ಬೆಂಗಳೂರು: ಮತ ಚಲಾವಣೆ ಮುಗಿಯುತ್ತಿದ್ದಂತೆ ಅಭ್ಯರ್ಥಿಗಳು ಒಂದು ಹಂತದ ನಿಟ್ಟುಸಿರು ಬಿಟ್ಟಿರಬಹುದು. ಆದರೆ, ವಾಸ್ತವವಾಗಿ ಈಗಿನಿಂದಲೇ ಅವರ ಹೃದಯಬಡಿತ ಹೆಚ್ಚಾಗಿದೆ. ಮತ ಎಣಿಕೆ ನಡೆಯುವ ಶನಿವಾರದವರೆಗೂ ಅವರ ತಲೆಯಲ್ಲಿ ಸೋಲು- ಗೆಲುವಿನ ಲೆಕ್ಕಾಚಾರದ ಅಂಶಗಳೇ ಓಡುತ್ತಿರುತ್ತವೆ.
ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಿಗೆ ಬುಧವಾರ ಮತದಾನ ಅಂತ್ಯಗೊಳ್ಳುತ್ತಿದ್ದಂತೆ ಈಗ ಬೂತ್‌ಮಟ್ಟದಲ್ಲಿ ನಡೆದಿರುವ ಶೇಕಡವಾರು ಮತ ಚಲಾವಣೆಯ ಲೆಕ್ಕವಿಟ್ಟುಕೊಂಡು ತಾಳೆ ಹಾಕುವ ಕೆಲಸದಲ್ಲಿ ಮಗ್ನರಾಗಿದ್ದಾರೆ. ಇಡೀ ದಿನ ಕ್ಷೇತ್ರದ ಮತಗಟ್ಟೆಗಳಲ್ಲಿ ಕಾಣಿಸಿಕೊಂಡ ಮತದಾರರನ್ನೇ ನೋಡಿ ಲೆಕ್ಕ ಹಾಕುವ ಕೆಲಸವೂ ನಡೆದಿದೆ.
ತಮ್ಮ ಪಕ್ಷದ ಮತದಾರರೆಂದು ಗುರುತಿಸಿಕೊಂಡಿರುವ ರಾಜಕೀಯ ಪಕ್ಷಗಳಿಗೆ ಶೇ.60 ರಿಂದ 70 ರಷ್ಟು ಲೆಕ್ಕ ಸಿಗುವುದೇ ಇಲ್ಲಿಂದ. ಇನ್ನುಳಿದ ಲೆಕ್ಕವನ್ನು ಚಲಾವಣೆಯಾದ ಮತಗಳ ಆಧಾರದ ಮೇಲೆ ಹಾಕುತ್ತಾರೆ.
ಹೀಗಾಗಿ ಬೂತ್‌ಮಟ್ಟದಲ್ಲಿ ಬೆಳಿಗ್ಗೆಯಿಂದ ಸಂಜೆಯವರೆಗೂ ಮತದಾರರ ಪಟ್ಟಿ ಹಿಡಿದು ಕುಳಿತಿದ್ದ ಪಕ್ಷದ ಕಾರ್ಯಕರ್ತರು ಕೊಡುವ ಲೆಕ್ಕದ ಮೇಲೆ ಅ ರ್ಥಿಗಳು ಸೋಲು-ಗೆಲುವಿನ ಲೆಕ್ಕ ಹಾಕುತ್ತಾರೆ. ಜತೆಗೆ ತಟಸ್ಥ ಮತದಾರರೆಂದು ಗುರುತಿಸಿಕೊಂಡಿರು ರ ಸ್ಪಂದನೆ ಯಾವ ಪಕ್ಷ, ಯಾವ ಅಭ್ಯರ್ಥಿ ಪರವಾಗಿತ್ತೆಂಬುದನ್ನು ಅವರದೇ ಆದ ಮೂಲಗಳು ಕೊಡುವ ವರದಿಗಳ ಆಧಾರದ ಮೇಲೆ ಅಭ್ಯರ್ಥಿಗಳು ಲೆಕ್ಕಾಚಾರ ಮಾಡುತ್ತಾರೆ. ಈ ರೀತಿ ನಾನಾ ಲೆಕ್ಕಾಚಾರಗಳು ಗುರುವಾರ, ಶುಕ್ರವಾರದವರೆಗೂ ನಡೆಯುತ್ತಲೇ ಇರುತ್ತವೆ.
Related Articles
ಭರ್ಜರಿ ಬೆಟ್ಟಿಂಗ್ ಶುರು
ಒಂದೆಡೆ ಮತದಾನ ಅಂತ್ಯಗೊಳ್ಳುತ್ತಿದ್ದಂತೆ ಗೆಲ್ಲುವ ಪಕ್ಷ ಯಾವುದು? ಸಿಎಂ ಯಾರಾಗುತ್ತಾರೆ? ಹಾಗೂ ಯಾವ ಅಭ್ಯರ್ಥಿ ಗೆಲ್ಲುತ್ತಾರೆ ಎಂಬುದರ ಮೇಲೆ ಬೆಟ್ಟಿಂಗ್ ಕಟ್ಟುವುದು ಶುರುವಾಗಿದೆ. ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಈ ಮೂರು ಪಕ್ಷಗಳಲ್ಲಿ ಯಾವ ಪಕ್ಷ ಅಧಿಕಾರಕ್ಕೆ ಬರುತ್ತದೆ ಎಂಬುದರ ಮೇಲೂ ಬೆಟ್ಟಿಂಗ್ ನಡೆದಿದೆ. ಬಸವರಾಜ ಬೊಮ್ಮಾಯಿ ಅವರೇ ಸಿಎಂ ಆಗಿ ಮುಂದುವರಿಯಬಹುದು, ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ಎಚ್.ಡಿ.ಕುಮಾರಸ್ವಾಮಿ ಈ ಮೂವರಲ್ಲಿ ಯಾರು ಸಿಎಂ ಆಗುತ್ತಾರೆ ಎಂಬುದರ ಮೇಲೆ ಭರ್ಜರಿ ಬೆಟ್ಟಿಂಗ್ ನಡೆದಿದೆ.
ಚಿನ್ನಾಭರಣ, ಬೈಕ್, ಕಾರು, ಟ್ರ್ಯಾಕ್ಟರ್, ಹೊಲ, ಗದ್ದೆ, ಕುರಿ, ಕೋಳಿ ಜತೆಗೆ ಇಂತಿಷ್ಟು ಹಣವೆಂದು ಬೆಟ್ಟಿಂಗ್ ಮಾಡಲಾಗುತ್ತಿದೆ. ಮತಗಟ್ಟೆ ಸಮೀಕ್ಷೆಯಲ್ಲಿ ಬಹುತೇಕ ಸಮೀಕ್ಷೆಗಳು ಅತಂತ್ರ ಫಲಿತಾಂಶವೆಂದು ಹೇಳುತ್ತಿದ್ದರೂ ಕಾಂಗ್ರೆಸ್ ಪಕ್ಷ ಅತ್ಯಧಿಕ ಸ್ಥಾನಗಳಿಸಿ ಅಧಿಕಾರಕ್ಕೆ ಬರುತ್ತದೆ ಎಂಬುದು ಕಾಂಗ್ರೆಸ್ ಪರ ಬೆಟ್ಟಿಂಗ್ ಕಟ್ಟುತ್ತಿರುವವರ ವಾದ.
ಬಿಜೆಪಿಯು ಕರ್ನಾಟಕದಲ್ಲಿ ಅಧಿಕಾರ ಉಳಿಸಿಕೊಳ್ಳಲಿದೆ ಎಂಬುದು ಬಿಜೆಪಿ ಪರವಿರುವವರ ವಾದ. ಆದರೆ ಈ ಎರಡೂ ವಾದಗಳು ಸುಳ್ಳೆಂಬುದು ಜೆಡಿಎಸ್ ಪರವಿರುವವರ ವಿಭಿನ್ನ ವಾದ. ಒಟ್ಟಾರೆ ಫಲಿತಾಂಶ ಅತಂತ್ರವಾಗುವುದರಿಂದ ಜೆಡಿಎಸ್ ಪಕ್ಷವೇ ಅಧಿಕಾರಕ್ಕೆ ಬರುತ್ತದೆ ಎಂಬ ವಾದವೂ ನಡೆದಿದೆ. ಒಟ್ಟಾರೆ ಶನಿವಾರದವರೆಗೂ ರಾಜ್ಯ ರಾಜಕಾರಣದ ಮೇಲೆ ಚರ್ಚೆಗಳು ನಡೆಯುತ್ತಲೇ ಇರುತ್ತವೆ.