ಅಪ್ಪಾಜಿ ಮೇಲೆ ಯೋಗ ಗಾಢ ಪ್ರಭಾವ ಬೀರಿತ್ತು. ಹಾಗೆ ನೋಡಿದರೆ ಅಪ್ಪಾಜಿ ಯೋಗವನ್ನು ಹುಡುಕಿಕೊಂಡು ಹೋದವರಲ್ಲ, ಯೋಗವೇ ಅಪ್ಪಾಜಿಯನ್ನು ಹುಡುಕಿಕೊಂಡು ಬಂತು ಎಂದರೆ ತಪ್ಪಲ್ಲ.
ಯೋಗ ಆರಂಭಿಸುವ ಹೊತ್ತಿಗೆ ಹೆಚ್ಚುಕಮ್ಮಿ ಅಪ್ಪಾಜಿಗೆ 50 ವರ್ಷ ಆಗೋಗಿತ್ತು. ಸಾಮಾನ್ಯವಾಗಿ ಬೇರೆ ರೀತಿ ದೇಹ ದಂಡಿಸಿದವರಿಗೆ ಬೇಗನೇ ಯೋಗಕ್ಕೆ ದೇಹ ಒಗ್ಗಲ್ಲ. ಆದರೆ ಅಪ್ಪಾಜಿಗೆ ಯೋಗ ಬೇಗನೇ ಕೈ ಹಿಡಿಯಿತು. ಯೋಗ ಮಾಸ್ಟರ್ ನಾಯಕರ್ ಎನ್ನುವವರು ಅಪ್ಪಾಜಿಯವರನ್ನು ಹುಡುಕಿಕೊಂಡು ಬಂದು “ನೀವು ಯೋಗ ಮಾಡಿ, ಒಳ್ಳೆಯದು’ ಎಂದರು. ಆರಂಭದಲ್ಲಿ ಒಂದೆರಡು ದಿನ ಮಾಡಿ, ಅನಂತರ ಅಪ್ಪಾಜಿ “ನನಗೆ ಕಷ್ಟವಾಗುತ್ತೆ” ಎನ್ನುತ್ತಿದ್ದರು.
ಗರಡಿ ಮನೆಯಲ್ಲಿ ಅಭ್ಯಾಸ ಮಾಡಿದ್ದ ಅಪ್ಪಾಜಿಗೆ ಯೋಗ ಆರಂಭದಲ್ಲಿ ಸ್ವಲ್ಪ ಕಷ್ಟವಾಯಿತು. ಆದರೆ ಒಂದು ವಾರದ ಅನಂತರ ಅಪ್ಪಾಜಿ ಯೋಗಕ್ಕೆ ಚೆನ್ನಾಗಿ ಹೊಂದಿಕೊಂಡರು. ಎಷ್ಟು ಕಷ್ಟವಾದರೂ ಮಾಡಲೇಬೇಕೆಂದು ನಿರ್ಧರಿಸಿದರು. ಅಲ್ಲಿಂದ ಅವರ ದೇಹಪ್ರಕೃತಿ ಬದಲಾಯಿತು. ಅವರಿಗೆ ಜಾಸ್ತಿ ವಯಸ್ಸಾಗಿಲ್ಲ ಎಂಬ ಭಾವನೆ ಬರತೊಡಗಿತು. ಮೊದಲೇ ಅವರು ತಲೆಗೆ ಯಾವುದೇ ಬಿಸಿನೆಸ್ ಹಚ್ಚಿಕೊಂಡಿರಲಿಲ್ಲ. ಯೋಗಕ್ಕೆ ಬಂದ ಬಳಿಕ ಅದರ ಜತೆಗೆ ಅವರೇ ಇದ್ದುಬಿಟ್ಟರು.
ಅವರು ಯಾವಾಗಲೂ ಒಂದು ಮಾತು ಹೇಳುತ್ತಿದ್ದರುಅದೇನೆಂದರೆ, “ನಾನು ಒಳಗಡೆ ಪ್ರಯಾಣ ಮಾಡ್ತಾ ಇದ್ದೀನಿ, ನನ್ನೊಳಗೆ ನನ್ನನ್ನು ಹುಡುಕ್ತಾ ಇದ್ದೀನಿ, ನನ್ನ ತಪ್ಪುಗಳನ್ನು ಹುಡುಕ್ತಾ ಇದ್ದೀನಿ” ಎನ್ನುತ್ತಿದ್ದರು. ಆ ತರಹದ ಬದಲಾವಣೆ ಯೋಗದಿಂದ ಆಗಿತ್ತು. ಯಾವುದೇ ಪ್ರದೇಶಕ್ಕೆ ಹೋದರೂ ಬೆಳಗ್ಗೆ ಬೇಗ ಎದ್ದು ತಣ್ಣೀರು ಸ್ನಾನ ಮಾಡಿ ಯೋಗ ಮಾಡುತ್ತಿದ್ದರು. ಆ ತರಹದ ಅಭ್ಯಾಸ ಅವರಿಗೆ ಯೋಗದಿಂದ ಬಂದಿತ್ತು.
ಅವರು ಯೋಗವನ್ನು ಎಷ್ಟರ ಮಟ್ಟಿಗೆ ಹಚ್ಚಿಕೊಂಡಿದ್ದರೆಂದರೆ ಕಾಡಲ್ಲಿ 108 ದಿನ ಅಲ್ಲೇ ಕಳೆದರೂ ಕಾಡಿಗೆ ಹೋದ 3ನೇ ದಿನಕ್ಕೆ ಯೋಗ ಮಾಡಲಾರಂಭಿಸಿದರು. ಇಲ್ಲಾಂದ್ರೆ ಆ ವಯಸ್ಸಲ್ಲಿ ಮಂಡಿನೋವು, ಸೊಂಟ ನೋವು ಜತೆ ಇರೋದಿಕ್ಕೆ ಆಗೋದಿಲ್ಲ. ಕಾಡಿನಿಂದ ಬಂದಾಗ ಅವರು ಅದೇ ತೂಕದಲ್ಲಿದ್ದರು. ಬಣ್ಣ ಸ್ವಲ್ಪ ಬದಲಾಗಿದ್ದು ಬಿಟ್ಟರೆ ಮಿಕ್ಕಂತೆ ಸಮಚಿತ್ತದಿಂದ ಅಪ್ಪಾಜಿ ಇದ್ದರೆಂದರೆ ಅದಕ್ಕೆ ಯೋಗವೂ ಕಾರಣ. ಮನೆಯಲ್ಲಿ ಅವರು ಓಂಕಾರ ಪಠಿಸಿದರೆ ಇಡೀ ಮನೆಯಲ್ಲಿ ಏನೋ ಒಂದು ಸಂಚಲನ. ಅಪ್ಪಾಜಿ ಜತೆ ನಮ್ಮ ತಾಯಿ, ಅಪ್ಪು, ನಮ್ಮನ್ನೆಲ್ಲ ಯೋಗ ಮಾಡಿಸುತ್ತಿದ್ದರು. ಕಾಮನಬಿಲ್ಲು ಸಿನೆಮಾದಲ್ಲೂ ಯೋಗ ಬಳಸಿದರು. ಇಂತಹ ಒಳ್ಳೆಯ ವಿಷಯವನ್ನು ಜನರಿಗೆ ತಿಳಿಸಬೇಕು ಎಂದು ಮಾಸ್ಟರ್ ಹೇಳಿದ ಮೇಲೆ ಆ ಚಿತ್ರದಲ್ಲಿ ಯೋಗ ಬಳಸಿಕೊಳ್ಳಲಾಯಿತು.
ರಾಘವೇಂದ್ರ ರಾಜ್‌ಕುಮಾರ್