ಶ್ರೀನಿವಾಸಪುರ: ಸ್ವಾತಂತ್ರ್ಯ ಬಂದು 73 ವರ್ಷಗಳಾದ್ರೂ ಅಲೆಮಾರಿ ಬುಡ್ಗ ಜಂಗಮರನ್ನು ಗುರುತಿಸುವಲ್ಲಿ ತಹಶೀಲ್ದಾರರು ವಿಫಲರಾಗಿದ್ದಾರೆ ಎಂದು ಅಲೆ ಮಾರಿ ಬುಡಕಟ್ಟು ಮಹಾಸಭಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮುರುಗೇಶ್ ಆರೋಪಿಸಿದರು.
ಪಟ್ಟಣದ ತಾಲೂಕು ಕಚೇರಿ ಮುಂದೆ ಅಲೆಮಾರಿ ಬುಡಕಟ್ಟು ಮಹಾಸಭಾ ನೇತೃತ್ವದಲ್ಲಿ ಬುಡ್ಗ ಜಂಗಮ ಸಮುದಾಯದ ಮಕ್ಕಳು, ಮಹಿಳೆಯರು, ಯುವಕರು ಜಾತಿ ಪ್ರಮಾಣ ಪತ್ರ ನೀಡುವಂತೆ ಒತ್ತಾಯಿಸಿ ನಡೆಸಿದ ಪ್ರತಿಭಟನೆ ಉದ್ದೇಶಿಸಿ ಮಾತನಾಡಿದರು.
ಜಾಣಕುರುಡು: ಸ್ವಾತಂತ್ರ ಪೂರ್ವ ದಿಂದಲೂ ಅಲೆಮಾರಿ ಬುಡ್ಗ ಜಂಗಮರ ಕುರಿತು ಕೇಂದ್ರ, ರಾಜ್ಯ ಸರ್ಕಾರ ಹಾಗೂ ಜಿಲ್ಲಾಡಳಿತ ನಡೆಸಿರುವ ಹಲವು ಶಾಸ್ತ್ರೀಯ ಅಧ್ಯಯನಗಳು ಇವೆ. ಇದರ ಬಗ್ಗೆ ಆದೇಶಗಳು ಇದ್ದರೂ ತಾಲೂಕು ಆಡಳಿತ ಅಧಿಕಾರಿಗಳು ಜಾಣಕುರುಡರಂತೆ ವರ್ತಿಸುತ್ತಿದ್ದಾರೆ. ಸಂಬಂಧಿಸಿದಂತೆ ಜಾತಿ ಪ್ರಮಾಣ ಪತ್ರದ ಬಗ್ಗೆ ಸರ್ಕಾರದ ಆಧ್ಯಯನ, ಆದೇಶಗಳನ್ನು ನೋಡಿ ಜಿಲ್ಲಾದ್ಯಂತ ಬುಡ್ಗಜಂಗಮರಿಗೆ ಜಾತಿ ಪ್ರಮಾಣ ಪತ್ರಗಳನ್ನು ವಿತರಿಸಲಾಗುತ್ತಿದೆ. ಆದರೆ, ಶ್ರೀನಿವಾಸಪುರದಲ್ಲಿ ಮಾತ್ರ ಇತ್ತೀಚಿಗೆ ಬಂದ ಅಧಿಕಾರಿಗಳು ಮಲತಾಯಿ ಧೋರಣೆ ಅನುಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಚೇರಿಗೆ ಅಲೆದಾಟ: ತಾಲೂಕು ಆಡಳಿತ ಅಧಿಕಾರಿಗಳು ಕಿವಿ, ಕಣ್ಣು ಕೇಳಿಸದಂತಹ ರೀತಿಯಲ್ಲಿ ವರ್ತಿಸುತ್ತಿದ್ದಾರೆ. ಬಲಾಡ್ಯರ ಬಂಟರಂತೆ ನಡೆದುಕೊಳ್ಳುತ್ತಿದ್ದಾರೆ. ಪ್ರತಿದಿನ ಜಾತಿ ಪ್ರಮಾಣ ಪ್ರತಕ್ಕಾಗಿ ತಾಲೂಕು ಕಚೇರಿಗೆ ಅಲೆದಾಡಲಾಗುತ್ತಿದೆ. ಸಮುದಾಯದವರನ್ನು ಕಡೆಗಣಿಸುತ್ತಿದ್ದಾರೆ ಎಂದು ವಿಷಾದಿಸಿದರು.
ಬಾಬಾ ಸಾಹೇಬ್ ಅಂಬೇಡ್ಕರ್ ನೀಡಿದ ಸಂವಿಧಾನ ಹಕ್ಕುಗಳಿಗೆ ವಿರುದ್ಧವಾಗಿ ಕಾರ್ಯ ನಿರ್ವಹಿಸುತ್ತಾ, ಶೋಷಿತ ಸಮುದಾಯಗಳಿಗೆ ಇರುವ ಹಕ್ಕುಗಳನ್ನು ಕಗ್ಗೊಲೆ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, ಮಲತಾಯಿ ಧೋರಣೆ ತಾಳುತ್ತಿದ್ದಾರೆ ಎಂದು ಕಿಡಿಕಾರಿದರು.
ಹೋರಾಟದ ಎಚ್ಚರಿಕೆ: ಈ ನಿಟ್ಟಿನಲ್ಲಿ ಸೂಕ್ತ ಪರಿಶೀಲನೆ ನಡೆಸಿ ಬುಡ್ಗ ಜಂಗ ಮರಿಗೆ ಜಾತಿ ಪ್ರಮಾಣ ಪತ್ರ ವಿತರಿಸದಿದ್ದಲ್ಲಿ ನ್ಯಾಯ ಸಿಗುವ ತನಕ ಅನಿರ್ದಿಷ್ಟಾವಧಿ ಹೋರಾಟ ನಡೆಸಬೇ ಕಾಗುತ್ತದೆ ಎಂದು ಎಚ್ಚರಿಸಿದರು. ಪ್ರತಿಭಟನೆಯಲ್ಲಿ ಮಹಾಸಭಾ ತಾಲೂಕು ಅಧ್ಯಕ್ಷ ಕೆ. ಎಂ.ಮಂಜುನಾಥ, ಸಮುದಾಯದ ಮುಖಂಡರಾದ ಎಂ.ಶಂಕರ್, ಎಲ್. ಶಂಕರ್, ಕೆ.ವಿ.ವೆಂಕಟರವಣ, ಸಿ.ಎನ್. ಮಂಜುನಾಥ, ಕೆ.ಜಿ.ನಾಗರಾಜ್, ಗುರುಮೂರ್ತಿ, ಡಿ.ವಿ.ರೆಡ್ಡೆಪ್ಪ, ಕೆ. ಎಂ.ದೇವರಾಜ, ರೆಡ್ಡೆಪ್ಪ, ನಾಗರಾಜ, ಬೈಕೊತ್ತೂರು ಶಂಕರ, ನೆಲವಂಕಿ ಶಂಕರ ಇತರರು ಭಾಗವಹಿಸಿದ್ದರು.