ಚಿಕ್ಕೋಡಿ: ರಾಜ್ಯದ ಗಡಿಗೆ ಹೊಂದಿಕೊಂಡಿರುವ ಮಹಾರಾಷ್ಟ್ರದ ಸಕ್ಕರೆ ಕಾರ್ಖಾನೆಗಳು ಹೆಚ್ಚಿನ ದರ ನೀಡುವುದರಿಂದ ರಾಜ್ಯದ ರೈತರು ಕಬ್ಬನ್ನು ಮಹಾರಾಷ್ಟ್ರ ಸಕ್ಕರೆ ಕಾರ್ಖಾನೆಗಳಿಗೆ ಕಳಿಸುತ್ತಾರೆ. ಆದರೆ ಪ್ರಸಕ್ತ ಹಂಗಾಮಿನಲ್ಲಿ ಮಹಾರಾಷ್ಟ್ರದ ಸಕ್ಕರೆ ಕಾರ್ಖಾನೆಗೆ ರಾಜ್ಯದ ಕಬ್ಬು ಹೋಗದಂತೆ ರಾಜ್ಯ ಸರ್ಕಾರ ನಿರ್ಬಂಧ ಹೇರಬಹುದೇ? ಎಂಬ ಚಿಂತೆ ರೈತರನ್ನು ಕಾಡುತ್ತಿದೆ. ಕಳೆದ ಆಗಸ್ಟ್ ತಿಂಗಳಲ್ಲಿ ಉಂಟಾದ ಭೀಕರ ಪ್ರವಾಹ ಮತ್ತು ಅತೀಯಾದ ಮಳೆಯಿಂದ ರಾಜ್ಯದ ಗಡಿ ಭಾಗದ ಲಕ್ಷಾಂತರ ಹೆಕ್ಟೇರ್ ಕಬ್ಬು ಬೆಳೆ ನಾಶವಾಗಿದೆ. ಇದರಿಂದ ಇತ್ತೀಚೆಗೆ ಬೆಳಗಾವಿಯಲ್ಲಿ ಸಕ್ಕರೆ ಸಚಿವ ಸಿ.ಟಿ.ರವಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಮಹಾರಾಷ್ಟ್ರ ಸಕ್ಕರೆ ಕಾರ್ಖಾನೆಗೆ ಕಬ್ಬು ಪೂರೈಕೆ ನಿರ್ಬಂಧಿ ಸುವ ಕುರಿತು ಸುದೀರ್ಘ ಚರ್ಚೆಯಾಗಿತ್ತು.
ಆದರೆ ಪ್ರಸಕ್ತ ಹಂಗಾಮಿನಲ್ಲಿ ಮಹಾರಾಷ್ಟ್ರದ ಸಕ್ಕರೆ ಕಾರ್ಖಾನೆಗಳಿಗೆ ರಾಜ್ಯದ ಕಬ್ಬು ಹೋಗದಂತೆ ಸಕ್ಕರೆ ಉದ್ಯಮಿಗಳು ಸರ್ಕಾರದ ಮೇಲೆ ಒತ್ತಡ ಹಾಕುತ್ತಿರುವುದು ರೈತರ ಸಿಟ್ಟಿಗೆ ಕಾರಣವಾಗಿದೆ. ಮಹಾರಾಷ್ಟ್ರದ ಸಕ್ಕರೆ ಕಾರ್ಖಾನೆಗಳಿಗೆ ಕಬ್ಬು ಸರಬರಾಜು ಮಾಡಲು ನಿರ್ಬಂಧ ಹೇರುವ ಬದಲು ಮಹಾರಾಷ್ಟ್ರ ಮಾದರಿಯಲ್ಲಿ ಕಬ್ಬಿಗೆ ಬೆಲೆ ನೀಡಬೇಕೆಂದು ರೈತ ಸಂಘಟನೆಗಳ ಒತ್ತಾಯವಾಗಿದೆ.
ಚಿಕ್ಕೋಡಿ ಉಪವಿಭಾಗ ವ್ಯಾಪ್ತಿಯ ನಿಪ್ಪಾಣಿ, ಚಿಕ್ಕೋಡಿ, ಕಾಗವಾಡ, ರಾಯಬಾಗ ಮತ್ತು ಅಥಣಿ ತಾಲೂಕಿನ ರೈತರು ಮಹಾರಾಷ್ಟ್ರದ ಸಕ್ಕರೆ ಕಾರ್ಖಾನೆಗಳಿಗೆ ಪ್ರತಿ ವರ್ಷ ಕಬ್ಬು ಪೂರೈಕೆ ಮಾಡುವುದು ಸರ್ವೇ ಸಾಮಾನ್ಯ. ಅಲ್ಲಿನ ಬಹುತೇಕ ಸಕ್ಕರೆ ಕಾರ್ಖಾನೆಗಳು ರಾಜ್ಯದ ಸಕ್ಕರೆ ಕಾರ್ಖಾನೆಗಳಿಗಿಂತ ಪ್ರತಿ ಟನ್ ಕಬ್ಬಿಗೆ 400 ರಿಂದ 500 ರೂ. ಹೆಚ್ಚುವರಿ ಬೆಲೆ ನೀಡುತ್ತವೆ. ಪ್ರಸಕ್ತ ಹಂಗಾಮಿನಲ್ಲಿ ಅತಿವೃಷ್ಟಿ ಮತ್ತು ಅನಾವೃಷ್ಟಿಯಿಂದ ಲಕ್ಷಾಂತರ ಹೆಕ್ಟೇರ್ ಕಬ್ಬು ಬೆಳೆ ನಾಶವಾಗಿ ಹೋಗಿದೆ. ಚೆನ್ನಾಗಿರುವ ಕಬ್ಬು ಮಹಾರಾಷ್ಟ್ರ ಸಕ್ಕರೆ ಕಾರ್ಖಾನೆಗೆ ಪೂರೈಕೆಯಾದರೇ ರಾಜ್ಯದ ಸಕ್ಕರೆ ಕಾರ್ಖಾನೆಗಳು ಸಂಕಷ್ಟಕ್ಕೆ ಒಳಗಾಗುತ್ತವೆ. ಹೀಗಾಗಿ ಮಹಾರಾಷ್ಟ್ರ ಸಕ್ಕರೆ ಕಾರ್ಖಾನೆಗೆ ಕಬ್ಬು ಪೂರೈಕೆಯನ್ನು ರಾಜ್ಯ ಸರ್ಕಾರ ನಿಲ್ಲಿಸಬಹುದು ಎಂಬ ಆತಂಕ ರೈತರಲ್ಲಿ ಮೂಡಿದೆ.
ರಾಜ್ಯದ ಗಡಿ ಭಾಗ ಮತ್ತು ಮಹಾರಾಷ್ಟ್ರದ ಬಹುತೇಕ ಸಕ್ಕರೆ ಕಾರ್ಖಾನೆಗಳು ಬಹುರಾಜ್ಯ ಕಾಯ್ದೆಯಡಿ ನೋಂದಾಯಿತವಾಗಿವೆ. ಕಾರ್ಖಾನೆಯ ಸದಸ್ಯತ್ವ ಹೊಂದಿದ್ದ ರೈತರಿಗೆ ಯಾವುದೇ ರೀತಿ ತೊಂದರೆಯಾಗದೇ ಇರಬಹುದು. ಆದರೆ ಸದಸ್ಯತ್ವ ಹೊಂದದೇ ಇರುವ ರೈತರಿಗೆ ತೊಂದರೆಯಾಗಿ ಸಂಕಷ್ಟ ಅನುಭವಿಸಬೇಕಾಗುತ್ತದೆ. ರಾಜ್ಯದ ಗಡಿ ಭಾಗದ ಶೇ.50ರಷ್ಟು ಕಬ್ಬು ಮಹಾರಾಷ್ಟ್ರದ ಸಕ್ಕರೆ ಕಾರ್ಖಾನೆಗೆ ಪೂರೈಕೆ ಆಗುವುದರಿಂದ ರಾಜ್ಯ ಸರ್ಕಾರ ಈ ನಿರ್ಧಾರ ಕೈಗೊಳ್ಳಬಹುದು ಎನ್ನಲಾಗುತ್ತಿದೆ.
ಈ ವರ್ಷದ ಬೇಸಿಗೆಯಲ್ಲಿ ಕೃಷ್ಣಾ, ದೂಧಗಂಗಾ ಮತ್ತು ವೇಧಗಂಗಾ ನದಿಗಳು ನೀರಿಲ್ಲದೇ ಬತ್ತಿ ಹೋಗಿ ಎರಡು ತಿಂಗಳುಗಳ ಕಾಲ ರೈತರು ಭಾರಿ ಸಂಕಷ್ಟ ಅನುಭವಿಸಿದ್ದರು. ನಂತರ ಮುಂಗಾರು ಹಂಗಾಮಿನಲ್ಲಿ ಮಳೆ ಆರಂಭವಾಗಿ ಆಗಸ್ಟ್ ತಿಂಗಳಲ್ಲಿ ನದಿಗಳ ಭೀಕರ ಪ್ರವಾಹ ಉಂಟಾಗಿ ಚಿಕ್ಕೋಡಿ ಉಪವಿಭಾಗದ 1.5 ಲಕ್ಷ ಹೆಕ್ಟೇರ್ ಕಬ್ಬು ಬೆಳೆ ನಾಶವಾಗಿದೆ. ಇದರಿಂದ ಬೇಸಿಗೆಯಲ್ಲಿ ನೀರು ಇಲ್ಲದೆ ಸಂಕಷ್ಟ ಅನುಭವಿಸಿದ ರೈತ ಮತ್ತೆ ನೆರೆಯಿಂದ ಸಂಕಷ್ಟಕ್ಕೆ ಒಳಗಾಗಿದ್ದಾನೆ. ಜಮೀನುಗಳಲ್ಲಿ ಈಗಿರುವ ಕಬ್ಬಿಗೆ ಯೋಗ್ಯಬೆಲೆ ಕೊಡುವ ಕಾರ್ಖಾನೆಗೆ ರೈತರು ಕಬ್ಬು ಕಳಿಸುತ್ತಾರೆ. ಆದರೆ ಮಹಾರಾಷ್ಟ್ರ ಸಕ್ಕರೆ ಕಾರ್ಖಾನೆಗಳಿಗೆ ಕಬ್ಬು ಕಳಿಸದಂತೆ ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರುತ್ತಿರುವ ಕ್ರಮ ಖಂಡನೀಯ ಎಂದು ಸ್ವಾಭಿಮಾನಿ ಶೇತಕರಿ ಸಂಘಟನೆ ಮುಖಂಡ ರಾಜು ಕಿಚಡೆ ಅಸಮಾಧಾನ ವ್ಯಕ್ತಪಡಿಸಿದರು.
-ಮಹಾದೇವ ಪೂಜೇರಿ