Advertisement

Television: ಖ್ಯಾತ ನಟಿ ಬಳಿಕ, ಮತ್ತೋರ್ವ ನಟ ನಿಧನ; 3 ದಿನದಲ್ಲಿ ಮೂರು ಸಾವು ಕಂಡ ಕಿರುತೆರೆ

10:36 AM May 24, 2023 | Team Udayavani |

ಮುಂಬಯಿ: ಕಿರುತೆರೆ ರಂಗಕ್ಕೆ ಇಂದು ಕರಾಳ ದಿನ. ನಟಿ ವೈಭವಿ ಉಪಾಧ್ಯಾಯ ಅಪಘಾತದಲ್ಲಿ ಮೃತಪಟ್ಟ ಸುದ್ದಿ ಕೇಳಿ ಆಘಾತದಲ್ಲಿದ್ದ ಜನರಿಗೆ ಇದೀಗ ಮತ್ತೋರ್ವ ಖ್ಯಾತ ನಟ ಮೃತಪಟ್ಟಿರುವ ಸುದ್ದಿ ಮತ್ತಷ್ಟು ಆಘಾತವನ್ನೀಡಿದೆ.

Advertisement

ಟಿವಿ ಲೋಕದಲ್ಲಿ ಜನಪ್ರಿಯತೆಯನ್ನು ಪಡೆದುಕೊಂಡಿದ್ದ ನಿತೇಶ್ ಪಾಂಡೆ (51) ಹೃದಯ ಸ್ತಂಭನ ಉಂಟಾಗಿ ಮುಂಬಯಿನಲ್ಲಿ ನಿಧನರಾಗಿದ್ದಾರೆ.

1990 ರಲ್ಲಿ ರಂಗಭೂಮಿಯಲ್ಲಿ ನಟಿಸುವ ಮೂಲಕ ನಟನಾ ಲೋಕಕ್ಕೆ ಕಾಲಿಟ್ಟ ಅವರು 1995 ರಲ್ಲಿ ಬಂದ ʼತೇಜಸ್‌ʼ ಸಿನಿಮಾದಲ್ಲಿ ಪತ್ತೇದಾರಿ ಪಾತ್ರವೊಂದರಲ್ಲಿ ನಟಿಸಿ ಗಮನ ಸೆಳೆದಿದ್ದರು. ಆ ಬಳಿಕ ಕಿರುತೆರೆಯಲ್ಲಿ ಸಾಲು ಸಾಲಾಗಿ ಧಾರಾವಾಹಿಗಳಲ್ಲಿ ನಟಿಸಿದರು. ʼಮಂಜಿಲೀನ್ ಅಪ್ನಿ ಅಪ್ನಿʼ, ʼಅಸ್ತಿತ್ವ ಏಕ್ ಪ್ರೇಮ್ ಕಹಾನಿʼ, ʼಸಾಯಾ, ಜುಸ್ತಜೂʼ ದುರ್ಗೇಶ್ ನಂದಿನಿ ಮುಂತಾದ ಸೀರಿಯಲ್‌ ಗಳಲ್ಲಿ ನಟಿಸಿದ್ದಾರೆ.

ʼಓಂ ಶಾಂತಿ ಓಂʼ ,ʼಬದಾಯಿ ದೋʼ ಮುಂತಾದ ಸಿನಿಮಾದಲ್ಲೂ ಅವರು ನಟಿಸಿದ್ದಾರೆ. ಡ್ರೀಮ್ ಕ್ಯಾಸಲ್ ಪ್ರೊಡಕ್ಷನ್ಸ್ ಎಂಬ ಹೆಸರಿನ ಸ್ವತಂತ್ರ ನಿರ್ಮಾಣ ಸಂಸ್ಥೆಯನ್ನೂ ಅವರು ನಡೆಸುತ್ತಿದ್ದರು.

ʼಖೋಸ್ಲಾ ಕಾ ಘೋಸ್ಲಾʼದಲ್ಲಿನ ಅವರ ಅಭಿನಯ ಅಪಾರ ಜನರನ್ನು ರಂಜಿಸಿತ್ತು. ʼಅನುಪಮಾʼ ಮತ್ತು ʼಪ್ಯಾರ್ ಕಾ ದರ್ದ್ ಹೈ ಮೀಟಾ ಮೀಟಾ ಪ್ಯಾರಾ ಪ್ಯಾರಾʼ ಧಾರಾವಾಹಿಯಲ್ಲಿ ಇತ್ತೀಚೆಗೆ ಕಾಣಿಸಿಕೊಂಡಿದ್ದರು.

Advertisement

ಉತ್ತರಾಖಂಡದ ಅಲ್ಮೋರಾ ಕುಮಾನ್  ಮೂಲದವರಾದ ಅವರು ಕಳೆದ 25 ವರ್ಷದಿಂದ ಕಿರುತೆರೆಯಲ್ಲಿ ಕೆಲಸ ಮಾಡಿಕೊಂಡಿದ್ದರು.

ಕಿರುತೆರೆ ರಂಗಕ್ಕೆ ಈ ವಾರ ಅತ್ಯಂತ ಕರಾಳ ವಾರ ಎಂದರೆ ತಪ್ಪಾಗದು. ಮೇ. 22 ರಂದು ಆದಿತ್ಯ ಸಿಂಗ್ ರಜಪೂತ್ ವಾಶ್‌ ರೂಮ್‌ ನಲ್ಲಿ ಶವವಾಗಿ ಪತ್ತೆಯಾಗಿದ್ದರು. ಆ ಬಳಿಕ ಅಪಘಾತದಲ್ಲಿ ನಟಿ ವೈಭವಿ ಉಪಾಧ್ಯಾಯ ಮೃತಪಟ್ಟಿದ್ದಾರೆ. ಇದೀಗ ನಟ ನಿತೇಶ್ ಪಾಂಡೆ ನಿಧನರಾಗಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next