Advertisement

APMC ಮಸೂದೆ: ಮೇಲ್ಮನೆ ಹಿನ್ನಡೆ

12:23 AM Jul 19, 2023 | Team Udayavani |

ಬೆಂಗಳೂರು: ಒಂದು ದಿನದ ಹಿಂದಷ್ಟೇ ಅಂಗೀಕಾರಗೊಂಡಿದ್ದ ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ (ನಿಯಂತ್ರಣ ಮತ್ತು ಅಭಿವೃದ್ಧಿ) (ತಿದ್ದುಪಡಿ) ಮಸೂದೆ-2023ಕ್ಕೆ ಮೇಲ್ಮನೆಯ ಅಂಗೀಕಾರ ಪಡೆಯುವಲ್ಲಿ ರಾಜ್ಯ ಸರಕಾರ ವಿಫ‌ಲವಾಗಿದೆ. ಅದು ಮಂಡಿಸಿದ ಮಸೂದೆಯ ವಿರುದ್ಧ ಬಿಜೆಪಿ ಮತ್ತು ಜೆಡಿಎಸ್‌ ಒಟ್ಟಾಗಿ ಮತ ಚಲಾಯಿಸಿವೆ. ಕೊನೆಗೆ ಇದನ್ನು ಶಾಸನ ಪರಿಶೀಲನ ಸಮಿತಿಗೆ ಒಪ್ಪಿಸಲು ತೀರ್ಮಾನಿಸಲಾಗಿದೆ.

Advertisement

ಮಂಗಳವಾರ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ್‌ ಮಸೂದೆಗೆ ಅಂಗೀಕಾರ ನೀಡುವಂತೆ ಪ್ರಸ್ತಾವನೆ ಸಲ್ಲಿಸಿದರು. ಈ ಸಂಬಂಧ ಸುದೀರ್ಘ‌ ಚರ್ಚೆ ನಡೆಯಿತು. ಮಸೂದೆಯನ್ನು ವಾಪಸ್‌ ಪಡೆಯದಿದ್ದರೆ ಅದನ್ನು ಶಾಸನ ಪರಿಶೀಲನ ಸಮಿತಿಗೆ ಒಪ್ಪಿಸಬೇಕು ಎಂಬ ಪ್ರಸ್ತಾವವನ್ನು ವಿಪಕ್ಷ ಬಿಜೆಪಿ ಸದಸ್ಯರು ಮುಂದಿಟ್ಟರು. ಇದನ್ನು ಆಡಳಿತ ಪಕ್ಷದ ಸದಸ್ಯರು ಸಾರಾಸಗಟಾಗಿ ತಳ್ಳಿಹಾಕಿದರು. ಆಗ ಸಭಾಪತಿ ಬಸವರಾಜ ಹೊರಟ್ಟಿ ಪ್ರಸ್ತಾವವನ್ನು ಮತಕ್ಕೆ ಹಾಕಿದರು.

ಈ ಸಂದರ್ಭದಲ್ಲಿ ಮರಿತಿಬ್ಬೇಗೌಡ ಅವರನ್ನು ಹೊರತುಪಡಿಸಿ ಜೆಡಿಎಸ್‌ನ ಸದಸ್ಯರೆಲ್ಲ ಬಿಜೆಪಿ ಬೆಂಬಲಕ್ಕೆ ನಿಂತರು. ಪ್ರಸ್ತಾವದ ಪರವಾಗಿ 31 ಮತಗಳು ಬಂದರೆ, ವಿರುದ್ಧವಾಗಿ 21 ಮತಗಳು ಬಂದವು. ಇದರಂತೆ ಪರಿಶೀಲನ ಸಮಿತಿ ರಚನೆ ಆಗಲಿದೆ.

ಹಾಲಿ ಕಾಯ್ದೆ ಮಾರಕ

ಮತಕ್ಕೆ ಹಾಕುವ ಮುನ್ನ ಮಾತನಾಡಿದ ಸಚಿವ ಶಿವಾನಂದ ಪಾಟೀಲ್‌, ಹಿಂದಿನ ಅವಧಿಯಲ್ಲಿ ಜಾರಿಗೆ ತರಲಾದ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ (ನಿಯಂತ್ರಣ ಮತ್ತು ಅಭಿವೃದ್ಧಿ) ಕಾಯ್ದೆಯು ರೈತರಿಗೆ ಮಾರಕವಾಗಿದೆ. ಆದ್ದರಿಂದ ಪ್ರಸ್ತಾವವನ್ನು ಅಂಗೀಕರಿಸುವಂತೆ ಮನವಿ ಮಾಡಿದರು.

Advertisement

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಬಿಜೆಪಿಯ ಕೋಟ ಶ್ರೀನಿವಾಸ ಪೂಜಾರಿ, ಮಸೂದೆ ಬಗ್ಗೆ ಹೆಚ್ಚು ವಿರೋಧಗಳು ವ್ಯಕ್ತವಾದ ಹಿನ್ನೆಲೆಯಲ್ಲಿ ಪರಿಶೀಲನ ಸಮಿತಿಗೆ ಒಪ್ಪಿಸುವುದು ಸೂಕ್ತ ಎಂದರು.

ಜೆಡಿಎಸ್‌: ಆಗೊಂದು ಈಗೊಂದು ನಿಲುವೇಕೆ?

ಮಸೂದೆಯ ಬಗ್ಗೆ ಅಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಆದಿಯಾಗಿ ಜೆಡಿಎಸ್‌ ಸದಸ್ಯರ ಮಾತುಗಳು ಬೇರೆ ಇದ್ದವು, ಈಗ ತದ್ವಿರುದ್ಧವಾಗಿವೆ. ಆಗೊಂದು ನಿಲುವು, ಈಗೊಂದು ನಿಲುವು ಯಾಕೆ ಎಂದು ಸಚಿವ ಶಿವಾನಂದ ಪಾಟೀಲ್‌ ಟೀಕಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next