ಬೆಂಗಳೂರು: ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹದಲ್ಲಿ ಶಶಿಕಲಾ ನಟರಾಜನ್‌ಗೆ ಐಷಾರಾಮಿ ಸೌಲಭ್ಯ ಕಲ್ಪಿಸಲು ಲಂಚ ಪಡೆದ ಆರೋಪ ಪ್ರಕರಣ ಸಂಬಂಧ ಕಾರಾಗೃಹ ಇಲಾಖೆಯ ನಿವೃತ್ತ ಡಿಜಿಪಿ ಎಚ್.ಎನ್. ಸತ್ಯಾನಾರಾಯಣರಾವ್ ಸಲ್ಲಿಸಿರುವ ಅರ್ಜಿಯಲ್ಲಿ ತಮ್ಮ ವಾದ ಆಲಿಸುವಂತೆ ಕೋರಿ ಡಿಐಜಿ ರೂಪಾ ಸಲ್ಲಿಸಿರುವ ಮಧ್ಯಂತರ ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ಮುಂದೂಡಿದೆ.
ಈ ಪ್ರಕರಣದಲ್ಲಿ ತಮ್ಮ ವಿರುದ್ಧ ಎಸಿಬಿ ದಾಖಲಿಸಿರುವ ಎಫ್ಐಆರ್ ರದ್ದುಗೊಳಿಸುವಂತೆ ಕೋರಿ ಸತ್ಯನಾರಾಯಣರಾವ್ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸುತ್ತಿರುವ ನ್ಯಾ. ಆಲೋಕ್ ಆರಾಧೆ ಅವರಿದ್ದ ಏಕಸದಸ್ಯ ನ್ಯಾಯಪೀಠದ ಮುಂದೆ ಸೋಮವಾರ ಅರ್ಜಿ ವಿಚಾರಣೆಗೆ ಬಂದಿತ್ತು. ಈ ವೇಳೆ ರೂಪಾ ಅವರು ಸಲ್ಲಿಸಿರುವ ಮಧ್ಯಂತರ ಅರ್ಜಿಯನ್ನು ಆಕ್ಷೇಪಿಸಿದ ಸತ್ಯನಾರಾಯಣರಾವ್ ಪರ ವಕೀಲರು, ಈ ಮಧ್ಯಂತರ ಅರ್ಜಿಯನ್ನು ಮಾನ್ಯ ಮಾಡಬಾರದು ಎಂದು ನ್ಯಾಯಪೀಠಕ್ಕೆ ಮನವಿ ಮಾಡಿದರು.
ವಿಚಾರಣೆ ವೇಳೆ ರೂಪಾ ಪರ ವಕೀಲರು ವಾದ ಮಂಡಿಸಿ, ಅರ್ಜಿಯಲ್ಲಿ ತಮ್ಮ ಕಕ್ಷಿದಾರರನ್ನು ಪ್ರತಿವಾದಿಯನ್ನಾಗಿ ಪರಿಗಣಿಸಬೇಕು. ರೂಪಾ ಅವರು ಕಾರಾಗೃಹಕ್ಕೆ ಭೇಟಿ ನೀಡಿದ್ದಾಗ ಅಲ್ಲಿ ಅವರಿಗೆ ಕೆಲವೊಂದು ದೂರುಗಳು ಬಂದಿದ್ದವು. ಆ ಬಗ್ಗೆ ಅವರು ಪತ್ರದ ಮೂಲಕ ಅರ್ಜಿದಾರರು ಸೇರಿದಂತೆ ಆರು ಹಿರಿಯ ಅಧಿಕಾರಿಗಳಿಗೆ ವಿಷಯ ತಿಳಿಸಿದ್ದರು. ಅಲ್ಲದೇ, ಅರ್ಜಿದಾರರು ರೂಪಾ ಅವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ, ಈ ಪ್ರಕರಣದ ಪರಿಣಾಮ ಅದರ ಮೇಲೂ ಆಗುತ್ತದೆ. ಆದ್ದರಿಂದ ತಮ್ಮ ಕಕ್ಷಿದಾರರ ವಾದ ಆಲಿಸಬೇಕು ಎಂದು ನ್ಯಾಯಪೀಠಕ್ಕೆ ಮನವಿ ಮಾಡಿದರು.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಅರ್ಜದಾರರ ಪರ ವಕೀಲರು, ಸತ್ಯನಾರಾಯಣರಾವ್ ಅವರಿಗಿಂತ ಕಿರಿಯ ಶ್ರೇಣಿಯ ಅಧಿಕಾರಿಯಾಗಿರುವ ರೂಪಾ ಅವರು, ಪತ್ರ ಬರೆದು ಅದು ತಮಗೆ ತಲುಪುವ ಮುನ್ನ ಅವರೇ ಮಾಧ್ಯಮಗಳಿಗೆ ಸೋರಿಕೆ ಮಾಡಿದ್ದಾರೆ. ಅಲ್ಲದೆ, ಅವರಿಗೆ ಜೈಲಿನಿಂದ ಯಾವುದೇ ದೂರು ಬಂದಿರಲಿಲ್ಲ , ಅವರ ಆರೋಪಗಳಲ್ಲಿ ಸತ್ಯಾಂಶವಿಲ್ಲ ಎಂದು ವಾದಿಸಿದರು. ವಾದ ಪ್ರತಿವಾದ ಆಲಿಸಿದ ನ್ಯಾಯಪೀಠ, ರೂಪಾ ಅವರ ಮಧ್ಯಂತರ ಅರ್ಜಿಯನ್ನು ಮಾನ್ಯ ಮಾಡುವ ಬಗ್ಗೆ ಪರಿಶೀಲಿಸಲು, ವಿಚಾರಣೆಯನ್ನು ಮಾ.28ಕ್ಕೆ ಮುಂದೂಡಿತು.