ಗದಗ: ರಾಜ್ಯ ಸರ್ಕಾರದ ಎಪಿಎಂಸಿ ಸೆಸ್ ವಿರೋಧಿಸಿ ಜು.27ರಿಂದ ಅನಿರ್ದಿಷ್ಟಾವಧಿಗೆ ಎಪಿಎಂಸಿ ಮಾರುಕಟ್ಟೆ ಬಂದ್ ಮಾಡಲು ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ನಿರ್ಧರಿಸಿದೆ.
ಎಪಿಎಂಸಿ ಕ್ರಿಯಾ ಸಮಿತಿ ಚೇರಮನ್ ಶಂಕ್ರಣ್ಣ ಮುನವಳ್ಳಿ ಅಧ್ಯಕ್ಷತೆಯಲ್ಲಿ ಹುಬ್ಬಳ್ಳಿಯಲ್ಲಿ ನಡೆದ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ರಾಜ್ಯ ಸರ್ಕಾರ ವಿದೇಶಿ ಬಹುರಾಷ್ಟ್ರೀಯ ಕಂಪನಿಗಳಿಗೆ ಮುಕ್ತವಾಗಿ ಆಹ್ವಾನಿಸುವುದರಿಂದ ಎಪಿಎಂಸಿ ಮಾರುಕಟ್ಟೆಯಿಂದ ರೈತರನ್ನು ಗೊಂದಲಕ್ಕೀಡು ಮಾಡಲಾಗುತ್ತಿದೆ. ಪರಿಣಾಮ ಎಪಿಎಂಸಿ ಮಾರುಕಟ್ಟೆಯಿಂದ ರೈತರು ವಿಮುಖರಾಗುತ್ತಿದ್ದಾರೆ. ಮಾರುಕಟ್ಟೆಯಿಂದ ವಹಿವಾಟು ಹಸ್ತಾಂತರಗೊಂಡು ರೈತರಿಗೆ ಸರಿಯಾದ ಬೆಲೆ ದೊರೆಯುವುದಿಲ್ಲ. ಮಾರುಕಟ್ಟೆಯಲ್ಲಿ ಬಂಡವಾಳ ಹೂಡಿರುವ ವ್ಯಾಪಾರಸ್ಥರಿಗೆ ಕಂಟಕವಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಎಪಿಎಂಸಿ ಹೊರಗಡೆ ವ್ಯಾಪಾರ-ವಹಿವಾಟು ಮಾಡುವ ವ್ಯಾಪಾರಸ್ಥರಿಗೆ ಯಾವುದೇ ರೀತಿಯ ಮಾರುಕಟ್ಟೆ ಸೆಸ್ ಇರುವುದಿಲ್ಲ. ಎಪಿಎಂಸಿ ವರ್ತಕರಿಗೆ ಮಾತ್ರ ಸೆಸ್ ಅನ್ವಯವಾಗಲಿದೆ. ಮಾರುಕಟ್ಟೆ ಅವಲಂಬಿಸಿರುವ ದಲಾಲರು, ಖರೀದಿದಾರರು, ಗುಮಾಸ್ತರು, ಹಮಾಲರು, ಶ್ರಮಿಕರು ಸೇರಿ ಒಟ್ಟು ಕರ್ನಾಟಕದಲ್ಲಿ ಸುಮಾರು 6 ರಿಂದ 7 ಲಕ್ಷ ಕುಟುಂಬಗಳು ಬೀದಿಗೆ ಬರಲಿವೆ ಎಂದು ಕಳವಳ ವ್ಯಕ್ತಪಡಿಸಿದರು. ಈ ಹಿನ್ನೆಲೆಯಲ್ಲಿ ಜು.27ರಿಂದ ಅನಿರ್ದಿಷ್ಟಾವಧಿಗೆ ಎಪಿಎಂಸಿ ವ್ಯಾಪಾರ ಸ್ಥಗಿತಗೊಳಿಸಲು ನಿರ್ಧರಿಸಲಾಯಿತು. ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ ಸಭೆಯಲ್ಲಿ ಅಧ್ಯಕ್ಷ ಮಹೇಂದ್ರ ಲದ್ದಡ, ಮಾಜಿ ಗೌರವ ಕಾರ್ಯದರ್ಶಿ ಸಿದ್ದೇಶ್ವರ ಕಮ್ಮಾರ, ಉಪಾಧ್ಯಕ್ಷ ಹೊಟ್ಟಿಗೌಡ್ರ ಹಾಗೂ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆ ಗೌರವ ಕಾರ್ಯದರ್ಶಿ ತಾತನಗೌಡ ಪಾಟೀಲ, ಎಪಿಎಂಸಿ ಖರೀದಿ ವರ್ತಕರ ಸಂಘದ ಅಧ್ಯಕ್ಷ ಶೇಖಣ್ಣ ಗದ್ದಿಕೇರಿ, ಎಪಿಎಂಸಿ ಖರೀದಿ ವರ್ತಕರ ಸಂಘದ ಉಪಾಧ್ಯಕ್ಷ ವೀರಣ್ಣ ಹುಲಬನ್ನಿ, ಎಪಿಎಂಸಿ ಸದಸ್ಯರಾದ ವಿ.ಎಚ್. ದೇಸಾಯಿಗೌಡ್ರ, ಎಸ್.ಎ. ಉಮಚಗಿ ಉಪಸ್ಥಿತರಿದ್ದರು.
ಮುಂಡರಗಿ: ಪಟ್ಟಣದ ಎಪಿಎಂಸಿಯಲ್ಲಿ ವ್ಯಾಪಾರ ವಹಿವಾಟಿನ ಸಂಪೂರ್ಣ ಶುಲ್ಕ ತೆಗೆದು ಹಾಕಬೇಕೆಂದು ಆಗ್ರಹಿಸಿ ವ್ಯಾಪಾರಸ್ಥರ ಸಂಘದ ವತಿಯಿಂದ ಜು.27ರಂದು ಸೋಮವಾರದಿಂದ ಅನಿರ್ದಿಷ್ಟಾವಧಿ ಅವಧಿವರೆಗೆ ವ್ಯಾಪಾರ ವಹಿವಾಟು ಬಂದ್ ಮಾಡಲಾಗುವುದು ಎಂದು ಎಪಿಎಂಸಿ ವರ್ತಕರ ಸಂಘದ ಕಾರ್ಯದರ್ಶಿ ವೆಂಕಟೇಶ ಹೆಗ್ಗಡಾಳ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹುಬ್ಬಳ್ಳಿಯ ಚೇಂಬರ್ ಆಫ್ ಕಾಮರ್ಸ್ ದಲ್ಲಿ ನಡೆದ ಸಭೆಯಲ್ಲಿ ತೀರ್ಮಾನಿಸಿದಂತೆ ಈ ಅನಿರ್ದಿಷ್ಟಾವಧಿ ಬಂದ್ ಮಾಡಲಾಗುತ್ತಿದೆ. ಆದ್ದರಿಂದ ರೈತ ಬಾಂಧವರು ಸಹಕರಿಸಲು ಕೋರಿದ್ದಾರೆ.