Advertisement
ಅಮ್ಮ ಮಕ್ಕಳನ್ನು ಹೆಚ್ಚು ಮುದ್ದಿಸುತ್ತಾಳೆ ಎಂದು ಕೆಲವರು ಹೇಳುವುದುಂಟು. ಆದರೆ ಅಪ್ಪ ಯಾರಿಗೂ ಕಮ್ಮಿಯಿಲ್ಲ. ಅದರಲ್ಲೂ ಹುಡುಗಿಯರಿಗಂತೂ ಅಪ್ಪ ಅಂದ್ರೆ ಎಲ್ಲದಕ್ಕಿಂತಲೂ ಮಿಗಿಲು. ಅದಾಗ ನಾನು ಸಣ್ಣ ಹುಡುಗಿ. ಸುಮಾರು 9 ವರ್ಷವಿರಬೇಕು. ನಮ್ಮ ಪುಟ್ಟ ಮನೆಯಲ್ಲಿ ಇದ್ದದ್ದು ನಾನು ಅಪ್ಪ, ಅಮ್ಮ ಮತ್ತು ಅಣ್ಣ. ಮಳೆಗಾಲದ ಸಂದರ್ಭವದು. ವಿದ್ಯುತ್ ಸಮಸ್ಯೆ ಜಾಸ್ತಿಯಾಗಿಯೇ ಇತ್ತು. ಬಚ್ಚಲ ಮನೆ ತುಂಬಾ ದೂರವಿತ್ತು. ಕರೆಂಟ್ ಹೋಗಿದ್ದ ಕಾರಣ ಅಪ್ಪ ಸೀಮೆಎಣ್ಣೆ ದೀಪವನ್ನು ಉರಿಸಿ ಗಾಳಿಗೆ ಆರದಂತೆ ಒಂದು ಕೈಯಲ್ಲಿ ದೀಪವನ್ನು ಹಿಡಿದುಕೊಂಡು ಕಂಕುಳಲ್ಲಿ ನನ್ನನ್ನು ಕೂರಿಸಿಕೊಂಡು ಅಷ್ಟು ದೂರ ಸಾಗಿ ಸ್ನಾನ ಮಾಡಿಸಿ ಕರೆದುಕೊಂಡು ಬರುತ್ತಿದ್ದ ದಿನ ಈಗಲೂ ನನಗೆ ಚೆನ್ನಾಗಿ ನೆನಪಿದೆ.
Related Articles
Advertisement
ಮುಂದಿನ ವಿದ್ಯಾಭ್ಯಾಸಕ್ಕೆ ನಾನು ಇಷ್ಟಪಟ್ಟ ಕಾಲೇಜಿಗೆ ನನ್ನನ್ನು ಸೇರಿಸಿ, ಫೀಸಿಗೆ ಎಷ್ಟೇ ಖರ್ಚಾದರೂ ಅದನ್ನು ಭರ್ತಿ ಮಾಡಿ, ಕೊನೆಗೆ “ಖರ್ಚಿಗೆ ಇಟ್ಟುಕೋ… ಬೇಕಾಗುತ್ತದೆ’ ಎಂದು ಹೇಳುವ ಅಪ್ಪ. ನೂರು ರುಪಾಯಿ ಕೇಳಿದಾಗ “ಅಷ್ಟು ಸಾಕಾ ಬೇರೆ ಏನಕ್ಕಾದ್ರೂ ಬೇಕಾಗುತ್ತದೆ’ ಎಂದು ಹೇಳಿ ಇನ್ನೂ ಸ್ವಲ್ಪ ದುಡ್ಡನ್ನು ಕೈಗೆ ಇಡುತ್ತಿದ್ದರು. ತಾನು ನಡೆದರೂ ಪರಾÌಗಿಲ್ಲ. ಮಕ್ಕಳು ಚೆನ್ನಾಗಿರಬೇಕು ಎಂಬ ಮನೋಭಾವನೆ. ಮಕ್ಕಳಿಗಾಗಿಯೇ ಅಪ್ಪ ಹುಟ್ಟಿದ್ದಾರೆಯೇ ಎಂದೊಮ್ಮೆ ಅನ್ನಿಸುತ್ತಿತ್ತು. ಈ ಪ್ರಪಂಚದಲ್ಲಿ ಎಲ್ಲಾ ಕಷ್ಟವನ್ನು ಆ ದೇವರು ನನ್ನ ಅಪ್ಪನಿಗೆ ಯಾಕೆ ನೀಡಿದ್ದಾನೆ ಎಂಬ ಪ್ರಶ್ನೆ ಈಗಲೂ ನನ್ನ ಮನಸ್ಸಿನಲ್ಲಿ ಹಾಗೆಯೇ ಕೊರೆಯುತ್ತಿದೆ. ಯಾರಿಗೂ ಕೆಡುಕು ಬಯಸಿದವರಲ್ಲ ನನ್ನಪ್ಪ. ಸಹೋದರರ ಕಷ್ಟದಲ್ಲೂ ಪಾಲು ತೆಗೆದುಕೊಂಡವರು. ಆದರೆ ಕೊನೆಗೆ ಅವರಿಗೆ ಸಿಕ್ಕಿದ್ದು ಏನು?
ಅಪ್ಪ ಕಂಡ ಕಷ್ಟ ಅಷ್ಟಿಷ್ಟಲ್ಲ. ಬಳಗದವರ ಚುಚ್ಚುಮಾತು, ಅಸಹ್ಯ ನಡೆ, ಮಾನಸಿಕ-ದೈಹಿಕ ನೋವು. ನೆನಪಿಸಿಕೊಂಡಾಗ ಕಣ್ಣಂಚಿನಲ್ಲಿ ನೀರು ಉಕ್ಕಿ ಬರುತ್ತದೆ. ನಾನೂ ನೋಡಲು ಅಪ್ಪನಂತೇ ಎಂದು ಹೆಚ್ಚಿನವರು ಹೇಳುವುದನ್ನು ನೋಡಿದ್ದೇನೆ. ಆಗ ನನಗೆ ಹೆಮ್ಮೆ ಎನಿಸುತ್ತದೆ. ಎಷ್ಟಾದರೂ ನಾನು ಅಪ್ಪನ ಮಗಳಲ್ಲವೇ? ಹಾಗೆಯೇ ಇರುತ್ತೇನೆ ಎಂದು ಅವರಿಗೆ ತಿರುಗಿಸಿ ಹೇಳಿದ್ದೂ ಇದೆ. ಆಗ ಅಪ್ಪನ ಮುಖದಲ್ಲೊಮ್ಮೆ ನಗು ನೋಡುತ್ತಿದ್ದಾ. ನನಗೂ ಅಷ್ಟೇ ಬೇಕಾದದ್ದು.
“ಅಪ್ಪಾ… ಐ ಲವ್ ಯೂ ಪಾ’ ಹಾಡು ಬಂದಾಗ ಅದೆಷ್ಟು ಬಾರಿ ಕೇಳಿದ್ದಾನೋ ಗೊತ್ತಿಲ್ಲ. “ಪುಷ್ಪಕ ವಿಮಾನ’ ಸಿನೆಮಾ ಬಂದಾಗಲಂತೂ ಮುಗಿಲು ಮುಟ್ಟುವ ತನಕ ಅತ್ತಿದ್ದೆ. ಸಿನೆಮಾ ಮಾಡಿದ ನಿರ್ದೇಶಕರಿಗೆ ಮನಸ್ಸಿನಲ್ಲೇ ನೂರು ಬಾರಿ ಥ್ಯಾಂಕ್ಸ್ ಹೇಳಿದ್ದೆ. ಅಪ್ಪನ ಬಗೆಗಿನ ಹಾಡು, ಸಿನೆಮಾ ಇಷ್ಟು ಚೆನ್ನಾಗಿ ಮಾಡಬಹುದೆಂದು ಕನಸಿನಲ್ಲೂ ಅಂದುಕೊಂಡಿರಲಿಲ್ಲ. ಅತ್ತಾಗ ಮುದ್ದಿಸೋ ಮಡಿಲು, ಹೊಡೆದರೂ, ಬೈದರೂ ಕೇಳಿಸಿಕೊಳ್ಳುವ ಮನಸ್ಸು. ಅಪ್ಪಾ ನಿನಗೆ ನೀನೇ ಸಾಟಿ. ನಿನ್ನಂಥ ಗೆಳೆಯ ಮತ್ತೂಬ್ಬ ಸಿಗಲು ಸಾಧ್ಯನೂ ಇಲ್ಲ. ಅಪ್ಪಾ ನೀನಂದ್ರೆ ನನಗಿಷ್ಟಪ್ಪಾ. ವೇದಾವತಿ ಗೌಡ ಎಸ್. ಡಿ. ಎಂ. ಕಾಲೇಜು ಮಂಗಳೂರು