ಹೊಸದಿಲ್ಲಿ: ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ಕಾಂಗ್ರೆಸ್ ಅಪಪ್ರಚಾರ ನಡೆಸುತ್ತಿದೆ ಎಂದು ಬಿಜೆಪಿ ಸೋಮವಾರ(ಡಿ23) ಆರೋಪಿಸಿದೆ. ನಾಟಕ ಮಾಡುವ ಬದಲು ಬಿ.ಆರ್. ಅಂಬೇಡ್ಕರ್ ಅವರನ್ನು ನಿರಂತರ ಅವಮಾನ ಮಾಡಿದುದ್ದಕ್ಕಾಗಿ ಕ್ಷಮೆಯಾಚಿಸಬೇಕು” ಎಂದು ಕಿಡಿ ಕಾರಿದೆ.
” ಕಾಂಗ್ರೆಸ್ ತನ್ನ ರಾಜಕೀಯ ಅಸ್ಥಿತ್ವವನ್ನು ಸ್ಥಾಪಿಸುವ ಪ್ರಯತ್ನದಲ್ಲಿ ಇತ್ತೀಚೆಗೆ ರಾಜ್ಯಸಭೆಯಲ್ಲಿ ಶಾ ಅವರು ಮಾಡಿದ ಭಾಷಣದ ಒಂದು ಸಣ್ಣ ಭಾಗವನ್ನು ಸಂದರ್ಭಾತೀತವಾಗಿ ಬಳಸಿಕೊಂಡು ಅಪಪ್ರಚಾರ ಮಾಡುತ್ತಿದೆ” ಎಂದು ಬಿಜೆಪಿ ಆರೋಪಿಸಿದೆ.
ಅಂಬೇಡ್ಕರ್ ಅವರನ್ನು ಅವಮಾನಿಸಿದ್ದಾರೆ ಎಂದು ಆರೋಪಿಸಿ ಶಾ ವಿರುದ್ಧ ಕಾಂಗ್ರೆಸ್ ರಾಷ್ಟ್ರವ್ಯಾಪಿ ಒಂದು ವಾರದ ”ಅಂಬೇಡ್ಕರ್ ಸಮ್ಮಾನ್ ಸಪ್ತಾಹ” ಅಭಿಯಾನ ಆರಂಭಿಸಿದೆ. ಅಂಬೇಡ್ಕರ್ ಅವರ ಪರಂಪರೆಯನ್ನು ಸ್ಮರಿಸಲು ಕಾಂಗ್ರೆಸ್ ಕಾರ್ಯಕರ್ತರು ಮತ್ತು ಮುಖಂಡರು ಮೆರವಣಿಗೆ ಮತ್ತು ಪತ್ರಿಕಾಗೋಷ್ಠಿಗಳನ್ನು ನಡೆಸಲಿದ್ದಾರೆ.
ಬಿಜೆಪಿ ಕೇಂದ್ರ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಹಿರಿಯ ನಾಯಕ ಮತ್ತು ಮಾಜಿ ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಮಾತನಾಡಿ” ಅಂಬೇಡ್ಕರ್ ಅವರ ಜೀವಿತಾವಧಿಯಲ್ಲಿ ಅವರನ್ನು ಯಾವಾಗಲೂ ಅವಮಾನಿಸುತ್ತಿದ್ದ ಕಾಂಗ್ರೆಸ್, ಈಗ ಅವರ ಪರಂಪರೆಯನ್ನು ನೆನಪಿಸಿಕೊಳ್ಳುವ ನಾಟಕ ಮಾಡುತ್ತಿದೆ. ದೇಶಾದ್ಯಂತ ಪತ್ರಿಕಾಗೋಷ್ಠಿಗಳನ್ನು ನಡೆಸುತ್ತಿದೆ. ಈ ನಾಟಕವನ್ನು ನಿಲ್ಲಿಸಿ. ಈ ಬೂಟಾಟಿಕೆ ನಿಲ್ಲಿಸಿ” ಎಂದರು.
“ಅಂಬೇಡ್ಕರ್ ಅವರ ಜೀವಿತಾವಧಿಯಲ್ಲಿ ಮತ್ತು ಅವರ ಮರಣಾನಂತರ ಅವರ ಪರಂಪರೆಗೆ ಮಾಡಿದ ಎಲ್ಲಾ ಅವಮಾನಗಳಿಗೆ ಸಾರ್ವಜನಿಕವಾಗಿ ಕಾಂಗ್ರೆಸ್ ಬೇಷರತ್ ಕ್ಷಮೆಯಾಚಿಸಬೇಕು, ಬಳಿಕ ಪತ್ರಿಕಾಗೋಷ್ಠಿ ನಡೆಸಲಿ ”ಎಂದು ಕಿಡಿ ಕಾರಿದರು.”ದೇಶದ ಜನರು ಬಹಳ ಪ್ರಬುದ್ಧರು ಕಾಂಗ್ರೆಸ್ ಪ್ರಯತ್ನಗಳು ಯಶಸ್ವಿಯಾಗುವುದಿಲ್ಲ” ಎಂದು ರವಿಶಂಕರ್ ಪ್ರಸಾದ್ ಹೇಳಿದರು.