹಾಗೂ ವಿವಿಧ ಶಾಖೆಗಳಲ್ಲಿ ಇಲ್ಲಿನವರಿಗೆ ಅನ್ಯಾಯವಾಗಿದೆ. ಮೇಲಾಗಿ ಇತ್ತೀಚಿನ ವರ್ಷಗಳಲ್ಲಿ ಸಾಹಿತಿಗಳು, ಕಲಾವಿದರ ಅನುಭವ ಪರಿಗಣಿಸದೇ ಕೇವಲ ರಾಜಕೀಯ ಕಾರ್ಯಕರ್ತರನ್ನೇ ಪರಿಗಣಿಸುತ್ತಿದ್ದಾರೆ ಎಂದು ಹಿರಿಯ ಸಾಹಿತಿ ಪ್ರಾ.ಬಿ.ಎಸ್‌. ಗವಿಮಠ ಅಸಮಾಧಾನ ವ್ಯಕ್ತಪಡಿಸಿದರು.

ರಾಜ್ಯೋತ್ಸವ ಪ್ರಶಸ್ತಿಗಳ ಹಂಚಿಕೆ ಯಲ್ಲಿಯೂ ಅನ್ಯಾಯವಾಗುತ್ತಲೇ ಬಂದಿದ್ದು, ಮೂರು ಜಿಲ್ಲೆಗಳ ವಿಸ್ತಾರ ಹೊಂದಿರುವ ಬೆಳಗಾವಿ ಜಿಲ್ಲೆಗೆ ಈ ಬಾರಿ ಒಂದೇ ಒಂದು ಪ್ರಶಸ್ತಿ ಬಂದಿದೆ. ಇದರ ಬಗ್ಗೆ ಗಮನಹರಿಸಬೇಕು ಎಂದು ಸಾಹಿತಿಗಳು ಆಗ್ರಹಿಸಿದರು. ಬೆಳಗಾವಿಯಲ್ಲಿ ಸುವರ್ಣ ವಿಧಾನಸೌಧ ನಿರ್ಮಿಸಿ 9 ವರ್ಷಗಳೇ ಕಳೆದವು. ಆದರೆ ಈ 9 ವರ್ಷಗಳಲ್ಲಿ ರಾಜ್ಯಮಟ್ಟದ ಸಚಿವಾಲಯಗಳು ಬಂದಿಲ್ಲ. ಪ್ರತಿ ವರ್ಷ ಕನಿಷ್ಟ ಪಕ್ಷ 30 ದಿನಗಳ ಕಾಲ ವಿಧಾನ ಮಂಡಲ
ಅಧಿವೇಶನ ನಡೆಯಬೇಕು. ಈ ಭಾಗದ ಸಮಸ್ಯೆಗಳ ಕುರಿತು ಚರ್ಚೆಯಾಗಬೇಕು. ಆದರೆ ಅಧಿವೇಶನದಲ್ಲಿ ಶಾಸಕರ ಗೈರು ಹಾಜರಾತಿ ಎದ್ದು ಕಾಣುತ್ತದೆ ಎಂದು ಹೇಳಿದರು.

ಸುವರ್ಣ ವಿಧಾನಸೌಧ ನಿರ್ಮಾಣ ಮಾಡಿದ್ದರ ಉದ್ದೇಶ ಮರೆಯಬಾರದು. ಬೆಳಗಾವಿಯಲ್ಲಿ ಕನ್ನಡಿಗರ ಸಂಖ್ಯೆ ಹೆಚ್ಚಾಗುವಂತೆ ಬೆಳಗಾವಿಗೆ ಮತ್ತು ಅದರ ಸಮೀಪ ಹೆಚ್ಚಿನ ಪ್ರಮಾಣದಲ್ಲಿ ಉದ್ದಿಮೆಗಳು ಬರಬೇಕು. ಕನ್ನಡ ಭಾಷಿಕರಿಗೆ ಆದ್ಯತೆ ನೀಡಬೇಕು ಎಂದು ಒತ್ತಾಯಿಸಿದರು. ಈ ವೇಳೆ ಏಣಗಿ ಸುಭಾಷ, ಬಸವರಾಜ ಗಾರ್ಗಿ, ಡಾ| ಮಹೇಶ ಗುರನಗೌಡರ ಸೇರಿದಂತೆ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next