Advertisement

ರಾಗಿ ಖರಿದಿ ನೋಂದಣಿಗೆ ನೂಕುನುಗ್ಗಲು: ರಾತ್ರಿಯಿಡೀ APMC ಕೇಂದ್ರದಲ್ಲಿ ಠಿಕಾಣಿ ಹೂಡಿದ ರೈತರು

10:42 PM Apr 26, 2022 | Team Udayavani |

ಹುಣಸೂರು : ಸರಕಾರ ಬೆಂಬಲಬೆಲೆ ಯೋಜನೆಯಡಿ ರಾಗಿ ಖರೀದಿಗೆ ನೊಂದಾಯಿಸಲು ಎಪಿಎಂಸಿಯ ಖರೀದಿ ಕೇಂದ್ರದ ಬಳಿ ಸಾವಿರಾರು ಮಂದಿ ರೈತರು ಜಮಾಯಿಸಿದ್ದರು. ಆದರೆ ಸರ್ವರ್ ಸಮಸ್ಯೆಯಿಂದಾಗಿ ನೊಂದಾಯಿಸಲಾಗದೇ ರಾಗಿಬೆಳೆಗಾರರು ಆಕ್ರೋಶಗೊಂಡು ಖರೀದಿ ಕೇಂದ್ರದ ಅಧಿಕಾರಿಗಳನ್ನು ತರಾಟೆಗೊಳಪಡಿಸಿದರು. ಈ ವೇಳೆ ಸ್ಥಳಕ್ಕಾಗಮಿಸಿದ ಪೊಲೀಸರು ರೈತರ ಮನವೊಲಿಸುವ ವ್ಯರ್ಥ ಪ್ರಯತ್ನ ನಡೆಸಿದರು.

Advertisement

ತರಾಟೆ:
ಸರಕಾರ ಏ.25 ರಿಂದ ರಾಗಿ ಖರೀದಿಸಲಾಗುವುದೆಂಬ ಆದೇಶದ ಹಿನ್ನಲೆಯಲ್ಲಿ ನೋಂದಾಯಿಸಲು ಎಪಿಎಂಸಿ ಖರೀದಿ ಕೇಂದ್ರದ ಬಳಿ ಸಾವಿರಾರು ರೈತರು ಏ. 24ರಿಂದ ರಾತ್ರಿಯಿಂದಲೇ ಬೀಡುಬಿಟ್ಟಿದ್ದರು. ಆದರೆ ಸರ್ವರ್ ಸಮಸ್ಯೆಯಿಂದ ಎರಡು ದಿನ ಕಳೆದರೂ ನೊಂದಾಯಿಸಲಾಗದೇ ಸ್ಥಳದಲ್ಲಿ ಜಮಾಯಿಸಿದ್ದ ಸಾವಿರಾರು ರೈತರು ಆಕ್ರೋಶಿತರಾಗಿ ಅಧಿಕಾರಿಗಳ ವಿರುದ್ದ ಹರಿಹಾಯ್ದರು. ನೊಂದಾವಣೆಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ತಾಕೀತುಮಾಡಿ ಪ್ರತಿಭಟಿಸುವ ಎಚ್ಚರಿಕೆ ನೀಡಿದರು.

ಮತ್ತೊಂದು ಕೌಂಟರ್ ಗೆ ಮುಖಂಡರ ಮನವಿ:
ನಂತರ ಮಂಗಳವಾರ ಮಧ್ಯಾಹ್ನದ ಹೊತ್ತಿಗೆ ಸರ್ವರ್ ಸಮಸ್ಯೆ ನಿವಾರಣೆಗೊಂಡು ನೋಂದಣಿ ಪ್ರಾರಂಭಮಾಡಿದ್ದರೂ ಒಂದೇ ಕೌಂಟರ್ ತೆರೆದಿದ್ದರಿಂದಾಗಿ ಮತ್ತೆ ಆಕ್ರೋಶಿತರಾದ ರೈತರು ಅಧಿಕಾರಿಗಳ ವಿರುದ್ದ ಏರುಧ್ವನಿಯಲ್ಲೇ ತರಾಟೆಗೆ ತೆಗೆದುಕೊಂಡರು, ಕಾರ್ಯ ನಿಮಿತ್ತ ಹೊರಗಿರುವ ಶಾಸಕ ಎಚ್.ಪಿ.ಮಂಜುನಾಥರಿಗೆ ರೈತ ಮುಖಂಡರು ಫೋನಾಯಿಸಿ ಇಲ್ಲಿನ ಅವ್ಯವಸ್ಥೆ ತಿಳಿಸಿ, ಹೆಚ್ಚುವರಿ ಕೌಂಟರ್ ತೆರೆಯಲು ಸೂಚಿಸಬೇಕೆಂದು ಮನವಿ ಮಾಡಿದರು.

ಮತ್ತೊಂದು ಕೌಂಟರ್: ಅಧಿಕಾರಿಗಳಿಗೆ ಮತ್ತೊಂದು ಕೌಂಟರ್ ತೆರೆದು ರೈತರ ನೆರವಿಗೆ ಬರಬೇಕೆಂಬ ಶಾಸಕರ ಸೂಚನೆ ಮೇರೆಗೆ ಮತ್ತೊಂದು ಕೌಂಟರ್ ತೆರೆದಿದ್ದರಿಂದ ರೈತರು ಸಮಾಧಾನಗೊಂಡರಾದರೂ ನೂಕುನುಗ್ಗಲು ಉಂಟಾಗಿತ್ತು. ಸಂಜೆ 8 ರವರೆಗೆ ನೊಂದಾವಣೆಯಾಯಿತು.

ರಾತ್ರಿ ಇಡೀ ಠಿಕಾಣಿ: ರಾತ್ರಿಯಾದರೂ ನೂರಾರು ರೈತರು ನೋಂದಣಿ ಕೇಂದ್ರದ ಮುಂದೆ ಸರತಿ ಸಾಲಿನಲ್ಲಿ ನಿಂತಿದ್ದು, ಸರತಿ ಸಾಲು ಬಿಟ್ಟು ಹೋಗುವುದೆಂಬ ಭಯದಿಂದ ರಾತ್ರಿಯಿಡಿ ಅಲ್ಲೆ ಠಿಕಾಣಿ ಹೂಡಿದ್ದಾರೆ. ಮುನ್ನೆಚ್ಚರಿಕೆಯಾಗಿ ಸ್ಥಳದಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ.

Advertisement

ಈ ವೇಳೆ ರೈತ ಮುಖಂಡರಾದ ಕೃಷ್ಣನಾಯಕ, ರಾಮೇಗೌಡ, ವೆಂಕಟೇಶ್, ಹೆಚ್.ಆರ್.ಜಗದೀಶ್, ಕಾವೇರಪ್ಪ, ಕಿರಣ್ ಸೇರಿದಂತೆ ಸಾವಿರಾರು ಮಂದಿ ರೈತರು ಇದ್ದರು ಪೊಲೀಸ್ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next