Advertisement

ಅಪಾಯಕ್ಕೆ ಎದೆಯೊಡ್ಡಿ ವಕ್ಫ್ ವರದಿ ಮಾಡಿದ್ದು ನಾನು, ಅದರಿಂದ ಹಣ ಮಾಡಿದ್ದು ಅನೇಕರು!

01:49 AM Dec 18, 2024 | Team Udayavani |

ನಾನು ಅಪಾಯ ಮೈಮೇಲೆ ಎಳೆದುಕೊಂಡು ವಕ್ಫ್ ಭೂ ಕಬಳಿಕೆಯ ಕುರಿತು ಅಧ್ಯಯನ ಮಾಡಿ ವರದಿ ಮಾಡಿದ್ದೆ. ನನ್ನ ವರದಿಯನ್ನು ಮುಂದಿರಿಸಿಕೊಂಡು ಸರಕಾರದಲ್ಲಿದ್ದ ಅನೇಕರು ಹಣ ಮಾಡಿದ್ದಾರೆ. ಈಗಲೂ ಸಿಬಿಐಗೆ ಈ ಕುರಿತು ತನಿಖೆ ವಹಿಸಿದರೆ ವಕ್ಫ್ ಆಸ್ತಿ ವಿಷಯ ಸಂಬಂಧ ಇರುವ ಎಲ್ಲಾ ಗೊಂದಲ ಪರಿಹಾರವಾಗಬಹುದು, ಅದನ್ನು ಕೇಂದ್ರ ಸರಕಾರ ಕೂಡಲೇ ಮಾಡಬೇಕು. ಇದು ಸದ್ಯ ಸುದ್ದಿಯಲ್ಲಿರುವ ರಾಜ್ಯ ಅಲ್ಪಸಂಖ್ಯಾಕ ಆಯೋಗ ಮಾಜಿ ಅಧ್ಯಕ್ಷ ಅನ್ವರ್‌ ಮಾಣಿಪ್ಪಾಡಿ ಅವರ ಹೇಳಿಕೆ. ವಕ್ಫ್ ಆಸ್ತಿ ಹಗರಣದ ಪ್ರಕರಣ ಮುಚ್ಚಿ ಹಾಕುವುದಕ್ಕಾಗಿ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ಮಾಣಿಪ್ಪಾಡಿ ಅವರಿಗೆ 150 ಕೋಟಿ ರೂ. ಆಮಿಷವೊಡ್ಡಿದ್ದರು ಎನ್ನುವುದು ಕಾಂಗ್ರೆಸ್‌ನ ಆರೋಪ. ಅದಕ್ಕೆ ವಿಜಯೇಂದ್ರ ತಿರುಗೇಟು ನೀಡಿದ್ದಾರೆ. ಈ ವಿಷಯವನ್ನೇ ಸಿಎಂ ಸಿದ್ದರಾಮಯ್ಯ ದಾಳವಾಗಿ ಬಳಸಿಕೊಂಡಿರುವ ಹಿನ್ನೆಲೆಯಲ್ಲಿ ಉದಯವಾಣಿಯ ಜತೆ “ನೇರಾ ನೇರ’ ಮಾತನಾಡಿದ್ದಾರೆ ಅನ್ವರ್‌ ಮಾಣಿಪ್ಪಾಡಿ.

Advertisement

ವಕ್ಫ್ ವಿಷಯ ಈಗ ಭುಗಿಲೇಳಲು ಏನು ಕಾರಣ?
ಕೆಲವು ತಿಂಗಳ ಹಿಂದೆ ವಕ್ಫ್ ಮಸೂದೆ ಕುರಿತ ಜಂಟಿ ಸಂಸದೀಯ ಸಮಿತಿಯಲ್ಲಿ ನಾನು ವರದಿ ಮಂಡಿಸಿದ್ದೆ, ಇದು ಎಲ್ಲರಿಗೂ ತಿಳಿದದ್ದೇ. ಆ ಸಂದರ್ಭದಲ್ಲಿ ಮಲ್ಲಿಕಾರ್ಜುನ ಖರ್ಗೆಯವರ ಹೆಸರು ಹೇಳಬಾ­ರದು ಎಂದು ವಿಪಕ್ಷಗಳ ಸಂಸದರು ಒತ್ತಡ ಹೇರಿದ್ದರೂ, ಮುಗಿಬಿದ್ದರೂ ನಾನು ಹಿಂಜರಿಯಲಿಲ್ಲ. ಅದೇ ಇಂದಿನ ಕಾಂಗ್ರೆಸ್‌ನವರ ವರ್ತನೆಗೆ ಕಾರಣ ಎನ್ನಿಸುತ್ತದೆ. ಹಾಗಾಗಿ ಈಗ ಹಳೆ ವೀಡಿಯೋ ತೆಗೆದು ಕಾಂಗ್ರೆಸ್‌ನವರು ಅಪಪ್ರಚಾರದಲ್ಲಿ ತೊಡಗಿದ್ದಾರೆ.

ಹಾಗಾದರೆ ವೀಡಿಯೋದಲ್ಲಿರುವ ನೈಜ ಸಂಗತಿ ಏನು?
ವಿಜಯೇಂದ್ರ ನನ್ನನ್ನು ಭೇಟಿಯಾಗಿದ್ದು ನಿಜ. ಇದು 4 ವರ್ಷಗಳ ಹಿಂದಿನ ವಿಷಯ, ಈಗಿನದ್ದಲ್ಲ, ಇತ್ತೀಚಿನದ್ದೂ ಅಲ್ಲ. ಆಗ ನಾನೂ ತೀರಾ ಸೋತಿದ್ದ ಸಮಯ. ಮಾಣಿಪ್ಪಾಡಿಯವರೇ, ಕಷ್ಟದಲ್ಲಿದ್ದೀರಿ, ಸುಮ್ಮ ನಿದ್ದು ಬಿಡಿ, ಬೇಕಾದರೆ ಸಂಖ್ಯೆ ಹೇಳಿಬಿಡಿ ಎಂದರು. ಅದನ್ನು ಕೇಳಿದ ನನಗೆ ಸಿಟ್ಟು ಬಂದಿತು. ನೀವೇನು ಹೇಳ್ತಾ ಇದ್ದೀರಿ? ಏನು ಎಂದು ಕೂಗಾಡಿದೆ. ಹಾಗಾದರೆ ಬೇಡ, ಕೇಸ್‌ಟೈಟ್‌ ಮಾಡೋಣ ಎಂದು ಹೇಳಿ ಹೊರಟು ಹೋದರು. ನಾನು ತುಸು ದುಡುಕಿದೆ. ಪತ್ರಿಕಾಗೋಷ್ಠಿ ಕರೆದು ಘಟಿಸಿದ ವಿಷಯವನ್ನು ಹೇಳಿಬಿಟ್ಟೆ. ಆದರೆ ಬಳಿಕ ಯಡಿಯೂರಪ್ಪ ವರದಿಯನ್ನು ಅಧಿವೇಶನದಲ್ಲಿ ಮಂಡಿಸಲು ಅವಕಾಶ ಕಲ್ಪಿಸಿದರು. ನಾನು ಆಮಿಷಗಳಿಗೆ ಮಣಿಯಬಹುದೇ ಎಂದು ಪರೀಕ್ಷಿಸುವುದು ಅವರ ಉದ್ದೇಶವಾಗಿತ್ತು ಎಂಬುದು ಬಳಿಕ ನನಗೆ ತಿಳಿಯಿತು. ವಾಸ್ತವವಾಗಿ ವೀಡಿಯೋದ ಹಿಂದೆ ಇರುವ ವಿಷಯ ಇಷ್ಟೇ.

ಹಾಗಿದ್ದರೆ, ಈ ವಕ್ಫ್ ವರದಿಯಿಂದ ನಿಜಕ್ಕೂ ಲಾಭ ಆದದ್ದು ಯಾರಿಗೆ?
ಈ ವರದಿ ಮಂಡನೆಯಿಂದ ಬಹಳ ಮಂದಿ ಲಾಭ ಪಡೆದಿದ್ದಾರೆ, ಹಣವನ್ನೂ ಮಾಡಿದ್ದಾರೆ. ಹಿಂದಿನ ಬಾರಿ ಸಿದ್ದರಾಮಯ್ಯ ಸಿಎಂ ಆದಾಗ ಎರಡೂವರೆ ವರ್ಷದ ಬಳಿಕ ಮಲ್ಲಿಕಾರ್ಜುನ ಖರ್ಗೆ ಅವರು ಸಿಎಂ ಆಗುವುದು ಎಂಬ ಒಪ್ಪಂದವಾಗಿತ್ತು. ಹೀಗಿರುವಾಗ ಎರಡು ವರ್ಷ ಕಳೆದು, ಅಧಿಕಾರ ಹಸ್ತಾಂತರಕ್ಕೆ ಆರು ತಿಂಗಳು ಇರುವಾಗ ಸಿದ್ದರಾಮಯ್ಯ ಅವರು ಖರ್ಗೆಯವರನ್ನು ತಮ್ಮ ಮನೆಗೆ ಉಪಾಹಾರಕ್ಕೆ ಆಹ್ವಾನಿಸಿದ್ದರು. ಎಲ್ಲವೂ ಮುಗಿದು ಸಿಎಂ ಮನೆ ಯಿಂದ ಹೊರಗೆ ಹೋಗುವಾಗ ಖರ್ಗೆಯವರು ನಾನು ಸಿಎಂ ಸ್ಥಾನಕ್ಕೆ ಆಕಾಂಕ್ಷಿಯಲ್ಲ, ಸಿದ್ದರಾಮಯ್ಯನವರೇ ಮುಂದುವರಿಯು ತ್ತಾರೆ ಎಂದರು. ಈ ತಿರುವಿಗೆ ಕಾರಣವೇನಿರಬಹುದು ಎನ್ನುವುದನ್ನು ನೀವೇ ಊಹಿಸಿ.

ಹಾಗಾದರೆ ಈಗ ಕಾಂಗ್ರೆಸ್‌ ಇದರಿಂದ ಲಾಭ ಪಡೆಯಲು ಯತ್ನಿಸುತ್ತಿದೆಯೇ?
ನೋಡಿ, ಈಗ ಈ ವರದಿ ಸಂಬಂಧ ಬಿಜೆಪಿಯವರು ನನಗೆ ಆಮಿಷವೊ­ಡ್ಡಿ­ದರು ಎಂದಿಟ್ಟುಕೊಳ್ಳಿ. ಅದರಿಂದ ಅವರಿಗೇನು ಲಾಭ ಆಗಬೇಕಿದೆ? ಅದರಲ್ಲಿ ಕಾಂಗ್ರೆಸ್‌ನವರ ಕೆಲವು ಹೆಸರುಗಳು ವರದಿಯಲ್ಲಿದೆ. ಇನ್ನು ಕೆಲವರು ಜೆಡಿಎಸ್‌ನಲ್ಲಿದ್ದು ಈಗ ಕಾಂಗ್ರೆಸ್‌ ಸೇರಿದವರ ಹೆಸರುಗಳೂ ಇವೆ. ವಾಸ್ತವ ಹೀಗಿರುವಾಗ ಕಾಂಗ್ರೆಸ್‌ನವರು ಕೇವಲ ವಿಷಾಯಂತರ ಮಾಡಲು ಹೀಗೆಲ್ಲ ಅಪಪ್ರಚಾರದಲ್ಲಿ ತೊಡಗಿದ್ದಾರೆ. ಇಡೀ ವಿಷಯ­ವನ್ನು ರಾಜಕೀಯಗೊಳಿಸಲು ಪ್ರಯತ್ನಿಸುತ್ತಿದ್ದಾರೆ. ಅದನ್ನು ಬಿಟ್ಟರೆ ಬೇರೇನೂ ಇಲ್ಲ.

Advertisement

ವರದಿ ಕುರಿತು ನಿಮ್ಮದೇ ಸರಕಾರ ನಿರ್ಲಕ್ಷé ವಹಿಸಿತ್ತು ಎಂದು ನಿಮಗೆ ಅನ್ನಿಸಿದೆಯೇ?
ನಾನು ವರದಿಯನ್ನು ಸಲ್ಲಿಸುವಾಗ ಡಿ.ವಿ.ಸದಾನಂದ ಗೌಡ ಅವರು ಸಿಎಂ ಆಗಿದ್ದರು. ಗಂಭೀರವಾದ ತನಿಖೆ ನಡೆಸಲಾಗುವುದು, ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದರು. ಆದರೆ ಅನಂತರ ಅವರು ತನಿಖೆಗೆ ನೇಮಿಸಿದ ಸಮಿತಿಯಲ್ಲಿ ನಾನು ಯಾರ ಹೆಸರನ್ನು ವರದಿಯಲ್ಲಿ ಹೇಳಿದ್ದೆನೋ ಅದೇ ಹೆಸರುಗಳಿದ್ದವು (ಝಮೀರ್‌ ಪಾಶಾ, ಸನಾವುಲ್ಲಾ ಮೊದಲಾದವರು). ನಾನು ಇದನ್ನು ಕಂಡು ಕಂಗಾಲಾದೆ. ಆರೆಸ್ಸೆಸ್‌ ನಾಯಕರನ್ನು ಭೇಟಿಯಾಗಿ ಈ ವಿಷಯವನ್ನು ತಿಳಿಸಿದೆ. ಆಗ ಅವರು ಡಿ.ವಿ.ಸದಾನಂದಗೌಡರನ್ನು ಕರೆದು, ಕೂಡಲೇ ಆದೇಶ ಹಿಂಪಡೆಯಲು ಸೂಚಿಸಿದರು. ಬಳಿಕ ಆದೇಶವನ್ನು ಹಿಂಪಡೆಯಲಾಯಿತು. ಇಡೀ ಪ್ರಕರಣವನ್ನು ಲೋಕಾಯುಕ್ತ ತನಿಖೆಗೆ ಕೊಡಲಾಯಿತು.

ವರದಿ ವಿಧಾನಸಭೆಯಲ್ಲಿ ಮಂಡನೆಯಾಗಿದ್ದು ಹೇಗೆ?
ಜಗದೀಶ್‌ ಶೆಟ್ಟರ್‌ ಸಿಎಂ ಆಗಿದ್ದಾಗ ಅಧಿವೇಶನದಲ್ಲಿ ವರದಿ ಮಂಡಿಸಲು ತೀರ್ಮಾನಿಸಲಾಗಿತ್ತು. ಅಡ್ವೊಕೇಟ್‌ ಜನರಲ್‌ ಅವರ ಒಪ್ಪಿಗೆಯನ್ನೂ ಪಡೆಯಲಾಗಿತ್ತು. ಆದರೆ ಕಾಂಗ್ರೆಸ್‌ ಅದಕ್ಕೆ ತೀವ್ರ ಪ್ರತಿರೋಧವೊಡ್ಡಿತು. ಹೆಚ್ಚಿನ ಕಾನೂನು ಪರಾಮರ್ಶೆ ಆಗಬೇಕು ಎಂದು ಆಗ್ರಹಿಸಿದ ಕಾರಣ ಮಂಡನೆಯಾಗಲಿಲ್ಲ. ಬಳಿಕ ಕ್ಯಾಬಿನೆಟ್‌ನಲ್ಲಿ ಮಂಡನೆಗೆ ಸರಕಾರದ ಅವಧಿ ಇದ್ದಿದ್ದು ಕೇವಲ 3 ತಿಂಗಳು. ಕೊನೆಗೂ ಕ್ಯಾಬಿನೆಟ್‌ನಲ್ಲಿ ವರದಿ ಮಂಡಿಸಿ ಅನುಮೋದನೆ ಪಡೆಯಲಾಯಿತು. ಗೆಜೆಟ್‌ನಲ್ಲೂ ಪ್ರಕಟವಾ­ಯಿತು. ಅನಂತರ ಚುನಾವಣೆಯಲ್ಲಿ ಸೋತ ಕಾರಣ ಅನುಷ್ಠಾನಕ್ಕೆ ಹಿನ್ನಡೆಯಾಯಿತು. ರಾಜ್ಯ ಹೈಕೋರ್ಟ್‌ನ ಮೊರೆ ಹೋದೆ. ಅಲ್ಲಿ, ಹೈಕೋರ್ಟ್‌ ದ್ವಿಸದಸ್ಯ ಪೀಠ ಹಾಗೂ ಸುಪ್ರೀಂ ಕೋರ್ಟ್‌ನಲ್ಲೂ ನಮ್ಮ ಪರವಾಗಿ ತೀರ್ಪು ಬಂದಿತು. ಆದರೂ ಮಂಡನೆಯಾಗಿರಲಿಲ್ಲ. ಮತ್ತೆ ನಮ್ಮ ಸರಕಾರ ಬಂದಿತು. ಆ ವೇಳೆ ಸುಪ್ರೀಂ ಕೋರ್ಟ್‌ ಆದೇಶ ನೀಡಿದ್ದ ನ್ಯಾಯಮೂರ್ತಿಗಳಿಗೆ ಪತ್ರ ಬರೆದು ಯಾವ ರೀತಿ ಆದೇಶ ಪಾಲನೆಯಾಗಿಲ್ಲ ಎಂದು ವಿವರಿಸಿದೆ. ಅದಕ್ಕೆ ಅವರು ಉತ್ತರ ಬರೆದು ಆದೇಶ ಪಾಲನೆಯಾಗದಿದ್ದರೆ ಮುಖ್ಯ ಕಾರ್ಯದರ್ಶಿ ಹೊಣೆ ಮಾಡುತ್ತೇವೆ ಎಂದರು. ಇದರ ಬಿಸಿ ಮುಖ್ಯಕಾರ್ಯದರ್ಶಿಯವರಿಗೆ ತಟ್ಟಿತು, ಕೊನೆಗೂ ಸರಕಾರ 2020 ರಲ್ಲಿ ವರದಿ ಮಂಡಿಸಿತು.

ವಕ್ಫ್ ಹಗರಣದ ವಿಷಯದಲ್ಲಿ ಮುಂದೇನು?
ವಾಸ್ತವವಾಗಿ ರಾಜ್ಯದಲ್ಲಿ 54 ಸಾವಿರ ಎಕ್ರೆ ವಕ್ಫ್ ಆಸ್ತಿ ಇದ್ದು ಕಬಳಿಕೆ ಬಳಿಕ ಉಳಿದದ್ದು 23,000 ಮಾತ್ರ. ಸಿದ್ದರಾಮಯ್ಯ ಸರಕಾರ 1.60 ಸಾವಿರ ಎಕ್ರೆಗೆ ನೋಟಿಸ್‌ ಕೊಟ್ಟಿದ್ದು ಹೇಗೆ? ಒಂದುವೇಳೆ ಅದು ಸರಿಯಾದುದೇ ಆಗಿದ್ದರೆ ಕೊಟ್ಟ ನೋಟಿಸ್‌ನ್ನು ಹಿಂಪಡೆದದ್ದು ಯಾಕೆ? ಇದಕ್ಕೆಲ್ಲ ಪರಿಹಾರ ಸಿಗಬೇಕೆಂದರೆ ಇಡೀ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು. ಆಗ ಸಮಸ್ಯೆಗಳು ಇತ್ಯರ್ಥ ವಾಗಬಹುದು. ಎಷ್ಟು ಜಮೀನು ರೈತರದ್ದು, ಎಷ್ಟು ವಕ್ಫ್ ಬೋರ್ಡ್‌ ನದ್ದು ಎಂಬ ಅಂಶವೂ ಸ್ಪಷ್ಟವಾಗುತ್ತದೆ. ಎಲ್ಲ ಗೊಂದಲಗಳು ಬಗೆಹರಿಯುತ್ತವೆ. “ಹಾಲಿಗೆ ಹಾಲು ನೀರಿಗೆ ನೀರು’ ಎರಡೂ ತಿಳಿಯುತ್ತದೆ. ಈಗ ಇವರು ನೋಟಿಸ್‌ ಕೊಟ್ಟು ಎರಡು ಕೋಮುಗಳ ಮಧ್ಯೆ ಕಿಡಿ ಹಚ್ಚಿದ್ದಾರೆ ಅಷ್ಟೇ. ಮತ್ತೇನೂ ಮಾಡಿಲ್ಲ.

ಸಿಬಿಐ ತನಿಖೆಗೆ ಸರಕಾರ ಒಂದು ವೇಳೆ ಹಸ್ತಾಂತರ ಮಾಡದೇ ಇದ್ದರೆ, ಮುಂದಿನ ಹೆಜ್ಜೆ ಏನು?
ಕೊಡದಿದ್ದರೆ ಇರುವುದು ಮುಂದಿನ ದಾರಿ ಒಂದೇ. ಕೇಂದ್ರ ಸರಕಾರವೂ ಪ್ರಕರಣದ ಗಂಭೀರತೆಯನ್ನು ಅರಿತು ಸ್ವಯಂ ಆಗಿ ತನಿಖೆಗೆ ಕೈಗೆತ್ತಿಕೊಳ್ಳಬೇಕು. ಸಿಬಿಐ ಗೆ ವಹಿಸಬೇಕು. ಅದಕ್ಕೆ ನಾನೂ ಪ್ರಯತ್ನಿಸು­ತ್ತೇನೆ. ಈ ಹಗರಣವೊಂದು ಟಿಪ್‌ ಆಫ್‌ ದಿ ಐಸ್‌ಬರ್ಗ್‌. ಇದರ ಆಳ, ಉದ್ದ ಇನ್ನೂ ಇದೆ. ಅದನ್ನು ತಿಳಿಯಲು ಸಿಬಿಐ ತನಿಖೆ ಅನಿವಾರ್ಯ.

ವಕ್ಫ್ ಆಸ್ತಿ ಅಕ್ರಮ ಅಧ್ಯಯನ ಮಾಡುವ ಆಲೋಚನೆ ಯಾಕೆ ಬಂತು? ಅದರ ಹಿಂದಿನ ಕಾರಣವೇನು?
ನಾನು ಅಲ್ಪಸಂಖ್ಯಾಕ ಆಯೋಗದ ಅಧ್ಯಕ್ಷನಾದ ಮೇಲೆ ಎಲ್ಲ ಜಿಲ್ಲೆಗ­ಳಲ್ಲೂ ಸಭೆ ನಡೆಸಿ ಜನರ ಸಮಸ್ಯೆ ಆಲಿಸುತ್ತಿದ್ದೆ. ಅದರಂತೆಯೇ ಒಮ್ಮೆ ಬೀದರ್‌ನಲ್ಲಿ ನಡೆದ ಸಭೆಯಲ್ಲಿ ಸಾರ್ವಜನಿಕ ರೊ ಬ್ಬರು ಅಲ್ಲಿನ ಖಬರಸ್ಥಾನದ ಭೂಮಿ ಬಹಳಷ್ಟು ಮಂದಿ ನುಂಗಿದ್ದಾರೆ ಎಂದು ಆರೋಪಿಸಿದರು. ಕೂಡಲೇ ನಾನು ಮೂಲ ಮಾಹಿತಿ ಪಡೆದು, ಸ್ಥಳಕ್ಕೆ ಭೇಟಿ ನೀಡಿದೆ. ಆಗ ಅವರು ಹೇಳಿದ್ದು ನಿಜ ಎನ್ನುವುದು ಗೊತ್ತಾಯಿತು. ಹಾಗಾ ದರೆ ಬೇರೆಡೆಯೂ ಇಂಥ ಸಮಸ್ಯೆ ಇರ ಬಹುದೇ ಎನ್ನಿಸಿತು. ಮತ್ತೆ ಒಂದು ವಾರದ ಬಳಿಕ ಸಭೆ ಮಾಡಿದೆ. ಆಗ ನೂರಾರು ಮಂದಿ ಇಂಥ ಆರೋಪ ಗಳೊಂದಿಗೆ ಹಾಜರಾದರು. ಇವೆಲ್ಲವೂ ಗಂಭೀರ ವಿಷಯ ಎನ್ನಿಸಿತು. ಈ ಹಿನ್ನೆಲೆ ಯಲ್ಲಿ ವಕ್ಫ್ ಆಸ್ತಿ ಅಧ್ಯಯನ ಕೈಗೊಳ್ಳಲು ತೀರ್ಮಾನಿಸಲಾಯಿತು.

ಉದಯವಾಣಿ ಸಂದರ್ಶನ: ವೇಣು ವಿನೋದ್‌ ಕೆ.ಎಸ್‌.

Advertisement

Udayavani is now on Telegram. Click here to join our channel and stay updated with the latest news.

Next