Advertisement

ಭೂ ಪರಿಹಾರ ಮೊತ್ತ ಹೆಚ್ಚಿಸಲು ಆಗ್ರಹಿಸಿ ಮನವಿ

01:42 PM Nov 25, 2021 | Team Udayavani |

ರಾಯಚೂರು: ವಾಡಿ-ಗದಗ ರೈಲು ಮಾರ್ಗ ನಿರ್ಮಾಣಕ್ಕೆ ಲಿಂಗಸುಗೂರು ತಾಲೂಕಿನ ಕರಡಕಲ್‌ ಗ್ರಾಮದ ಭೂ ಸ್ವಾಧೀನಕ್ಕೆ ಸರ್ಕಾರ ಮುಂದಾಗಿದ್ದು, ಪರಿಹಾರ ಮೊತ್ತ ಅತ್ಯಂತ ಕಡಿಮೆ ನಿಗದಿ ಮಾಡಿರುವುದನ್ನು ಖಂಡಿಸಿ ಭೂ ಸಂತ್ರಸ್ತರು ಮಂಗಳವಾರ ಪ್ರತಿಭಟಿಸಿದರು.

Advertisement

ನಗರದ ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಬಳಿಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು. 2018ರಲ್ಲಿ ಭೂ ಸ್ವಾಧೀನ ಕುರಿತು ರೈತರಿಗೆ ಕೈಗಾರಿಕೆ ಪ್ರದೇಶಾಭಿವೃದ್ಧಿ ಮಂಡಳಿಯಿಂದ ನೋಟಿಸ್‌ ನೀಡಲಾಗಿತ್ತು. ರೈತರು 30 ದಿನದೊಳಗೆ ಆಕ್ಷೇಪಣೆ ಸಲ್ಲಿಸಿದ್ದರು. 2020ರ ನ.27ರಂದು ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ದರ ನಿಗದಿ ಕುರಿತು ಸಭೆ ನಡೆಸಲಾಗಿತ್ತು. ಆಗ ರೈತರು ಎಕರೆಗೆ ಒಂದು ಕೋಟಿ ರೂ. ನೀಡುವಂತೆ ಒತ್ತಾಯಿಸಿದ್ದರು. ಆದರೆ, ಡಿಸಿಯವರು ಎಕರೆಗೆ 36 ಲಕ್ಷ ರೂ. ಸಿಗಬಹುದು. ಮತ್ತೊಮ್ಮೆ ಸಭೆ ಕರೆದು ಅಂತಿಮ ದರ ನಿಗದಿಪಡಿಸುವುದಾಗಿ ತಿಳಿಸಿದ್ದರು ಎಂದು ವಿವರಿಸಿದರು.

ಆದರೆ, 2021ರ ಆ.28ರಂದು ಬೆಂಗಳೂರಿನಲ್ಲಿ ನಡೆದ ಸಭೆಯಲ್ಲಿ ಎಕರೆಗೆ ಕೇವಲ 10.50 ಲಕ್ಷ ರೂ. ದರ ನಿಗದಿ ಮಾಡಲಾಗಿದೆ. ಇದು ಏಕಪಕ್ಷೀಯ ನಿರ್ಧಾರವಾಗಿದ್ದು, ರೈತರಿಗೆ ಸಾಕಷ್ಟು ಅನ್ಯಾಯವಾಗಲಿದೆ. ಕರಡಕಲ್‌ ಗ್ರಾಮವು ಲಿಂಗಸುಗೂರು ಪಟ್ಟಣಕ್ಕೆ ಹೊಂದಿಕೊಂಡಿದೆ. 30/40 ಅಳತೆಯ ನಿವೇಶನವೇ 15 ಲಕ್ಷ ರೂ. ಗಿಂತ ಹೆಚ್ಚಾಗಿದೆ. ಎಕರೆಗೆ ಏನಿಲ್ಲವೆಂದರೂ 60-70 ಲಕ್ಷ ರೂ. ಬೆಲೆ ಇದೆ. ಹೀಗಾಗಿ ಸರ್ಕಾರ ನಿಗದಿ ಮಾಡಿರುವ ಬೆಲೆ ಅವೈಜ್ಞಾನಿಕವಾಗಿದ್ದು, ರೈತರು ಭೂಮಿ ನೀಡಿದರೆ ಬೀದಿಗೆ ಬರಬೇಕಾಗುತ್ತದೆ. ಸರ್ಕಾರ ಕೂಡಲೇ ಬೆಲೆಯನ್ನು ಮರು ನಿಗದಿ ಮಾಡದಿದ್ದರೆ ನಾವು ಯೋಜನೆಗೆ ಕಿಂಚಿತ್ತೂ ಭೂಮಿ ನೀಡುವುದಿಲ್ಲ ಎಂದು ಎಚ್ಚರಿಸಿದರು.

ಮುಖಂಡರು ಶಿವಾನಂದ ಐದನಾಳ, ಗುಂಡಯ್ಯ ಸ್ವಾಮಿ, ಸತ್ಯನಾರಾಯಣ, ಸುಂದರ್‌, ಗುಂಡಪ್ಪ ಸಜ್ಜನ್‌, ಭೂ ಸಂತ್ರಸ್ತರಾದ ಶಂಕ್ರಪ್ಪ, ಗುರುಸಿದ್ದಪ್ಪ, ಅಮರೇಶ, ಪರಸಪ್ಪ, ಚನ್ನಬಸವ, ವೆಂಕಪ್ಪ, ಅಯ್ಯಪ್ಪ, ನಾಗರಾಜ್‌, ರಂಗನಾಥ ಸೇರಿದಂತೆ ಅನೇಕ ಭೂ ಸಂತ್ರಸ್ತರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next