Advertisement

ಕಾಂಗ್ರೆಸ್‌ ಸಂಕಲ್ಪ ಸತ್ಯಾಗ್ರಹ: ರಾಹುಲ್‌ ಅನರ್ಹತೆ ವಿರುದ್ಧ ದೇಶಾದ್ಯಂತ ಪ್ರತಿಭಟನೆ

11:52 PM Mar 26, 2023 | Team Udayavani |

ಹೊಸದಿಲ್ಲಿ: ಲೋಕಸಭೆಯಿಂದ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರನ್ನು ಅನರ್ಹಗೊಳಿಸಿರುವುದನ್ನು ಖಂಡಿಸಿ ದೇಶಾದ್ಯಂತ ಕಾಂಗ್ರೆಸ್‌ ಕಾರ್ಯಕರ್ತರು ಬೀದಿಗಿಳಿದಿದ್ದಾರೆ.

Advertisement

ರವಿವಾರ ಬಹುತೇಕ ಎಲ್ಲ ರಾಜ್ಯಗಳಲ್ಲೂ ಕಾಂಗ್ರೆಸ್‌ ನಾಯಕರು ಹಾಗೂ ಕಾರ್ಯ ಕರ್ತರು “ಸಂಕಲ್ಪ ಸತ್ಯಾಗ್ರಹ’ ಹಮ್ಮಿಕೊಂಡು, ಆಡಳಿತಾರೂಢ ಬಿಜೆಪಿ ಸರಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಕೆಲವು ರಾಜ್ಯಗಳಲ್ಲಿ ಇತರ ವಿಪಕ್ಷಗಳು ಕೂಡ ಈ ಹೋರಾಟಕ್ಕೆ ಬೆಂಬಲ ಸೂಚಿಸಿ, ಪ್ರತಿಭಟನೆಯಲ್ಲಿ ಪಾಲ್ಗೊಂಡಿವೆ.

ರಾಷ್ಟ್ರ ರಾಜಧಾನಿ ಹೊಸದಿಲ್ಲಿಯಲ್ಲಿ ಮಹಾತ್ಮಾ ಗಾಂಧಿ ಸ್ಮಾರಕವಿರುವ ರಾಜ್‌ಘಾಟ್‌ನ ಹೊರಗೆ ವೇದಿಕೆ ನಿರ್ಮಿಸಿ, ಅಲ್ಲೇ ಕಾಂಗ್ರೆಸ್‌ ಪ್ರತಿ ಭಟನ ಕಾರ್ಯ ಕ್ರಮ ಹಮ್ಮಿ ಕೊಂಡಿತ್ತು. ಇಲ್ಲಿ ಮಾತನಾಡಿದ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ವಾದ್ರಾ, “ದೇಶದ ಏಕತೆಗಾಗಿ ಸಾವಿರಾರು ಕಿ.ಮೀ. ಪಾದಯಾತ್ರೆ ನಡೆಸಿದ, ಹುತಾತ್ಮರಾದ ಪ್ರಧಾನಮಂತ್ರಿ (ರಾಜೀವ್‌ಗಾಂಧಿ)ಯೊಬ್ಬರ ಪುತ್ರ (ರಾಹುಲ್‌)ನೊಬ್ಬ ಯಾವತ್ತೂ ದೇಶ ವನ್ನು ಅವಮಾನಿಸಲಾರ. ನನ್ನ ಕುಟುಂಬದ ನೆತ್ತರು ಈ ದೇಶದ ಪ್ರಜಾಪ್ರಭುತ್ವವನ್ನು ಪೋಷಿಸಿದೆ. ನಮ್ಮ ದೇಶದ ಪ್ರಜಾಸತ್ತೆಯ ಉಳಿವಿಗಾಗಿ ನಾವು ಏನು ಮಾಡಲೂ ಸಿದ್ಧರಿದ್ದೇವೆ. ನಮ್ಮನ್ನು ಹೆದರಿಸಬಹುದು ಎಂದು ಅವರು ಭಾವಿಸಿದ್ದರೆ, ಅದು ಅವರ ಮೂರ್ಖತನ’ ಎಂದು ಗುಡುಗಿದ್ದಾರೆ.

ಟ್ವಿಟರ್‌ ಪ್ರೊಫೈಲ್‌ ಬದಲು: ಇದೇ ವೇಳೆ, ಅನರ್ಹತೆ ಬೆನ್ನಲ್ಲೇ ರವಿವಾರ ರಾಹುಲ್‌ಗಾಂಧಿ ತಮ್ಮ ಟ್ವಿಟರ್‌ನ ಪ್ರೊಫೈಲ್‌ ಅನ್ನು “ಡಿಸ್‌ಕ್ವಾಲಿಫೈಡ್‌ ಎಂಪಿ’ (ಅನರ್ಹನಾದ ಸಂಸದ) ಎಂದು ಬದಲಾ ಯಿಸಿಕೊಂಡಿದ್ದಾರೆ.

ಪ್ರಿಯಾಂಕಾ ವಾದ್ರಾ ಹೇಳಿದ್ದೇನು?
-ನೀವು (ಬಿಜೆಪಿ) ನನ್ನ ಸಹೋದರನನ್ನು, ಹುತಾತ್ಮ ವ್ಯಕ್ತಿಯ ಪುತ್ರನನ್ನು ದೇಶದ್ರೋಹಿ ಎಂದು ಕರೆಯುತ್ತೀರಿ, ಮೀರ್‌ ಜಾಫ‌ರ್‌ ಎಂದು ಸಂಬೋಧಿಸುತ್ತೀರಿ. ನೀವು ನನ್ನ ತಾಯಿಯನ್ನು ಅವಮಾನಿಸುತ್ತೀರಿ. ಆದರೂ ನಾವು ಸುಮ್ಮನಿದ್ದೇವೆ.

Advertisement

-ನಿಮ್ಮ ಮುಖ್ಯಮಂತ್ರಿಯೊಬ್ಬರು, “ರಾಹುಲ್‌ಗೆ ತನ್ನ ತಾಯಿ ಯಾರೆಂದೇ ಗೊತ್ತಿಲ್ಲ’ ಎಂದು ಹೇಳುತ್ತಾರೆ. ನೀವು ಪ್ರತೀ ದಿನ ನನ್ನ ಕುಟುಂಬವನ್ನು ಅವಮಾನಿಸುತ್ತೀರಿ.

-ಆಕ್ಸ್‌ಫ‌ರ್ಡ್‌, ಕೇಂಬ್ರಿಡ್ಜ್ನಂಥ ಜಗತ್ತಿನ ಪ್ರತಿಷ್ಠಿತ ವಿ.ವಿ.ಯಲ್ಲಿ ವ್ಯಾಸಂಗ ಮಾಡಿ ಬಂದಿರುವ ರಾಹುಲ್‌ರನ್ನು ನೀವು “ಪಪ್ಪು’ ಎಂದು ಕರೆಯುತ್ತೀರಿ.

-ನಿಮ್ಮ ಪ್ರಧಾನಮಂತ್ರಿಗಳು ಸಂಸತ್‌ನೊಳಗೆ, “ನಿಮ್ಮ ಕುಟುಂಬ ನೆಹರೂ ಸರ್‌ನೆàಮ್‌ ಅನ್ನು ಏಕೆ ಬಳಸಿಕೊಳ್ಳುತ್ತಿಲ್ಲ’ ಎಂದು ಪ್ರಶ್ನಿಸುತ್ತಾರೆ. ಅವರು ಕಾಶ್ಮೀರಿ ಪಂಡಿತರ ಇಡೀ ಸಮುದಾಯವನ್ನೇ ಅವಮಾನಿಸಿದ್ದಾರೆ.

-ಇಷ್ಟೆಲ್ಲ ಆಗುತ್ತಿದ್ದರೂ ನಿಮ್ಮನ್ನೇಕೆ ಯಾರೂ ಅನರ್ಹಗೊಳಿಸಿಲ್ಲ?

-ಒಬ್ಬ ವ್ಯಕ್ತಿ(ಅದಾನಿ)ಯನ್ನು ರಕ್ಷಿಸಲು ಅಧಿಕಾರದ ಹಿಂದೆ ಅಡಗಿರುವ ಈ ದೇಶದ ಪ್ರಧಾನಿ ಒಬ್ಬ ಹೇಡಿ.

ನೀರವ್‌ ಮೋದಿ, ಲಲಿತ್‌ ಮೋದಿಯಂಥ ದೇಶಭ್ರಷ್ಟ ರನ್ನು ಟೀಕಿಸಿದೊಡನೆ ಬಿಜೆಪಿಗೆ ಅಷ್ಟೊಂದು ನೋವಾಗುವುದೇಕೆ? ಬಿಜೆಪಿಯವರು ಈಗ “ಒಬಿಸಿ’ ಬಗ್ಗೆ ಮಾತಾಡುತ್ತಿದ್ದಾರೆ. ನೀರವ್‌, ಲಲಿತ್‌ ಒಬಿಸಿಗೆ ಸೇರಿದವರಾ? ಜನರ ಹಣದೊಂದಿಗೆ ಪರಾರಿಯಾದವರು.
-ಮಲ್ಲಿಕಾರ್ಜುನ ಖರ್ಗೆ, ಎಐಸಿಸಿ ಅಧ್ಯಕ್ಷ

ಗಾಂಧೀಜಿಗೆ ಅವಮಾನ: ಬಿಜೆಪಿ
ಕಾಂಗ್ರೆಸ್‌ ನಡೆಸುತ್ತಿರುವುದು ಸತ್ಯಾಗ್ರಹವಲ್ಲ, ದೇಶದ ಸಂವಿಧಾನ ಮತ್ತು ಕೋರ್ಟ್‌ ತೀರ್ಪಿನ ವಿರುದ್ಧ ಅಭಿಯಾನ ಎಂದು ಬಿಜೆಪಿ ಕೆಂಡಕಾರಿದೆ. ರವಿವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಬಿಜೆಪಿ ವಕ್ತಾರ ಸುಧಾಂಶು ತ್ರಿವೇದಿ, “ಕಾಂಗ್ರೆಸ್‌ನ ಸತ್ಯಾಗ್ರಹವು ಮಹಾತ್ಮಾ ಗಾಂಧೀಜಿಗೆ ಮಾಡು ತ್ತಿರುವ ಅವಮಾನವಾಗಿದೆ. ಏಕೆಂದರೆ ರಾಷ್ಟ್ರಪಿತನು ಸಾಮಾಜಿಕ ಕಾರಣಗಳಿಗಾಗಿ ಸತ್ಯಾಗ್ರಹ ಮಾಡಿದ್ದರು. ಆದರೆ ಕಾಂಗ್ರೆಸ್‌ ವೈಯಕ್ತಿಕ ಕಾರಣಗಳಿಗಾಗಿ ಮಾಡುತ್ತಿದೆ. ಕಾಂಗ್ರೆಸ್‌ನ ಸಂಕಲ್ಪ ಸತ್ಯಾಗ್ರಹಕ್ಕೂ ಸತ್ಯಕ್ಕಾಗಿ ನಡೆದ ಹೋರಾಟಕ್ಕೂ ಸಂಬಂಧವೇ ಇಲ್ಲ’ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next