Advertisement

ಅ. 25ರಂದು ಎಪಿಎಂಸಿ ಬಂದ್‌

09:43 AM Oct 10, 2021 | Team Udayavani |

ಕಲಬುರಗಿ: ನಗರದ ಎಪಿಎಂಸಿ ಪ್ರಾಂಗಣದ ಜ್ವಲಂತ ಸಮಸ್ಯೆಗಳನ್ನು ಬಗೆಹರಿಸಬೇಕು ಮತ್ತು ವ್ಯಾಪಾರ ವಾಹಿವಾಟಿಗೆ ಅನುಕೂಲ ಮಾಡಿಕೊಡಬೇಕೆಂದು ಒತ್ತಾಯಿಸಿ ಅ.25ರಂದು ಆಹಾರ ಧ್ಯಾನ ಮತ್ತು ಬೀಜ ವ್ಯಾಪಾರಿಗಳ ಸಂಘದ ನೇತೃತ್ವದಲ್ಲಿ ಎಪಿಎಂಸಿ ಬಂದ್‌ ಮಾಡಿ ಪ್ರತಿಭಟನೆ ನಡೆಸಲು ತೀರ್ಮಾನಿಸಲಾಗಿದೆ. ಎಪಿಎಂಸಿ ಪ್ರಾಂಗಣವನ್ನು ಎಪಿಎಂಸಿಯೇತರ ಕೆಲಸ ಕಾರ್ಯಗಳಿಗೆ ಬಳಕೆ ಮಾಡಲಾಗುತ್ತಿದೆ. ಇದರಿಂದ ವಾಹನ ಸಂಚಾರ ದಟ್ಟಣೆ ಹೆಚ್ಚಾಗುತ್ತಿದೆ. ಹೀಗಾಗಿ ರೈತರು ಮತ್ತು ಅವರ ವಾಹನ ಓಡಾಟಕ್ಕೆ ತೊಂದರೆ ಅನುಭವಿಸುವಂತೆ ಆಗಿದೆ. ಜತೆಗೆ ಪ್ರಾಂಗಣದ ವ್ಯಾಪಾರ ವಹಿವಾಟಿನ ಮೇಲೂ ದುಷ್ಪರಿಣಾಮ ಬೀರುತ್ತಿದೆ ಎಂದು ಸಂಘದ ಅಧ್ಯಕ್ಷ ಶ್ರೀಮಂತ ಉದನೂರ, ಗೌರವ ಕಾರ್ಯದರ್ಶಿ ಸಂತೋಷ ಲಂಗರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಎಪಿಎಂಸಿ ಪ್ರಾಂಗಣದಲ್ಲಿ ಅನಧಿಕೃತ ವಾಹನಗಳ ಸಂಚಾರ ನಿಲ್ಲಿಸಬೇಕು. ಸ್ವಚ್ಛತೆಗೆ ಆದ್ಯತೆ ಕೊಡಬೇಕು. ಸಾರ್ವಜನಿಕ ಕುಡಿಯುವ ನೀರಿನ ವ್ಯವಸ್ಥೆಯೊಂದಿಗೆ ಮೂಲಭೂತ ಸೌಕರ್ಯ ಕಲ್ಪಿಸಬೇಕು. ಅಲ್ಲದೇ, ಪ್ರಾಂಗಣದಲ್ಲಿ ಕಳ್ಳತನ, ದರೋಡೆ, ಜೂಟಾಟ ಸೇರಿದಂತೆ ಅನೇಕ ಅಕ್ರಮ ಚಟುವಟಿಕೆಗಳು ನಡೆಯುತ್ತಿದ್ದು, ಕಾನೂನು-ಸುವ್ಯವಸ್ಥೆ ಭದ್ರಪಡಿಸಬೇಕು. ರಾತ್ರಿ ವೇಳೆ ಪೊಲೀಸ್‌ ಗಸ್ತು ವ್ಯವಸ್ಥೆಯನ್ನು ನಿರಂತರವಾಗಿ ನಡೆಸಬೇಕೆಂದು ಒತ್ತಾಯಿಸಿ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದ್ದಾರೆ. ಅ.25ರೊಳಗೆ ಯಾವುದಾದರೂ ಕ್ರಮ ತೆಗೆದುಕೊಂಡು ಎಪಿಎಂಸಿ ಪ್ರಾಗಂಣದಲ್ಲಿ ವ್ಯಾಪಾರ ವಹಿವಾಟಿಗೆ ಉತ್ತಮ ಅನುಕೂಲ ಮಾಡಿಕೊಡಬೇಕು. ಇಲ್ಲವಾದಲ್ಲಿ ಅಂದು ಎಪಿಎಂಸಿ ಮುಖ್ಯದ್ವಾರ ಮುಚ್ಚಿ, ವ್ಯಾಪಾರ ವಹಿವಾಟು ಸ್ಥಗಿತಗೊಳಿಸಿ ಬೀದಿಗಿಳಿದು ಹೋರಾಟ ಮಾಡಲಾಗುತ್ತದೆ ಎಂದು ಸಚಿವರಾದ ಎಸ್‌.ಟಿ.ಸೋಮಶೇಖರ, ಮುರುಗೇಶ ನಿರಾಣಿ, ಎಂಪಿಎಂಸಿ ನಿರ್ದೇಶಕರು, ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು ಎಚ್ಚರಿಸಲಾಗಿದೆ.

Advertisement

 

Advertisement

Udayavani is now on Telegram. Click here to join our channel and stay updated with the latest news.

Next