Advertisement

ಕಾಲುವೆ ಹಾದಿಯಲ್ಲಿ ನೆರೆ ಹಾವಳಿ ಆತಂಕ

12:12 PM Jul 09, 2018 | |

ನಗರದ ಕೆಲ ಪ್ರದೇಶಗಳಿಗೆ ಮಳೆ ಎಂದರೆ ದುಃಸ್ವಪ್ನ. ಕೆರೆ, ರಾಜಕಾಲುವೆಗಳ ಸುತ್ತಲ ಪ್ರದೇಶಗಳಲ್ಲಿ ವಾಸಿಸುವ ಜನ ಕಳೆದ ವರ್ಷದ ದಾಖಲೆ ಮಳೆಗೆ ಅನುಭವಿಸಿದ ಕಷ್ಟ ಅಷ್ಟಿಷ್ಟಲ್ಲ. ಸಾವು-ನೋವು ಸಂಭವಿಸಿದ ನಂತರ ಎಚ್ಚೆತ್ತಂತೆ ನಟಿಸಿದ ಮಹಾನಗರ ಪಾಲಿಕೆ, ಮತ್ತೆ ಆ ಪ್ರದೇಶಗಳತ್ತ ನೋಡಲಿಲ್ಲ. ಪರಿಹಾರ ಕಾಮಗಾರಿಗಳನ್ನೂ ಪೂರ್ಣಗೊಳಿಸಿಲ್ಲ. ಕೈಗೊಂಡಿರುವ ಕಾಮಗಾರಿಗಳೂ ಅವೈಜ್ಞಾನಿಕ. ಹೀಗಾಗಿ ಈ ಬಾರಿ ಮತ್ತೆ ಮಳೆ ಅನಾಹುತದ ಆತಂಕ ನಾಗರಿಕರನ್ನು ಕಾಡುತ್ತಿದೆ.

Advertisement

ಬೆಂಗಳೂರು: ಕಳೆದ ವರ್ಷ ರಾಜಧಾನಿಯಲ್ಲಿ ದಾಖಲೆ ಪ್ರಮಾಣದ ಮಳೆಯಾಗಿ, ಹಲವು ಜನವಸತಿ ಪ್ರದೇಶಗಳು ಜಲಾವೃತಗೊಂಡಿದ್ದವು. ಸಾವು-ನೋವು ಸಂಭವಿಸಿದ್ದವು. ಅನಾಹುತ ಸಂಭವಿಸಿದ ಪ್ರದೇಶಗಳಲ್ಲಿ ಪಾಲಿಕೆ ಪರಿಹಾರ ಕಾಮಗಾರಿ ಕೈಗೊಂಡಿತ್ತಾದರೂ ಬಹುತೇಕ ಪ್ರದೇಶಗಳಲ್ಲಿ ಕಾಮಗಾರಿ ಪೂರ್ಣಗೊಂಡಿಲ್ಲ.

ಬಿಬಿಎಂಪಿ ವ್ಯಾಪ್ತಿಯಲ್ಲಿ ಒಟ್ಟು 842 ಕಿ.ಮೀ. ಉದ್ದದ ರಾಜಕಾಲುವೆ ಮಾರ್ಗವಿದೆ. ಆ ಪೈಕಿ 296.35 ಕಿ.ಮೀ. ಮಾರ್ಗದಲ್ಲಿ ತಡೆಗೋಡೆ ನಿರ್ಮಾಣ, ಹೂಳು ತೆಗೆಯುವುದು ಸೇರಿ ಇತರ ಕೆಲಸಗಳು ಮುಗಿದಿವೆ. ಜತೆಗೆ 92.35 ಕಿ.ಮೀ. ಉದ್ದದ ಕಾಲುವೆ ದುರಸ್ತಿ ಕಾರ್ಯ ಚಾಲ್ತಿಯಲ್ಲಿದ್ದು, ಇನ್ನೂ 453 ಕಿ.ಮೀ. ರಾಜಕಾಲುವೆಯ ತಡೆಗೋಡೆ, ದುರಸ್ತಿ ಹಾಗೂ ಹೂಳು ತೆಗೆಯುವಂತಹ ಕೆಲಸವಾಗಬೇಕಿದೆ.

ಕಳೆದ ವರ್ಷ ಸುರಿದ ಭಾರಿ ಮಳೆಗೆ ರಾಜಕಾಲುವೆಗಳು ಉಕ್ಕಿ, ರಸ್ತೆ, ಬಡಾವಣೆಗಳು ಕೆರೆಗಳಂತಾಗಿದ್ದವು. ಜತೆಗೆ ಮೂವರು ಕಾಲುವೆಯಲ್ಲಿ ಕೊಚ್ಚಿ ಹೋಗಿ ಮೃತಪಟ್ಟಿದ್ದರು. ಈ ಹಿನ್ನೆಲೆಯಲ್ಲಿ ಪಾಲಿಕೆಯಿಂದ ಶಂಕರಮಠ, ಎಚ್‌ಎಸ್‌ಆರ್‌ ಬಡಾವಣೆ, ಕುಂಬಾರಗುಂಡಿ, ಆನೇಪಾಳ್ಯ, ಪೈ ಬಡಾವಣೆ ಸೇರಿ 52 ಕಡೆ ಕಾಮಗಾರಿ ನಡೆಸಿದ್ದು, ಆ ಭಾಗಗಳಲ್ಲಿ ಮಳೆಗಾಲದಲ್ಲಿ ಸಮಸ್ಯೆಯಾಗುವುದಿಲ್ಲ ಎಂಬುದು ಪಾಲಿಕೆ ಅಧಿಕಾರಿಗಳ ಅಭಿಪ್ರಾಯ. 

ಕಾಲುವೆ ನಿರ್ಮಾಣವಾಗಿಲ್ಲ: 2016ರಲ್ಲಿ ಬಿಬಿಎಂಪಿ 20.09 ಕಿ.ಮೀ. ಉದ್ದದ ರಾಜಕಾಲುವೆ ಒತ್ತುವರಿ ತೆರವುಗೊಳಿಸಿತ್ತು. ಆದರೆ, ಬೊಮ್ಮನಹಳ್ಳಿ ವಲಯದ ಅವನಿ ಶೃಂಗೇರಿನಗರ ಹೊರತುಪಡಿಸಿದರೆ ಉಳಿದ ಯಾವುದೇ ಭಾಗದಲ್ಲಿ ರಾಜಕಾಲುವೆ ನಿರ್ಮಿಸಲು ಮುಂದಾಗಿಲ್ಲ. ದೊಡ್ಡ ಬೊಮ್ಮಸಂದ್ರದಲ್ಲಿ ಒಂದೊವರೆ ಕಿ.ಮೀ.ಗೂ ಹೆಚ್ಚು ಉದ್ದದ ಒತ್ತುವರಿ ತೆರವುಗೊಳಿಸಿದ್ದು, ರಾಜಕಾಲುವೆ ನಿರ್ಮಾಣ ಆರಂಭವಾಗಿಲ್ಲ.

Advertisement

ಕಳೆದ ಬಾರಿ ಅನಾಹುತ ಸಂಭವಿಸಿದ ಪ್ರದೇಶಗಳಲ್ಲಿನ ವಸ್ತುಸ್ಥಿತಿ 
ಕುರುಬರಹಳ್ಳಿ: ವೃಷಭಾವತಿ ರಾಜಕಾಲುವೆಗೆ ಹೊಂದಿಕೊಂಡಿರುವ ಕುರುಬರಹಳ್ಳಿಯಲ್ಲಿ ಕಳೆದ ವರ್ಷ ಕಾಲುವೆಯಲ್ಲಿ ಕೊಚ್ಚಿ ಮೂವರು ಪ್ರಾಣ ಕಳೆದುಕೊಂಡಿದ್ದರು. ಆ ಹಿನ್ನೆಲೆಯಲ್ಲಿ ಕೂಡಲೇ ಪರಿಹಾರ ಕಾಮಗಾರಿ ಆರಂಭಿಸಿದ ಪಾಲಿಕೆ, ತಡೆಗೋಡೆ ನಿರ್ಮಾಣ ಪೂರ್ಣಗೊಳಿಸಿದೆ. ಆದರೆ, ತಡೆಗೋಡೆಗಳನ್ನು ಅವೈಜ್ಞಾನಿಕವಾಗಿ ನಿರ್ಮಿಸಿದ್ದು, ಎರಡೂ ಬದಿ ತಡೆಗೋಡೆ ಎತ್ತರಿಸಿಲ್ಲ. ಬದಲಿಗೆ ಕಳೆದ ಬಾರಿ ಅನಾಹುತ ಸಂಭವಿಸಿದ ಕಡೆ ಮಾತ್ರ ಗೋಡೆ ಎತ್ತರಿಸಿರುವುದರಿಂದ ಮತ್ತೂಂದು ಭಾಗದಲ್ಲಿ ಅನಾಹುತ ಸಂಭವಿಸುವ ಆತಂಕವಿದೆ.

ಎಚ್‌ಎಸ್‌ಆರ್‌ ಬಡಾವಣೆ: ಎಚ್‌ಎಸ್‌ಆರ್‌ ಬಡಾವಣೆಯ ಎಸ್‌.ಟಿ.ಬೆಡ್‌, ಎಚ್‌ಎಸ್‌ಆರ್‌ 5, 6 ಹಾಗೂ 7ನೇ ಸೆಕ್ಟರ್‌ಗಳು ಎರಡು ವರ್ಷಗಳಲ್ಲಿ 17 ಬಾರಿ ಜಲಾವೃತಗೊಂಡಿವೆ. ಈ ಹಿನ್ನೆಲೆಯಲ್ಲಿ 21 ಕೋಟಿ ರೂ. ವೆಚ್ಚದಲ್ಲಿ ಬಡಾವಣೆಗಳ ರಸ್ತೆಗಳನ್ನು ಎತ್ತರಿಸಿ, ಕಿರುಚರಂಡಿ, ಪ್ರಾಥಮಿಕ ಕಾಲುವೆಗಳ ನಿರ್ಮಾಣ ಕಾಮಗಾರಿ ನಡೆಸಲಾಗುತ್ತಿದೆ. ಹೀಗಾಗಿ ಸಿಲ್ಕ್ಬೋರ್ಡ್‌ ಕಡೆಯಿಂದ ಬರುವ ರಾಜಕಾಲುವೆಗೆ ಎಚ್‌ಎಸ್‌ಆರ್‌ ಬಡಾವಣೆಯ ಪ್ರಾಥಮಿಕ ಕಾಲುವೆಯ ನೀರು ಸೇರುವ ಕಾರಣ ಬಡಾವಣೆಗಳಿಗೆ ನುಗ್ಗುವ ಸಮಸ್ಯೆ ಪರಿಹಾರವಾಗಲಿದೆ. 

ಹೊಸಕೆರೆಹಳ್ಳಿ ದತ್ತಾತ್ರೇಯ ದೇವಸ್ಥಾನ: ರಾಜಕಾಲುವೆಯ ಹಳೆಯ ತಡೆಗೋಡೆ ಕುಸಿದ ಪರಿಣಾಮ ಮಳೆಗಾಲದಲ್ಲಿ ಮಳೆ ನೀರು ಹೊಸಕೆರೆಹಳ್ಳಿಯ ದತ್ತಾತ್ರೇಯ ದೇವಸ್ಥಾನ ಹಾಗೂ ಸುತ್ತಮುತ್ತಲ ಪ್ರದೇಶಗಳಿಗೆ ನುಗ್ಗಿ ಅವಾಂತರ ಸೃಷ್ಟಿಯಾಗುತ್ತಿತ್ತು. ಕಳೆದ ವರ್ಷ ದೇವಾಲಯ ಸಂಪೂರ್ಣ ಜಲಾವೃತಗೊಂಡಿತ್ತು. ಸಾರ್ವಜನಿಕರ ಒತ್ತಾಯದ ಮೇಲೆ ಕಾಮಗಾರಿ ನಡೆಸಿರುವ ಅಧಿಕಾರಿಗಳು ರಾಜಕಾಲುವೆ ತಡೆಗೋಡೆ ನಿರ್ಮಾಣ ಕಾರ್ಯ ಪೂರ್ಣಗೊಳಿಸಿದ್ದು, ಕೆಲವೆಡೆ ತಡೆಗೋಡೆಯ ಎತ್ತರ ಎಚ್ಚಿಸಿರುವುದರಿಂದ ಸಮಸ್ಯೆ ಬಗೆಹರಿದಂತಾಗಿದೆ. 

ಕುಂಬಾರಗುಂಡಿ ಬಡಾವಣೆ: ಜೆ.ಸಿ.ರಸ್ತೆ ಬಳಿಯಿರುವ ಕುಂಬಾರುಗುಂಡಿ ಬಡಾವಣೆಯಲ್ಲಿ 2 ಕೋಟಿ ರೂ. ವೆಚ್ಚದಲ್ಲಿ ರಾಜಕಾಲುವೆ ತಡೆಗೋಡೆ ಎತ್ತರಿಸುವ ಕಾಮಗಾರಿ ಕೈಗೊಳ್ಳಲಾಗಿದೆ. ಆದರೆ, ಕಾಲುವೆ ಮೇಲೆ ನಿರ್ಮಿಸಿರುವ ಕಟ್ಟಡಗಳ ತೆರುವು ವಿಚಾರ ನ್ಯಾಯಾಲಯದಲ್ಲಿದೆ. ಮುಖ್ಯಮಂತ್ರಿಗಳು, ಸಚಿವರು ಭೇಟಿ ನೀಡಿ ಪರಿಶೀಲನೆ ನಡೆಸಿದರೂ ಸಮಸ್ಯೆ ಬಗೆಹರಿದಿಲ್ಲ. ಜತೆಗೆ ಕಾಲುವೆಯಲ್ಲಿ ನಾಲ್ಕೈದು ಅಡಿ ಹೂಳು ತುಂಬಿದೆ. ಇದರೊಂದಿಗೆ ಕಿರುಚರಂಡಿಗಳಲ್ಲೂ ಹೂಳು ತುಂಬಿದ್ದು, ಅರ್ಧ ಗಂಟೆ ಮಳೆಯಾದರೂ, ಮನೆಗಳಿಗೆ ನೀರು ನುಗ್ಗುತ್ತದೆ.

ನಾಯಂಡಹಳ್ಳಿ ಜಂಕ್ಷನ್‌: ನಾಯಂಡಹಳ್ಳಿ ಜಂಕ್ಷನ್‌ ಮೆಟ್ರೋ ನಿಲ್ದಾಣದ ಬಳಿ ಪ್ರತಿ ವರ್ಷ ಮಳೆಗಾಲದಲ್ಲಿ ಭಾರಿ ಪ್ರಮಾಣದಲ್ಲಿ ನೀರು ನಿಲ್ಲುತ್ತದೆ. ಕಳೆದ ವರ್ಷ ನೀರಿನ ಪ್ರಮಾಣ ಹೆಚ್ಚಾದ ಹಿನ್ನೆಲೆಯಲ್ಲಿ ಕಾರುಗಳು ತೇಲಿ ಹೋಗಿದ್ದವು. ಮೈಸೂರು ರಸ್ತೆ, ದಕ್ಷಿಣ ಹಾಗೂ ರಾಜರಾಜೇಶ್ವರ ನಗರ ವಲಯಗಳಿಗೆ ಸೇರುವುದರಿಂದ ಸಮನ್ವಯದ ಕೊರತೆಯಿಂದಾಗಿ ರಾಜಕಾಲುವೆಗೆ ತಡೆಗೋಡೆ ನಿರ್ಮಿಸುವ ಕಾರ್ಯ ಪೂರ್ಣಗೊಂಡಿಲ್ಲ. ವೃಷಭಾವತಿ ಕಾಲುವೆಯಲ್ಲಿ ಹರಿದು ಬರುವ ನೀರಿನ ವೇಗ ನಾಯಂಡಹಳ್ಳಿ ಜಂಕ್ಷನ್‌ ಬಳಿ ಕಡಿಮೆಯಾಗುತ್ತದೆ. ಹೀಗಾಗಿ ಮಳೆಗಾಲದಲ್ಲಿ ನೀರು ರಸ್ತೆಗಳಿಗೆ ಬರುವ ಆತಂಕವಿದೆ.

ಕಣಿವೆಗಳ ಮಾಹಿತಿ
ಹೆಬ್ಟಾಳ ಕಣಿವೆ:
 ಯಶವಂತಪುರದಿಂದ ಆರಂಭವಾಗುವ ಹೆಬ್ಟಾಳ ಕಣಿವೆ 52 ಕಿ.ಮೀ ಉದ್ದದ ಕಾಲುವೆ ಹೊಂದಿದೆ. ಆದರೆ, ಕೇವಲ ಶೇ.20ರಷ್ಟು ಕಾಲುವೆಗೆ ಮಾತ್ರ ಇಕ್ಕೆಲಗಳಲ್ಲಿ ತಡೆಗೋಡೆ ನಿರ್ಮಿಸಲಾಗಿದೆ. ಉಳಿದ ಭಾಗಗಳಲ್ಲಿ ಕಚ್ಚಾ ಕಾಲುವೆಗಳಿದ್ದು, ದಡದಲ್ಲಿ ಬೆಳೆದಿರುವ ಹುಲ್ಲು ತಿನ್ನಲು ಬರುವ ಅದೆಷ್ಟೋ ಜಾನುವಾರು ಕಾಲುವೆಗೆ ಬಿದ್ದ ಪ್ರಸಂಗಗಳೂ ನಡೆದಿವೆ.

-24 ಕಣಿವೆ ವ್ಯಾಪ್ತಿಗೆ ಬರುವ ಕಾಲುವೆಗಳು
-52 ಕಿ.ಮೀ ಕಣಿವೆ ವ್ಯಾಪ್ತಿಯ ಕಾಲುವೆ ಉದ್ದ 
-26 ಕಿ.ಮೀ ಪ್ರಾಥಮಿಕ ಕಾಲುವೆಗಳ ಉದ್ದ
-25 ಕಿ.ಮೀ ಮಧ್ಯಮ ಕಾಲುವೆಗಳ ಉದ್ದ 

ಛಲ್ಲಘಟ್ಟ ಕಣಿವೆ: ಬೆಂಗಳೂರು ಅರಮನೆ ಭಾಗದ ನಂದಿದುರ್ಗ ಪ್ರದೇಶದಿಂದ ಆರಂಭವಾಗುವ ಛಲ್ಲಘಟ್ಟ ಕಣಿವೆಯು ನಗರದ ಅತ್ಯಂತ ಚಿಕ್ಕ ಕಣಿವೆಯಾಗಿದ್ದರೂ, ಪಾಲಿಕೆಯಿಂದ ಸಮರ್ಪಕವಾಗಿ ನಿರ್ವಹಣೆಯಾಗದ ಹಿನ್ನೆಲೆಯಲ್ಲಿ ಆರ್‌.ಟಿ.ನಗರ, ಶಿವಾಜಿನಗರ, ಹಲಸೂರು, ಶಾಂತಿನಗರ ಹಾಗೂ ಇಂದಿರಾನಗರ ಭಾಗಗಳಲ್ಲಿ ತೊಂದರೆಯಾಗುತ್ತಿದೆ.

-12 ಕಣಿವೆ ವ್ಯಾಪ್ತಿಗೆ ಬರುವ ಕಾಲುವೆಗಳು
-33 ಕಿ.ಮೀ ಕಣಿವೆ ವ್ಯಾಪ್ತಿಯ ಕಾಲುವೆ ಉದ್ದ 
-16.50 ಕಿ.ಮೀ ಪ್ರಾಥಮಿಕ ಕಾಲುವೆಗಳ ಉದ್ದ
-16.50 ಕಿ.ಮೀ ಮಧ್ಯಮ ಕಾಲುವೆಗಳ ಉದ್ದ 

ಕೋರಮಂಗಲ ಕಣಿವೆ: ಕೋರಮಂಗಲ ಕಣಿವೆ ನಗರದ ಎರಡನೇ ಅತಿ ಉದ್ದದ ಕಾಲುವೆ ಜಾಲ ಹೊಂದಿದೆ. 2016ರ ಆಗಸ್ಟ್‌ನಲ್ಲಿ ಪ್ರವಾಹಕ್ಕೊಳಗಾಗಿದ್ದ ಅವನಿ ಶೃಂಗೇರಿ ಬಡಾವಣೆ ಇದೇ ಕಣಿವೆ ವ್ಯಾಪ್ತಿಗೆ ಒಳಪಡುತ್ತದೆ. ಕಣಿವೆಯ ದಡದಲ್ಲಿ ಐಟಿ-ಬಿಟಿ, ಬಹುರಾಷ್ಟ್ರೀಯ ಕಂಪನಿಗಳು ನಿರ್ಮಾಣವಾಗಿದ್ದು, ಸಂಪೂರ್ಣ ಕಲುಷಿತ ನೀರು ಹರಿಯುತ್ತಿದೆ.

-25 ಕಣಿವೆ ವ್ಯಾಪ್ತಿಗೆ ಬರುವ ಕಾಲುವೆಗಳು
-71 ಕಿ.ಮೀ ಕಣಿವೆ ವ್ಯಾಪ್ತಿಯ ಕಾಲುವೆ ಉದ್ದ
-25.50 ಕಿ.ಮೀ ಪ್ರಾಥಮಿಕ ಕಾಲುವೆಗಳ ಉದ್ದ
-47.50 ಕಿ.ಮೀ ಮಧ್ಯಮ ಕಾಲುವೆಗಳ ಉದ್ದ

ವೃಷಭಾವತಿ ಕಣಿವೆ: ಒಂದು ಕಾಲದಲ್ಲಿ ಶುದ್ಧ ನೀರು ಹರಿಯುತ್ತಿದ್ದ ವೃಷಭಾವತಿ ನದಿ ಈಗ ತನ್ನ ಸ್ವರೂಪ ಕಳೆದುಕೊಂಡು ನಗರದ ಮಲಿನ ನೀರನ್ನು ಹೊತ್ತು ಕೆಂಗೇರಿ ಮಾರ್ಗವಾಗಿ ಕನಕಪುರ ಕಡೆಗೆ ಹರಿಯುತ್ತದೆ. ಮಳೆಗಾಲದಲ್ಲಿ ಇದೇ ಕಾಲುವೆ ನೀರು ಮೈಸೂರು ರಸ್ತೆ ಗಾಳಿ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ನುಗ್ಗಿ ಅವಾಂತರ ಸೃಷ್ಟಿಯಾಗುತ್ತಿತ್ತು. ಇದೀಗ ತಡೆಗೋಡೆ ನಿರ್ಮಿಸಿದ ಹಿನ್ನೆಲೆಯಲ್ಲಿ ಸಮಸ್ಯೆ ಬಗೆಹರಿದಿದೆ.

-34 ಕಣಿವೆ ವ್ಯಾಪ್ತಿಗೆ ಬರುವ ಕಾಲುವೆಗಳು
-90 ಕಿ.ಮೀ ಕಣಿವೆ ವ್ಯಾಪ್ತಿಯ ಕಾಲುವೆ ಉದ್ದ
-32.50 ಕಿ.ಮೀ ಪ್ರಾಥಮಿಕ ಕಾಲುವೆಗಳ ಉದ್ದ
-57.50 ಕಿ.ಮೀ ಮಧ್ಯಮ ಕಾಲುವೆಗಳ ಉದ್ದ

ಅಂಕಿ-ಅಂಶ
842 ಕಿ.ಮೀ: ನಗರದಲ್ಲಿನ ರಾಜಕಾಲುವೆಗಳ ಉದ್ದ
296.35 ಕಿ.ಮೀ: ದುರಸ್ತಿ ಪೂರ್ಣಗೊಂಡ ಕಾಲುವೆ ಉದ್ದ
633: ಕಾಲುವೆಗಳ ಸಂಖ್ಯೆ 
415.50 ಕಿ.ಮೀ: ಪ್ರಾಥಮಿಕ ಕಾಲುವೆಗಳ ಉದ್ದ 
426.60 ಕಿ.ಮೀ: ಮಧ್ಯಮ ಕಾಲುವೆಗಳ ಉದ್ದ 
1,898.32 ಕೋಟಿ ರೂ.: ಕಾಲುವೆ ದಯುರಸ್ತಿಗೆ ಈವರೆಗೆ ಆಗಿರುವ ವೆಚ್ಚ

* ವೆಂ.ಸುನೀಲ್‌ ಕುಮಾರ್‌

Advertisement

Udayavani is now on Telegram. Click here to join our channel and stay updated with the latest news.

Next