ವಿಜಯಪುರ: ಸರ್ಕಾರಿ ವಿದ್ಯಾರ್ಥಿ ನಿಲಯ, ವಸತಿ ಶಾಲೆ ಕಾಲೇಜುಗಳ ಡಿ ದರ್ಜೆ ಹೊರ ಗುತ್ತಿಗೆ ನೌಕರರ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ಸರ್ಕಾರಿ ಹಾಸ್ಟೆಲ್-ವಸತಿ ಶಾಲಾ ಹೊರ ಗುತ್ತಿಗೆ ನೌಕರರ ಸಂಘದಿಂದ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.
ಭೀಮಶಿ ಕಲಾದಗಿ, ಲಕ್ಷ್ಮಣ ಹಂದ್ರಾಳ, ಹುಲಗಪ್ಪ ಚಲವಾದಿ ನೇತೃತ್ವದಲ್ಲಿ ಕರ್ನಾಟಕ ರಾಜ್ಯ ಸರಕಾರ ಹಾಸ್ಟೆಲ್-ವಸತಿ ಶಾಲಾ ಹೊರ ಗುತ್ತಿಗೆ ನೌಕರರ ಸಂಘದಿಂದ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ರಮೇಶ ಕಳಸದ ಅವರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಪ್ರತಭಟನಾ ಪ್ರಮುಖರು, ವಿದ್ಯಾರ್ಥಿ ನಿಲಯಗಳ ಡಿ ವರ್ಗದ ಸಿಬ್ಬಂದಿ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ 2022 ಮಾರ್ಚ್ 10ರಿಂದ ಬೆಂಗಳೂರು ಸ್ವಾತಂತ್ರ್ಯ ಉದ್ಯಾನವನದಲ್ಲಿ ಅನಿರ್ದಿಷ್ಟಾವಧಿ ಧರಣಿ ಹಮ್ಮಿಕೊಳ್ಳಲಾಗುತ್ತದೆ. ಅಷ್ಟರಲ್ಲಿ ಸರ್ಕಾರದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ ಮತ್ತು ಮೊರಾರ್ಜಿ ದೇಸಾಯಿ, ರಾಣಿ ಚನ್ನಮ್ಮ, ಡಾ| ಅಂಬೇಡ್ಕರ್ ಸಂಸ್ಥೆ ಹಾಸ್ಟೆಲ್ -ವಸತಿ ಶಾಲೆಗಳಲ್ಲಿ ಶಾಲೆಗಳಲ್ಲಿ ಅಡುಗೆ, ಸ್ವತ್ಛತೆ, ಕಾವಲು ಸೇರಿದಂತೆ ಡಿ ದರ್ಜೆ ಹುದ್ದೆಯಲ್ಲಿ ಸೇವೆ ಸಲ್ಲಿಸುವ ಸಿಬ್ಬಂದಿ ಬೇಡಿಕೆ ಈಡೇರಿಸಬೇಕು ಎಂದು ಆಗ್ರಹಿಸಿದರು.
ವಿವಿಧ ಇಲಾಖೆ ಹಾಸ್ಟೆಲ್‌ಗಳಲ್ಲಿ ಸೇವೆ ಸಲ್ಲಿಸುತ್ತಿರುವ ಸಿಬ್ಬಂದಿ ಸೇವೆ ಕುರಿತು ಸರ್ಮೋತ್ಛ ನ್ಯಾಯಾಲಯದ ನಿರ್ದೇಶನದಂತೆ ರಾಜ್ಯ ಸರ್ಕಾರ ಅವರನ್ನು ಕಾಯಂಗೊಳಿಸುವ ಪ್ರಕ್ರಿಯೆ ಆರಂಭಿಸಿತು. ಆದರೆ ಹತ್ತಾರು ವರ್ಷಗಳಿಂದ ಕೆಲಸ ಮಾಡುತ್ತಿದ್ದ ಸಿಬ್ಬಂದಿಗಳನ್ನು ಜೇಷ್ಠತೆಗೆ ಅನುಗುನವಾಗಿ ಕಾಯಂ ಮಾಡುವ ಬದಲಾಗಿ 2019ರಲ್ಲಿ ಬಿಸಿಎಂ ಇಲಾಖೆ ನೇರ ನೇಮಕಾತಿ ಮಾಡಿತು. ಇದರಿಂದ ಸಾವಿರಾರು ಜನರು ಉದ್ಯೋಗ ಕಳೆದುಕೊಂಡರು. ಹೀಗಾಗಿ ಸರ್ಕಾರ ಕೂಡಲೇ ಕೆಲಸ ಕಳೆದುಕೊಂಡಿರುವ ಡಿ ವರ್ಗದ ಹೊರ ಗುತ್ತಿಗೆ ನೌಕರರನ್ನು ಮರು ನೇಮಕ ಮಾಡಿಕೊಳ್ಳಬೇಕು ಎಂದು ಆಗ್ರಹಿಸಿದರು.
ಹಾಸ್ಟೆಲ್‌ಗಳಲ್ಲಿ ಉದ್ಯೋಗ ಕಳೆದುಕೊಂಡ ಹೊರ ಗುತ್ತಿಗೆ ನೌಕರರನ್ನು ಮರು ನೇಮಕ ಮಾಡಿಕೊಳ್ಳಬೇಕು. ಡಿ ಹೊರ ಗುತ್ತಿಗೆ ನೌಕರರ ಸೇವೆಯನ್ನು ಕಾಯಂಗೊಳಿಸಬೇಕು. ಹೊರ ಸಂಪನ್ಮೂಲ ಸಿಬ್ಬಂದಿಗಳಿಗೆ ಬಾಕಿ ಇರುವ ವೇತನ ನೀಡಬೇಕು. ಲಾಕ್‌ಡೌನ್ ಅವಧಿಯ ವೇತನ ಪಾವತಿಸಬೇಕು. ಹಿಂದುಳಿದ ವರ್ಗದ ಇಲಾಖೆಗೆ ಸೇರಿದ ವಿದ್ಯಾರ್ಥಿ ನಿಲಯಗಳಿಗೆ ಈ ಹಿಂದೆ ಕೆಲಸ ಮಾಡಿದವರನ್ನೇ ರಾತ್ರಿ ಕಾವಲುಗಾರರಾಗಿ ನೇಮಿಸಬೇಕು. ಎಲ್ಲ ಹೊರ ಸಂಪನ್ಮೂಲ ಸಿಬ್ಬಂದಿಗಳಿಗೆ ಇಎಸ್ ಐ ಮತ್ತು ಪಿಎಫ್ ಸೌಲಭ್ಯವನ್ನು ವಿಸ್ತರಿಸಬೇಕು ಎಂದು ಆಗ್ರಹಿಸಿದರು.
ಕಾಶೀಮ ಅಲ್ದಾಳ, ಲಕ್ಷ್ಮಣ ಮಸಳಿ, ಶಿವಾನಂದ ಮೆಲಿನಕೇರಿ, ಬೋರಮ್ಮ ಬಸರಗಿ, ಲಕ್ಷ್ಮೀ ತಿಕೋಟಾ, ದಾನಮ್ಮ ಹೂಗಾರ, ಮೀನಾಕ್ಷಿ ತಳವಾರ ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.