Advertisement

“ಅಪನಗದೀಕರಣ’ಬಿಜೆಪಿ ಕುತ್ಸಿತ ರಾಜಕಾರಣ

12:50 PM Mar 01, 2017 | Team Udayavani |

ಮೈಸೂರು: ಪಂಚರಾಜ್ಯಗಳ ಚುನಾವಣೆಯಲ್ಲಿ ವಿರೋಧ ಪಕ್ಷಗಳನ್ನು ಹತ್ತಿಕ್ಕಲು ಹೆಚ್ಚು ಮೌಲ್ಯದ ನೋಟುಗಳ ಅಪನಗದೀಕರಣ ಮಾಡುವ ಮೂಲಕ ಬಿಜೆಪಿ ಕುತ್ಸಿತ ರಾಜಕಾರಣ ಮಾಡಿದೆ ಎಂದು ಲೋಕೋಪಯೋಗಿ ಸಚಿವ ಡಾ. ಎಚ್‌.ಸಿ. ಮಹದೇವಪ್ಪ ಟೀಕಿಸಿದರು. ಮೈಸೂರು ನಗರ ಜಿಲ್ಲಾ ಕಾಂಗ್ರೆಸ್‌ ಸಮಿತಿ ವತಿಯಿಂದ ಮಂಗಳವಾರ ನಗರದಲ್ಲಿ ಏರ್ಪಡಿಸಿದ್ದ ಜನವೇದನಾ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

Advertisement

ಬಿಜೆಪಿಯು ಪಂಚರಾಜ್ಯ ಚುನಾವಣೆಗೆ ಬೇಕಾದ ಸಿದ್ಧತೆಯನ್ನು ಮೊದಲೇ ಮಾಡಿಕೊಂಡು ನಂತರ ಅಪನಗದೀಕರಣ ಮಾಡಲಾಯಿತು. ಇದು ವಿರೋಧ ಪಕ್ಷಗಳನ್ನು ಹಣಿಯುವ ಉದ್ದೇಶವನ್ನು ಹೊಂದಿತ್ತು. ಯಾವುದೇ ಸಿದ್ಧತೆಯನ್ನೂ ಮಾಡಿಕೊಳ್ಳದೆ, ಆರ್‌ಬಿಐ ಅಭಿಪ್ರಾಯವನ್ನೂ ಕೇಳದೆ ಪ್ರಧಾನಿ ನರೇಂದ್ರ ಮೋದಿಯವರು ಏಕಮುಖವಾಗಿ ತೆಗೆದುಕೊಂಡ ಅಪನಗದೀಕರಣದ ತೀರ್ಮಾನದಿಂದ ದೇಶದ ಅರ್ಥ ವ್ಯವಸ್ಥೆ ಕುಸಿದಿದ್ದು, ಅಭಿವೃದ್ಧಿಗೆ ಮಾರಕ ವಾಗಿದೆ.

ಜನವಿರೋಧಿಯಾದ ಈ ತೀರ್ಮಾನದಿಂದ ಅಭಿವೃದ್ಧಿಗೆ ಅಡ್ಡಗಾಲಾಗಿದ್ದು, ದೇಶದಲ್ಲಿ ಶೇ.35ರಷ್ಟು ಉದ್ಯೋಗ ಬಿದ್ದು ಹೋಗಿದೆ. ಕೈಗಾರಿಕೆಗಳು ಬೀಗ ಹಾಕುತ್ತಿದ್ದರೆ, ನಿರ್ಮಾಣ ಕಾಮಗಾರಿಗಳು ಸ್ಥಗಿತಗೊಂಡಿವೆ ಎಂದರು. ಈ ಹಿಂದೆಯೂ ಎರಡು ಬಾರಿ ದೇಶದಲ್ಲಿ ನೋಟುಗಳ ಅಪನಗದೀಕರಣ ಮಾಡಲಾಗಿದೆ. ಅವು ಹೀಗೆ ಜನವಿರೋಧಿ ಪರಿಣಾಮ ಬೀರಿರಲಿಲ್ಲ. ಅಪನಗದೀಕರಣ ಮಾಡಬೇಕಾದರೆ ದೇಶದ ಅರ್ಥವ್ಯವಸ್ಥೆ, ತಲಾ ಆದಾಯ, ಜಿಡಿಪಿ ಬೆಳವಣಿಗೆ ಕುಂಠಿತಗೊಳ್ಳದಂತೆ ನೋಡಿಕೊಳ್ಳಬೇಕು.

ಆದರೆ, ಆರ್‌ಬಿಐ ಗವರ್ನರ್‌ ಒಪ್ಪಿಗೆಯನ್ನೇ ಪಡೆಯದೆ ಅಪನಗದೀಕರಣ ಮಾಡಿರುವುದು ಸಂವಿಧಾನಕ್ಕೆ ಬಗೆದ ಅಪಚಾರ ಎಂದು ದೂಷಿಸಿದರು. ಅಪನಗದೀಕರಣದಿಂದ ಜನ ಸಾಮಾನ್ಯರ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗಿ ಜನರ ಬದುಕು ಬೀದಿ ಪಾಲಾಗಿದೆ. ಜನಧನ್‌ ಖಾತೆಗಳಿಗೆ ತಲಾ 15 ಲಕ್ಷ ರೂ. ಹಣ ಹಾಕುತ್ತೇವೆ ಎಂದ ಪ್ರಧಾನಿ 15 ಪೈಸೆಯನ್ನೂ ಹಾಕಲಿಲ್ಲ. ದೇಶದ ಶೇ.50ರಷ್ಟು ಜನರು ಬ್ಯಾಂಕ್‌ ಖಾತೆಯನ್ನೇ ಹೊಂದದಿರುವಾಗ ನಗದು ರಹಿತ ವಹಿವಾಟು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.

ಈ ಹಿಂದೆ ಕೇಂದ್ರದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದಾಗ ಬಾರತ ಪ್ರಕಾಶಿಸುತ್ತಿದೆ. ಸುಖಾನುಭವವಾಗುತ್ತಿದೆ ಎಂಬ ಮಾತುಗಳಲ್ಲೇ ಜನರನ್ನು ಮರಳು ಮಾಡಲಾಗಿತ್ತು. ಈ ಅಂಶಗಳನ್ನು ಕಾಂಗ್ರೆಸ್‌ ಕಾರ್ಯಕರ್ತರು ಬಾಯಿಂದ ಬಾಯಿಗೆ ಪ್ರಚಾರ ಮಾಡಬೇಕಿದೆ. ಅದಕ್ಕಾಗಿ ಜನ ವೇದನ ಸಮಾವೇಶದ ಮೂಲಕ ಜನ ಜಾಗೃತಿ ಮೂಡಿಸ ಲಾಗುತ್ತಿದೆ ಎಂದರು.ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ತನ್ವೀರ್‌ ಮಾತನಾಡಿ, ಕಪ್ಪುಹಣ ನಿರ್ಮೂಲನೆ, ಖೋಟಾನೋಟುಗಳ ಹಾವಳಿ ತಡೆ ಹಾಗೂ ಭಯೋತ್ಪಾದನೆ ಮಟ್ಟಹಾಕಲು 500, 1000 ರೂ. ಮುಖಬೆಲೆಯ ನೋಟುಗಳ ಅಪನಗದೀಕರಣ ಮಾಡಲಾಗಿದೆ ಎಂದು ಹೇಳಲಾಯಿತು.

Advertisement

110 ದಿನ ಕಳೆದಿದೆ, ಅಪನಗದೀಕರಣದಿಂದ ಎಷ್ಟು ಕಪ್ಪುಹಣ ಸಂಗ್ರಹವಾಯಿತು. ಖೋಟಾನೋಟು ಎಷ್ಟು ಪತ್ತೆಯಾಯಿತು. ಭಯೋತ್ಪಾದನೆ ಎಷ್ಟರ ಮಟ್ಟಿಗೆ ನಿಯಂತ್ರಣ ಆಗಿದೆ ಎಂಬ ಪ್ರಶ್ನೆಗಳಿಗೆ ಕೇಂದ್ರ ಸರ್ಕಾರದ ಬಳಿ ಉತ್ತರವಿಲ್ಲ. ಚುನಾವಣೆ ಪೂರ್ವದಲ್ಲಿ ಸ್ವಿಸ್‌ ಬ್ಯಾಂಕ್‌ನಲ್ಲಿರುವ ಕಪ್ಪುಹಣವನ್ನು ತಂದು ಪ್ರತಿಯೊಬ್ಬರ ಖಾತೆಗೆ 15 ಲಕ್ಷ ರೂ. ಜಮೆ ಮಾಡುವುದಾಗಿ ನೀಡಿದ್ದ ಭರವಸೆ ಈಡೇರಿಲ್ಲ. ಹೀಗಾಗಿ 2016ರ ನವೆಂಬರ್‌ ಭಾರತಕ್ಕೆ ಕರಾಳದಿನ ಎಂದರು.

ಶಾಸಕ ಎಂ.ಕೆ. ಸೋಮಶೇಖರ್‌ ಮಾತನಾಡಿ, ಅಪನಗದೀಕರಣದಿಂದ ದೇಶವನ್ನು ಕೇಂದ್ರ ಸರ್ಕಾರ ಆರ್ಥಿಕವಾಗಿ 20 ವರ್ಷ ಹಿಂದಕ್ಕೆ ತಳ್ಳಿದೆ. ಜನರ ಕೊಂಡುಕೊಳ್ಳುವ ಶಕ್ತಿ ಹೊರಟುಹೋಗಿದ್ದು, ಹೇಳಿಕೊಳ್ಳಲಾಗದಂತಹ ಪೆಟ್ಟು ಬಿದ್ದು, ಒಳನೋವು ಅನುಭವಿಸುವಂತಾಗಿದೆ ಎಂದು ಹೇಳಿದರು. ಶಾಸಕ ವಾಸು, ಎಐಸಿಸಿ ಸದಸ್ಯ ಜತ್ತಿ ಕುಶಲ್‌ಕುಮಾರ್‌, ವಿಧಾನಪರಿಷತ್‌ ಸದಸ್ಯ ನಾರಾಯಣ ಸ್ವಾಮಿ, ರಾಜ್ಯ ಮಹಿಳಾ ಕಾಂಗ್ರೆಸ್‌ ಉಪಾಧ್ಯಕ್ಷೆ ಡಾ. ನಾಗಲಕ್ಷಿ ಮಾತನಾಡಿದರು.

ನಗರ ಕಾಂಗ್ರೆಸ್‌ ಉಸ್ತುವಾರಿ ಕಾರ್ಯದರ್ಶಿ ಶಫೀ ಉಲ್ಲಾ, ಮಾಜಿ ಶಾಸಕಿ ಮುಕ್ತಾರುನ್ನೀಸಾ ಬೇಗಂ, ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಡಾ. ಬಿ.ಜೆ. ವಿಜಯಕುಮಾರ್‌, ವಿವಿಧ ನಿಗಮ, ಮಂಡಳಿ ಅಧ್ಯಕ್ಷರಾದ ಎಚ್‌.ಎ. ವೆಂಕಟೇಶ್‌, ಬಿ. ಸಿದ್ದರಾಜು, ಮಲ್ಲಿಗೆ ವೀರೇಶ್‌, ನಗರ ಕಾಂಗ್ರೆಸ್‌ ಅಧ್ಯಕ್ಷ ಟಿ.ಎಸ್‌. ರವಿಶಂಕರ್‌, ನಗರ ಮಹಿಳಾ ಕಾಂಗ್ರೆಸ್‌ ಅಧ್ಯಕ್ಷೆ ರಾಧಾಮಣಿ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next