ಬೀದರ್ : ಎಸ್.ಟಿ ಟೋಕರಿ ಕೋಳಿ, ಎಸ್ಟಿ ಗೊಂಡ ಸೇರಿದಂತೆ ವಿವಿಧ ಜಾತಿಗಳ ಸಿಂಧುತ್ವ ಪ್ರಮಾಣವನ್ನು ನಾಗರೀಕ ಹಕ್ಕು ಜಾರಿ ನಿರ್ದೇಶನಾಲಯ (ಜಾಗೃತಿ ಕೋಶ) ವರದಿ ಪಡೆದ ನಂತರವೇ ನೀಡಬೇಕೆಂದು ಹೊರಡಿಸಿರುವ ಆದೇಶವನ್ನು ಹಿಂಪಡೆಯುವಂತೆ ಜಿಲ್ಲೆಯ ಗಣ್ಯರ ನೇತೃತ್ವದಲ್ಲಿ ಗೊಂಡ ಮತ್ತು ಟೋಕರಿ ಕೋಳಿ ಸಮಾಜದ ಮುಖಂಡರು ಸಿಎಂ ಬಸವರಾಜ ಬೊಮ್ಮಾಯಿರವರಿಗೆ ಮನವಿ ಸಲ್ಲಿಸಿದರು.
ಬೆಳಗಾವಿಯ ಸುವರ್ಣ ವಿಧಾನ ಸೌಧದಲ್ಲಿ ಜೆಡಿಎಸ್ ಶಾಸಕಾಂಗ ಪಕ್ಷದ ಉಪನಾಯಕರಾಗಿರುವ ಬೀದರ್ ದಕ್ಷಿಣ ಕ್ಷೇತ್ರದ ಶಾಸಕ ಬಂಡೆಪ್ಪ ಖಾಶೆಂಪುರ್, ವಿಧಾನ ಪರಿಷತ್ ಸದಸ್ಯರಾದ ರಘುನಾಥರಾವ್ ಮಲ್ಕಾಪುರೆ ಸೇರಿದಂತೆ ಜಿಲ್ಲೆಯ ಜನಪ್ರತಿನಿಧಿಗಳ ಮುಖಂಡತ್ವದಲ್ಲಿ ಗುರುವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿರವರನ್ನು ಭೇಟಿಯಾಗಿ ಮನವಿ ಸಲ್ಲಿಸಿದರು.
ಗೊಂಡ ಮತ್ತು ಟೋಕರಿ ಕೋಳಿ ಸಮಾಜದ ಮುಖಂಡರು, ರಾಜ್ಯದಲ್ಲಿ 51 ವಿವಿಧ ಬುಡಕಟ್ಟಿನ ಜಾತಿಗಳು ಪರಿಶಿಷ್ಟ ಪಂಗಡದಲ್ಲಿರುತ್ತವೆ.ಆದರೆ ಕೇವಲ 12 ಜಾತಿಗಳಿಗೆ ಮಾತ್ರ ಸಿಂಧುತ್ವ ಪ್ರಮಾಣ ಪತ್ರ ಪಡೆಯಲು ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ವರದಿ ಕಡ್ಡಾಯಗೊಳಿಸಿರುವುದರಿಂದ ಗೊಂಡ ಮತ್ತು ಟೋಕರಿ ಕೋಳಿ ಜಾತಿ ಜನಾಂಗಕ್ಕೆ ಅನ್ಯಾಯವಾಗುತ್ತಿದೆ. ಭಾರತ ಸಂವಿಧಾನದ ಪರಿಚ್ಛೇದ 15ರಲ್ಲಿ ಜಾತಿ, ಧರ್ಮ, ಹುಟ್ಟಿದ ಸ್ಥಳ ಮತ್ತು ಲಿಂಗ ಇವುಗಳಲ್ಲಿ ಯಾವುದೇ ತಾರತಮ್ಯ ಮಾಡಲು ಅವಕಾಶ ಇರುವುದಿಲ್ಲ. ಆದರೆ ಉಲ್ಲೇಖಿತ ಆದೇಶದಲ್ಲಿ 51 ಜಾತಿಗಳ ಪೈಕಿ ಕೇವಲ 12 ಜಾತಿಗಳಿಗೆ ಮಾತ್ರ ಸೀಮಿತಗೊಳಿಸಿ, ಸಿಂಧುತ್ವ ಪ್ರಮಾಣ ಪತ್ರಕ್ಕೆ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ವರದಿ ಕಡ್ಡಾಯಗೊಳಿಸಿ, ಸಂವಿಧಾನದ ಆಶಯಗಳಿಗೆ ಧಕ್ಕೆ ಉಂಟು ಮಾಡಲಾಗಿದೆ.1993ರಲ್ಲಿಯೇ ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜಾತಿ ಪರಿಶೀಲನಾ ಸಮಿತಿಯನ್ನು ಸರಕಾರವು ರಚಿಸಿ, ಸಿಂಧುತ್ವ ಪ್ರಮಾಣ ಪತ್ರ ನೀಡಲು ಅವಕಾಶ ಕಲ್ಪಿಸಿದೆ. ಮುಂದುವರೆದು ಸ್ಟೇಟ್ ಬ್ಯಾಂಕ ಆಫ್ ಹೈದರಬಾದ್ ನ, ನೌಕರರ ಪ್ರಕರಣದಲ್ಲಿ ಕರ್ನಾಟಕದ ಉಚ್ಚ ನ್ಯಾಯಾಲಯವು ದಿನಾಂಕ: 07-07-1997 ರಂದು ತೀರ್ಪು ನೀಡಿದ್ದು, ಸಿಂಧುತ್ವ ಪ್ರಮಾಣ ಪತ್ರಗಳನ್ನು ಸಂಬಂಧಿಸಿದ ಜಿಲ್ಲೆಯ ಜಾತಿ ಪರಿಶೀಲನಾ ಸಮಿತಿಗಳು ಪರಿಶೀಲಿಸಬೇಕಿದ್ದು, ಇದರಲ್ಲಿ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಯಾವುದೇ ಪಾತ್ರವಿಲ್ಲ ಎಂದು ಆದೇಶಿಸಿದೆ.
ಉಲ್ಲೇಖಿತ ಆದೇಶವು ಸಂವಿಧಾನದ ಆಶಯಗಳಿಗೆ ತದ್ವಿರುದ್ದವಾಗಿದ್ದು, ನ್ಯಾಯಲಯ ನೀಡಿದ ತೀರ್ಪಿಗೂ ಧಕ್ಕೆ ಉಂಟಾಗಿರುತ್ತದೆ. ಆದ್ದರಿಂದ ಉಲ್ಲೇಖಿತ ಆದೇಶವನ್ನು ಹಿಂತೆಗೆದುಕೊಂಡು ಗೊಂಡ ಮತ್ತು ಟೋಕರಿ ಕೋಳಿ ಜನಾಂಗದ ಮೇಲಾಗುತ್ತಿರುವ ಅನ್ಯಾಯವನ್ನು ಸರಿಪಡಿಸಬೇಕೆಂದು ಬರೆದ ಮನವಿ ಪತ್ರ ಹಾಗೂ ಟೋಕರಿ ಕೋಳಿ ಸಮಾಜದಿಂದ ಬರೆದ ಇನ್ನೊಂದು ಮನವಿ ಪತ್ರವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿರವರಿಗೆ ಸಲ್ಲಿಸಿದರು.
ಇದೇ ವೇಳೆ ಶಾಸಕ ಬಂಡೆಪ್ಪ ಖಾಶೆಂಪುರ್, ವಿಧಾನ ಪರಿಷತ್ ಸದಸ್ಯ ರಘುನಾಥರಾವ್ ಮಲ್ಕಾಪುರೆ, ಸಚಿವ ಪ್ರಭು ಚವ್ಹಾಣ್, ಶಾಸಕರಾದ ಈಶ್ವರ ಖಂಡ್ರೆ, ರಾಜಶೇಖರ ಪಾಟೀಲ್, ಶರಣು ಸಲಗಾರ, ರಹಿಂಖಾನ್, ವಿಧಾನ ಪರಿಷತ್ ಸದಸ್ಯರಾದ ಅರವಿಂದ ಕುಮಾರ್ ಅರಳಿ, ಚಂದ್ರಶೇಖರ್ ಪಾಟೀಲ್, ವಿಜಯ ಸಿಂಗ್ ರವರು ಮಾತನಾಡಿ, ಗೊಂಡ ಮತ್ತು ಟೋಕರಿ ಕೋಳಿ ಸಮಾಜದ ಸಿಂಧುತ್ವ ಪ್ರಮಾಣ ಪತ್ರಗಳ ಸಮಸ್ಯೆಯನ್ನು ಕೂಡಲೇ ಪರಿಹರಿಸುವಂತೆ ಮನವಿ ಮಾಡಿದರು. ಸಮಸ್ಯೆಗಳನ್ನು ಆದಷ್ಟು ಬೇಗ ಪರಿಹರಿಸಿ ಕೊಡುವ ಭರವಸೆಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿರವರು ನೀಡಿದರು.
ಈ ಸಂದರ್ಭದಲ್ಲಿ ಟೋಕರಿ ಕೋಳಿ ಸಮಾಜದ ಮುಖಂಡರಾದ ಮಾರುತಿಮಾಸ್ಟರ್, ನಾರಾಯಣರಾವ ಭಂಗಿ, ಜಗನ್ನಾಥ ಜಮಾದಾರ, ಶಿವರಾಜ ಬಂಬೊಳಗಿ, ರಾಜು ಬೋರಾಳ, ಶರಣಪ್ಪ ಖಾಶೆಂಪುರ್, ಸಂಜುಕುಮಾರ ಗುಮಾಸ್ತಿ, ರವೀಂದ್ರ ಗುಮಾಸ್ತಿ, ಸಂತೋಷಿ ಚೌಕಿ, ಗೊಂಡ ಸಮಾಜದ ಮುಖಂಡರಾದ ಅಮೃತರಾವ್ ಚಿಮಕೋಡೆ, ಪಂಡಿತರಾವ್ ಚಿದ್ರಿ, ಬಾಬುರಾವ್ ಮಲ್ಕಾಪುರೇ, ಬಸವರಾಜ ಮಾಳ್ಗೆ, ಮಾಳಪ್ಪ ಅಡಸಾರೆ, ಶಿವರಾಜ ಬಿರಾದಾರ, ವಿಜಯಕುಮಾರ ಖಾಶೆಂಪುರ್, ರವೀಂದ್ರ ಕಣಜೆ, ಮಲ್ಲಿಕಾರ್ಜುನ ಬಿರಾದರ ಸೇರಿದಂತೆ ಅನೇಕರಿದ್ದರು.