ಕಲಬುರಗಿ: ಹಿಂದುಳಿದ ಆದಿ ಬಣಜಿಗ ಜಾತಿಯನ್ನು ಗೆಜೆಟ್‌ನಲ್ಲಿ ಸೇರ್ಪಡೆಗೊಳಿಸಿ ಪ್ರವರ್ಗ 2ಎ ಮೀಸಲಾತಿ ನೀಡುವಂತೆ ಒತ್ತಾಯಿಸಿ ಬೆಳಗಾವಿಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಆದಿ ಬಣಜಿಗ ಯುವ ವೇದಿಕೆಗಳ ಒಕ್ಕೂಟದ ವತಿಯಿಂದ ಮನವಿ ಸಲ್ಲಿಸಲಾಯಿತು.
ಈ ಕುರಿತು ಜಿಲ್ಲಾ ಆದಿ ವೀರಶೈವ ಸಮಾಜದ ಅಧ್ಯಕ್ಷ ಬಸವರಾಜ ಕೊನೆಕ್, ಕಾರ್ಯದರ್ಶಿ ಸೋಮಶೇಖರ ಟೆಂಗಳಿ ಹೇಳಿಕೆಯೊಂದನ್ನು ಹೊರಡಿಸಿ, ಬೊಮ್ಮಾಯಿ ಅವರಿಗೆ ಸಮಾಜದ ನಿಯೋಗದೊಂದಿಗೆ ಭೇಟಿಯಾಗಿ ಬೇಡಿಕೆ ಸಲ್ಲಿಸಲಾಗಿದೆ. ಪ್ರಮುಖವಾಗಿ ವೀರಶೈವ ಲಿಂಗಾಯಿತ 19 ಉಪ ಜಾತಿಗಳಲ್ಲಿ ಆದಿ ಬಣಜಿಗ ಜಾತಿಯನ್ನು 2009ರ ಗೆಜೆಟ್‌ನಲ್ಲಿ ಸೇರ್ಪಡೆಗೊಳಿಸಿ, ಶೇ. 5ರ ಮೀಸಲಾತಿ ನಿಗದಿಗೊಳಿಸಲಾಗಿತ್ತು. ನಂತರ ಈ ಆದೇಶ ಹಿಂದಕ್ಕೆ ಪಡೆದು ಸಮಾಜಕ್ಕೆ ಅನ್ಯಾಯ ಮಾಡಿರುವುದನ್ನು ಮುಖ್ಯಮಂತ್ರಿಗಳಿಗೆ ಮನವರಿಕೆ ಮಾಡಲಾಯಿತು ಎಂದು ತಿಳಿಸಿದ್ದಾರೆ.
ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಆದಿ ಬಣಜಿಗ ಸಮುದಾಯವನ್ನು ಪ್ರವರ್ಗ 2ಎ ಮೀಸಲಾತಿಯಡಿ ಹಿಂದುಳಿದ ವರ್ಗಕ್ಕೆ ಸೇರಿಸಬಹುದು ಎಂಬುದಾಗಿ ಶಿಫಾರಸು ಸಹ ಮಾಡಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ. ಆದ್ದರಿಂದ ಜಾತಿ ಗೆಜೆಟ್‌ನಲ್ಲಿ ಆದಿ ಬಣಜಿಗ ಸಮಾಜ ಸೇರಬೇಕು. ಮುಂಬೈ ಕರ್ನಾಟಕ ವ್ಯಾಪ್ತಿಗೆ ಒಳಪಟ್ಟ 1893ರ ಮಹಾರಾಷ್ಟ್ರದ ಗೆಜೆಟ್‌ನಲ್ಲಿ ಆದಿ ಬಣಜಿಗ ಎಂದು ನಮೂದಿಸಿರುವುದನ್ನು ದಾಖಲೆ ಸಮೇತ ಮುಖ್ಯಮಂತ್ರಿಗಳಿಗೆ ಮನವರಿಕೆ ಮಾಡಿಕೊಡಲಾಗಿದೆ ಎಂದು ಕೊನೆಕ್, ಟೆಂಗಳಿ ವಿವರಣೆ ನೀಡಿದ್ದಾರೆ.
ನಿಯೋಗದಲ್ಲಿ ಯುವ ಘಟಕದ ಜಿಲ್ಲಾಧ್ಯಕ್ಷ ರಾಜು ನವಲದಿ, ಉಪಾಧ್ಯಕ್ಷ ವಿ.ಜಿ. ಗೌನಳ್ಳಿ, ಕಾರ್ಯದರ್ಶಿ ಸತೀಶ ಪಾಟೀಲ ಆಲಗೂಡ, ಅಪ್ಪಾರಾವ್ ಪಾಟೀಲ ಮರತೂರ, ರಾಜೇಂದ್ರ ಕರೆಕಲ್, ಶಿವಪುತ್ರಪ್ಪ ಬುರುಡೆ, ಶಾಂತಪ್ಪ ಪಾಟೀಲ ಕಣ್ಣೂರ, ಭೀಮರಾವ್ ಕೊಳ್ಳುರ, ಚಂದ್ರಕಾಂತ ಪಾಟೀಲ ಚಲಗೇರಾ, ಚಂದ್ರಕಾಂತ ಪಾಟೀಲ, ಮಹಾದೇವಪ್ಪ ಪಾಟೀಲ ಮುಂತಾದವರಿದ್ದರು.
ಮುಜರಾಯಿ ಖಾತೆ ಸಚಿವೆ ಶಶಿಕಲಾ ಜೊಲ್ಲೆ, ಮಾಜಿ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ, ಕೆಕೆಆರ್‌ಡಿಬಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ ರೇವೂರ, ಎಂಎಲ್‌ಸಿ ಬಿ.ಜಿ. ಪಾಟೀಲ, ಶಾಸಕರಾದ ಬಸವರಾಜ ಮತ್ತಿಮಡು, ಸಿದ್ಧು ಸವದಿ ಮುಂತಾದವರಿದ್ದರು.