Advertisement

ಪಿಎಫ್ಐ ಪರವಾಗಿ ಯಾರೇ ಧ್ವನಿ ಎತ್ತಿದರೂ ಕಠಿಣ ಕ್ರಮ: ಆರಗ ಜ್ಞಾನೇಂದ್ರ ಎಚ್ಚರಿಕೆ

01:13 PM Sep 29, 2022 | Team Udayavani |

ಬೆಂಗಳೂರು: ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಪರವಾಗಿ ಯಾರೇ ಧ್ವನಿ ಎತ್ತಿದರೂ ಅಂಥವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಎಚ್ಚರಿಕೆ ನೀಡಿದ್ದಾರೆ.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರ ಪಿಎಫ್‍ಐ ಸೇರಿದಂತೆ ಅದರ ಎಂಟು ಅಂಗಸಂಸ್ಥೆಗಳನ್ನು ಐದು ವರ್ಷಗಳ ಕಾಲ ನಿಷೇಧಿಸಿದೆ. ಈ ಸಂಘಟನೆ ಪರವಾಗಿ ಹೋರಾಟ, ಪ್ರತಿಭಟನೆ ನಡೆಸಿದವರ ಮೇಲೆ ಮುಲಾಜಿಲ್ಲದೆ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ.

ಕೇಂದ್ರದ ಸೂಚನೆಯಂತೆ ಈಗಾಗಲೇ ರಾಜ್ಯದ ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಪ್ರದೇಶಗಳಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡಿದೆ. ಯಾವುದೇ ಗಲಾಟೆ ನಡೆಯದಂತೆ ಕ್ರಮವಹಿಸಲಾಗಿದೆ. ನಿಷೇಧಿತ ಈ ಸಂಘಟನೆ ಹೆಸರಿನಲ್ಲಿ ಯಾರೊಬ್ಬರು ಯಾವುದೇ ರೀತಿಯ ಚಟುವಟಿಕೆಗಳನ್ನು ನಡೆಸುವಂತಿಲ್ಲ ಎಂದು ಸೂಚಿಸಿದ್ದಾರೆ.

ಯಾವುದೇ ಸಂಘಟನೆ ರಾಜಕೀಯ ಪಕ್ಷಗಳು ದೇಶದ್ರೋಹಿ ಕೆಲಸದಲ್ಲಿ ಭಾಗವಹಿಸಿದರೆ ಅಂಥವರ ಮೇಲೆ ಕ್ರಮ ಕೈಗೊಳ್ಳುತ್ತೇವೆ. ನಾವು ಯಾರನ್ನು ಬಿಡುವ ಪ್ರಶ್ನೆಯೇ ಇಲ್ಲ ಎಂದು ಎಚ್ಚರಿಸಿದರು.

ಪಿಎಫ್‍ಐ ಹಾಗೂ ಅದರ ಎಂಟು ಅಂಗಸಂಸ್ಥೆಗಳನ್ನು ನಿಷೇಧ ಹೇರಿದ ಹಿನ್ನೆಲೆಯಲ್ಲಿ ಕೆಲವು ಸಮಾಜಘಾತುಕ ಶಕ್ತಿಗಳು ಕಾನೂನು ಸುವ್ಯವಸ್ಥೆಗೆ ಧಕ್ಕೆ ತರಬಹುದು ಎಂಬ ಹಿನ್ನೆಲೆಯಲ್ಲಿ ಕೆಎಸ್‍ಆರ್ ಪಿ ತುಕಡಿ ಸೇರಿದಂತೆ ವಿವಿಧ ಶ್ರೇಣಿಯ ಭದ್ರತೆಯನ್ನು ಒದಗಿಸಲಾಗಿದೆ ಎಂದರು.

Advertisement

ಪಿಎಫ್‍ಐ ಜೊತೆಗೆ ಎಸ್‍ಡಿಪಿಐ ಸಂಘಟನೆಯನ್ನು ರಾಜ್ಯ ಸರ್ಕಾರ ನಿಷೇಧ ಮಾಡಲಿದೆಯೇ ಎಂಬ ಮಾಧ್ಯಮದವರ ಪ್ರಶ್ನೆಗೆ ಒಂದು ಸಂಘಟನೆಯನ್ನು ನಿಷೇಧ ಮಾಡಬೇಕಾದರೆ ಸಾಕಷ್ಟು ಸಾಕ್ಷ್ಯಾಧಾರಗಳನ್ನು ಕಲೆ ಹಾಕಬೇಕಾಗುತ್ತದೆ ಎಂದು ಹೇಳಿದರು.

ಇದನ್ನೂ ಓದಿ:ಮೊದಲು ನಳಿನ್ ಕುಮಾರ್ ಕಟೀಲ್ ಮಂಪರು ಪರೀಕ್ಷೆ ಮಾಡಿ: ಹರಿಪ್ರಸಾದ್

ಎಸ್‍ಡಿಪಿಐ ಒಂದು ರಾಜಕೀಯ ಮಾನ್ಯತೆ ಇರುವ ಸಂಘಟನೆ. ಅದನ್ನು ನಿಷೇಧ ಮಾಡಬೇಕೆಂದರೆ ನೀತಿ-ನಿಯಮಗಳು ಇರುತ್ತವೆ. ಪಿಎಫ್‍ಐನ್ನು ನಿಷೇಧಿಸುವಾಗಲು ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಲಾಗಿತ್ತು. ಈಗ ಎಸ್‍ಡಿಪಿಐ ನಿಷೇಧಿಸಬೇಕಾದರೂ ಇದೇ ಕಾನೂನು ಕ್ರಮ ಅನುಸರಿಸಬೇಕು ಎಂದರು.

ಒಂದು ವೇಳೆ ಎಸ್‍ಡಿಪಿಐ ಭಯೋತ್ಪಾದಕ ಸಂಘಟನೆಗಳಿಗೆ ಕುಮ್ಮುಕು ಕೊಡುವುದು ಇಲ್ಲವೇ ದೇಶದ್ರೋಹಿ ಚಟುವಟಿಕೆಗಳಲ್ಲಿ ತೊಡಗಿಸಿ ಕೊಂಡಿರುವುದು ಸಾಕ್ಷಾಧಾರಗಳಿಂದ ಸಾಬೀತಾದರೆ ಅದನ್ನು ಕೂಡ ನಿಷೇಧ ಮಾಡಲು ಹಿಂದೆ ಮಂದೆ ನೋಡುವುದಿಲ್ಲ ಎಂದು ಹೇಳೀದರು.

ಪಿಎಫ್‍ಐ ಸಂಘಟನೆ ನಿಷೇಧ ಮಾಡಿದ ಬಳಿಕ ಆಸ್ತಿ ಮುಟ್ಟುಗೋಲು ಮಾಡಿಕೊಳ್ಳುವ ಪ್ರಕ್ರಿಯೆ ಆರಂಭವಾಗಿದೆ. ಈ ಬಗ್ಗೆ ನಾವು ಸರ್ವೆ ಕೂಡ ಮಾಡುತ್ತಿದ್ದೇವೆ. ಎಲ್ಲೆಲ್ಲಿ ಅವರು ಆಸ್ತಿ ಹೊಂದಿದ್ದಾರೆ ಎಂಬುದು ತನಿಖೆಯಿಂದ ಗೊತ್ತಾಗಬೇಕು. ನಂತರ ಮುಟ್ಟುಗೋಲು ಪ್ರಕ್ರಿಯೆ ಆರಂಭವಾಗಲಿದೆ.

ಮುಸ್ಲಿಂ ಮತವನ್ನು ವಿಭಜನೆ ಮಾಡಲು ಎಸ್‍ಡಿಪಿಐ ನಿಷೇಧ ಮಾಡಿಲ್ಲ ಎಂಬ ಪ್ರತಿಪಕ್ಷ ಕಾಂಗ್ರೆಸ್ ನಾಯಕರ ಆರೋಪಕ್ಕೆ ತಿರುಗೇಟು ನೀಡಿದ ಆರಗ ಜ್ಞಾನೇಂದ್ರ, ಇದು ಆ ಪಕ್ಷದ ಬೌದ್ಧಿಕ ದಿವಾಳಿತನ ತೋರುತ್ತದೆ ಎಂದು ಕಿಡಿಕಾರಿದರು.

ಕಾಂಗ್ರೆಸ್ ನಾಯಕರಿಗೆ ಯಾವಾಗಲೂ ಮತ ಬ್ಯಾಂಕ್ ರಾಜಕಾರಣವೇ ಮುಖ್ಯ. ಅವರು ಅಧಿಕಾರದಲ್ಲಿದ್ದಾಗ ಈ ಸಂಘಟನೆಗಳನ್ನು ಏಕೆ ನಿಷೇಧ ಮಾಡಿರಲಿಲ್ಲ ಎಂದು ಪ್ರಶ್ನಿಸಿದರು.

ನಮಗೆ ದೇಶ ಮುಖ್ಯ. ಅವರಿಗೆ ಚುನಾವಣೆ ಗೆಲ್ಲುವುದೇ ಮುಖ್ಯ. ಬಿಜೆಪಿ, ಕಾಂಗ್ರೆಸ್ ಗೂ ಇರುವ ವ್ಯತ್ಯಾಸ ಇದೇ ಎಂದು ವ್ಯಂಗ್ಯವಾಡಿದರು. ಕೇಂದ್ರ ಸರ್ಕಾರ ಸೂಚನೆ ಕೊಟ್ಟಂತೆ ನಾವು ಪಾಲನೆ ಮಾಡುತ್ತಿದ್ದೇವೆ. ಪಿಎಫ್‍ಐ ಸಂಘಟನೆಗಳ ಕಚೇರಿಗೆ ಬೀಗ ಹಾಕಲಾಗಿದೆ. ಮುಂದಿನ ಪ್ರಕ್ರಿಯೆಗಳು ಕಾನೂನು ಪ್ರಕಾರ ನಡೆಯಲಿವೆ. ಈಗಾಗಲೇ ಅಧಿಕಾರಿಗಳು ಈ ಬಗ್ಗೆ ಸೂಚನೆ ಕೊಟ್ಟಿರುವುದಾಗಿ ಮಾಹಿತಿ ನೀಡಿದರು.

ಆರ್ ಎಸ್‍ಎಸ್ ಸಂಘಟನೆಯನ್ನು ನಿಷೇಧ ಮಾಡಬೇಕೆಂಬ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿಕೆ ತಿರುಗೇಟು ನೀಡಿದ ಅವರು, ಆರ್ ಎಸ್‍ಎಸ್ ಈ ದೇಶದಲ್ಲಿ ಒಂದು ದೇಶಭಕ್ತ ಸಂಘಟನೆ. ಅದು ಎಂದಿಗೂ ಕೂಡ ದೇಶದ್ರೋಹಿ ಕೆಲಸ ಮಾಡಿಲ್ಲ. ಆ ಸಂಘಟನೆ ಬಗ್ಗೆ ಗೊತ್ತಿಲ್ಲದವರು ಈ ರೀತಿ ಮಾತನಾಡುತ್ತಾರೆ ಎಂದು ಕುಹುಕವಾಡಿದರು.

ಆರ್ ಎಸ್‍ಎಸ್ ರಾಷ್ಟ್ರ ಭಕ್ತರನ್ನು ನಿರ್ಮಾಣ ಮಾಡುವ ಸಂಘ. ಜನರಲ್ಲಿ ಚಾರಿತ್ರೆ ನಿರ್ಮಾಣ ಮಾಡುವ ಕೆಲಸ ಮಾಡುತ್ತಿದೆ. ಪಿಎಫ್‍ಐ ಎಂಬ ಮತೀಯ ಸಂಘಟನೆ ಜೊತೆಆರ್ ಎಸ್‍ಎಸ್ ಹೋಲಿಕೆ ಮಾಡುವುದು ತಪ್ಪು. ಹೀಗೆ ಹೋಲಿಕೆ ಮಾಡುವವರಿಗೆ ಮಾನಸಿಕ ದಾರಿದ್ರ್ಯತನವಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next